೧ |
ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಲೇಸು, ಜನನದ ದಿನಕ್ಕಿಂತ ಮರಣದ ದಿನ ಲೇಸು. |
೨ |
ಔತಣ ನಡೆವ ಮನೆಗೆ ಹೋಗುವುದಕ್ಕಿಂತ ಗೋಳಾಟವಿರುವ ಮನೆಗೆ ಹೋಗುವುದು ಲೇಸು, ಎಲ್ಲಾ ಮಾನವರ ಅಂತಿಮ ಗತಿ ಸಾವೇ. ಜೀವಂತರು ಇದನ್ನು ಮನಸ್ಸಿನಲ್ಲಿಡುವರು. |
೩ |
ನಗೆಗಿಂತ ಅಳುವು ಲೇಸು; ಮುಖದಲ್ಲಿ ದುಃಖ, ಹೃದಯಕ್ಕೆ ಸುಖ.. |
೪ |
ಜ್ಞಾನಿಯ ಹೃದಯ ಶೋಕದ ಆಲಯ; ಮೂಢನ ಹೃದಯ ಹಿಗ್ಗಿನ ನಿಲಯ. |
೫ |
ಅಜ್ಞಾನಿಗಳ ಸ್ತುತಿಗೀತೆಗಿಂತ ಸುಜ್ಞಾನಿಗಳ ಗದರಿಕೆ ಲೇಸು. |
೬ |
ಮೂಢರ ನಗೆಚಾಟಿಕೆ, ಮಡಕೆಯಡಿ ಉರಿವ ಮುಳ್ಳುಕಡ್ಡಿಯ ಚಟಪಟ. ಇದೂ ಸಹ ನಿರರ್ಥಕ. |
೭ |
ದಬ್ಬಾಳಿಕೆ ಬುದ್ಧಿವಂತನನ್ನೂ ಹುಚ್ಚನನ್ನಾಗಿಸುತ್ತದೆ; ಲಂಚಕೋರತನ ಅಂತರಂಗವನ್ನೂ ಕೆಡಿಸುತ್ತದೆ. |
೮ |
ಆದಿಗಿಂತ ಅಂತ್ಯ ಲೇಸು; ಗರ್ವಕ್ಕಿಂತ ತಾಳ್ಮೆ ಲೇಸು. |
೯ |
ತವಕಬೇಡ ಕೋಪಮಾಡಲಿಕ್ಕೆ; ಕೋಪಕ್ಕೆ ನೆಲೆ ಮೂಢನ ಎದೆ. |
೧೦ |
ಹಿಂದಿನ ಕಾಲ ಈ ಕಾಲಕ್ಕಿಂತ ಮೇಲಾದುದಕ್ಕೆ ಕಾರಣ ಕೇಳಬೇಡ; ಇದು ಬುದ್ಧಿವಂತನು ಕೇಳುವ ಪ್ರಶ್ನೆಯಲ್ಲ. |
೧೧ |
ಜ್ಞಾನವು ಆಸ್ತಿಗಿಂತ ಪ್ರಯೋಜನಕರ; ಜೀವಿತರಿಗೆ ಅದು ಎಷ್ಟೋ ಲಾಭಕರ. |
೧೨ |
ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನದ ವೈಶಿಷ್ಟ್ಯವೆಂದರೆ ಅದು ಜ್ಞಾನಿಗೆ ಜೀವದಾಯಕ. |
೧೩ |
ದೇವರ ಸೃಷ್ಟಿಕಾರ್ಯವನ್ನು ಗಮನಿಸು; ಅವರು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವವರು ಯಾರು? |
೧೪ |
ಸುಖದಿನದಲ್ಲಿ ಸಂತೋಷದಿಂದಿರು, ದುಃಖದಿನದಲ್ಲಿ ಆಲೋಚಿಸಿನೋಡು; ಮನುಷ್ಯನು ತನ್ನ ಆಯುಸ್ಸು ಕಳೆದ ಮೇಲೆ ಸಂಭವಿಸುವುದೇನೆಂದು ಗ್ರಹಿಸಲಾಗದಂತೆ ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ. |
೧೫ |
ಸಜ್ಜನನು ಸದ್ಧರ್ಮಿಯಾಗಿ ಜೀವಿಸುತ್ತಾ ಗತಿಸಿಹೋಗುತ್ತಾನೆ; ದುರ್ಜನನಾದರೋ ಅಧರ್ಮದಲ್ಲಿ ಬಹುಕಾಲ ಬದುಕುತ್ತಾನೆ. ಇದನ್ನು ಎಲ್ಲಾ ನನ್ನ ನಿರರ್ಥಕ ಜೀವನದಲ್ಲಿ ಎಷ್ಟೋ ನೋಡಿದ್ದೇನೆ. |
೧೬ |
ಧರ್ಮಿಷ್ಠನಾಗಿ ಬಾಳುವುದರಲ್ಲಿ ಆಗಲಿ, ಜ್ಞಾನಾರ್ಜನೆಯಲ್ಲಾಗಲಿ ಮಿತಿಮೀರಿ ವರ್ತಿಸಬೇಡ; ನಿನ್ನನ್ನು ನೀನೇ ವಿನಾಶಕ್ಕೆ ಗುರಿಮಾಡಿಕೊಳ್ಳಬೇಡ. |
೧೭ |
ದುರ್ನಡತೆಯಲ್ಲೇ ಆಗಲಿ, ಬುದ್ಧಿಹೀನತೆಯಲ್ಲೇ ಆಗಲಿ ಮಿತಿಮೀರಿ ವರ್ತಿಸುವುದು ಸಲ್ಲ. ಕಾಲ ಬರುವ ಮೊದಲೇ ಸಾವಿಗೆ ತುತ್ತಾಗಬೇಡ. |
