೧ |
ಇದಾದ ಮೇಲೆ ಈ ಜಗದಲ್ಲಿ ಎಲ್ಲಾ ತರದ ಚಿತ್ರಹಿಂಸೆಗಳನ್ನು ಕುರಿತು ಯೋಚಿಸಿದೆ. ಅಯ್ಯೋ, ಹಿಂಸೆಗೆ ಈಡಾದವರ ಕಣ್ಣೀರನ್ನು ಕುರಿತು ಏನೆಂದು ಹೇಳಲಿ? ಅವರನ್ನು ಸಂತೈಸುವವರು ಯಾರೂ ಇಲ್ಲ. ಹಿಂಸಾಚಾರಿಗಳು ಶಕ್ತಿಸಾಮರ್ಥ್ಯ ಉಳ್ಳವರು. ಸಂತೈಸುವವರಾದರೋ ಒಬ್ಬರೂ ಇರಲಿಲ್ಲ. |
೨ |
ಇದನ್ನು ನೋಡಿ ಜೀವದಿಂದ ಇರುವವರಿಗಿಂತ ಸತ್ತವರೇ ಧನ್ಯರೆಂದು ಹೊಗಳಿದೆ. |
೩ |
ಹೌದು, ಉಭಯರಿಗಿಂತಲೂ ಇನ್ನೂ ಹುಟ್ಟದೆ, ಜಗದಲ್ಲಿನ ಅಧರ್ಮವನ್ನು ಕಾಣದೆ ಇರುವವನು ಮತ್ತಷ್ಟು ಭಾಗ್ಯವಂತನೆಂದು ತಿಳಿದುಕೊಂಡೆ. |
೪ |
ಮಾನವನು ಪಡುವ ಸಮಸ್ತ ಪರಿಶ್ರಮವನ್ನು ಹಾಗೂ ಸಾಧಿಸುವ ಸಕಲ ಕಾರ್ಯಗಳನ್ನು ಅವಲೋಕಿಸಿದೆ. ಇವಕ್ಕೆಲ್ಲ ಪರರ ಬಗ್ಗೆ ಅವನಿಗಿರುವ ಮತ್ಸರವೇ ಕಾರಣವೆಂದು ತೋರಿಬಂತು. ಇದೂ ಕೂಡ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ. |
೫ |
ಕೈಕಟ್ಟಿಕೊಂಡು ಕುಳಿತುಕೊಳ್ಳುವ ಮೈಗಳ್ಳನಾದ ಮೂಢನಿಗೆ ಅವನ ಒಡಲೇ ಊಟ. |
೬ |
ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಎರಡು ಕೈಹಿಡಿ ವ್ಯರ್ಥ ಪರಿಶ್ರಮಕ್