೧೮ |
ನೀನು ಒಂದನ್ನು ಹಿಡಿದುಕೊಂಡು ಇನ್ನೊಂದನ್ನೂ ಕೈಬಿಡದಿರುವುದು ಒಳಿತು. ದೇವರಲ್ಲಿ ಭಯಭಕ್ತಿಯುಳ್ಳವರು ಇವೆರೆಡರಿಂದಲೂ ಪಾರು. |
೧೯ |
ಹತ್ತು ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ದೃಢತೆಗಿಂತ ಜ್ಞಾನಿಗೆ ಜ್ಞಾನದಿಂದ ದೊರಕುವ ದೃಢತೆ ಹೆಚ್ಚು. |
೨೦ |
ಪಾಪಮಾಡದೆ ಧರ್ಮವನ್ನೇ ಆಚರಿಸುವ ಸತ್ಪುರುಷ ಜಗದಲ್ಲಿ ಇಲ್ಲವೇ ಇಲ್ಲ. |
೨೧ |
ಜನರು ಆಡುವ ಮಾತುಗಳನ್ನೆಲ್ಲ ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ. ನಿನ್ನ ಆಳೂ ನಿನ್ನನ್ನು ಶಪಿಸುವುದು ಕಿವಿಗೆ ಬೀಳಬಹುದು. |
೨೨ |
ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದೀ; ಇದಕ್ಕೆ ನಿನ್ನ ಮನಸ್ಸೇ ಸಾಕ್ಷಿ. |
೨೩ |
ಇದನ್ನೆಲ್ಲ ಜ್ಞಾನದಿಂದ ಪರೀಕ್ಷಿಸಿದೆ, ಜ್ಞಾನಿಯಾಗುತ್ತೇನೆಂದು ನಿರ್ಧರಿಸಿಕೊಂಡೆ. ಆದರೆ ಅದು ನನಗೆ ದೂರವಾಯಿತು. |
೨೪ |
ಮಹೋನ್ನತವೂ ನಿಗೂಢವೂ ಆದ ತತ್ವವನ್ನು ಅರಿತುಕೊಳ್ಳಬಲ್ಲವರಾರು? |
೨೫ |
ನಾನು ಮತ್ತೆ ಜ್ಞಾನವನ್ನೂ ಮೂಲತತ್ವವನ್ನೂ ಹುಡುಕಿ, ವಿಚಾರಿಸಿ, ಗ್ರಹಿಸಿಕೊಳ್ಳಲು ಆಶಿಸಿದೆ; ಅಧರ್ಮವು ಮೂಢತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳಲು ಮನಸ್ಸುಮಾಡಿದೆ. |
೨೬ |
ಸಾವಿಗಿಂತ ಹೆಚ್ಚು ವಿಷಕರವಾದ ವಿಷಯವೊಂದು ನನಗೆ ಕಂಡುಬಂದಿತು. ಅದು ಯಾವುದೆಂದರೆ - ಕೆಟ್ಟ ಹೆಂಗಸು. ಅವಳು ತೋರಿಸುವ ಪ್ರೀತಿ ಒಂದು ಬೋನು, ಸಿಕ್ಕಿಸಿಕೊಳ್ಳುವ ಒಂದು ಬಲೆ; ಅವಳ ತೋಳುಗಳು ಸಂಕೋಲೆಗಳು. ದೇವರು ಒಲಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯಾದರೋ ಅವಳ ಕೈಗೆ ಸಿಕ್ಕಿಬೀಳುವನು. |
೨೭ |
“ಹೌದು, ಒಂದಾದ ಮೇಲೊಂದನ್ನು ಆಲೋಚಿಸಿ ನಾನು ಇದನ್ನು ಕಂಡುಹಿಡಿದೆ” ಎನ್ನುತ್ತಾನೆ ಉಪದೇಶಕ. ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ನನಗೆ ಉತ್ತರ ಸಿಕ್ಕಲಿಲ್ಲ. |
೨೮ |
ಸಹಸ್ರಪುರುಷರಲ್ಲಿ ಯೋಗ್ಯ ಎನ್ನ ತಕ್ಕ ಒಬ್ಬನನ್ನು ಕಂಡಿದ್ದರೂ ಕಂಡಿರಬಹುದು; ಮೇಲಾದ ಹೆಂಗಸು ಎನ್ನತಕ್ಕವಳು ಸಿಕ್ಕಲಿಲ್ಲ. |
೨೯ |
ಇದೊಂದು ನಿನಗೆ ತಿಳಿದಿರಲಿ: ದೇವರು ಮನುಷ್ಯರನ್ನು ಸಜ್ಜನರನ್ನಾಗಿ ಸೃಷ್ಟಿಸಿದರು; ಮನುಷ್ಯರಾದರೂ ಅನೇಕ ಸಮಸ್ಯೆಗಳನ್ನು ಕಲ್ಪಿಸಿಕೊಂಡಿದ್ದಾರೆ. ನನಗೆ ಕಂಡುಬಂದುದು ಇದುವೇ.
|
Kannada Bible (KNCL) 2016 |
No Data |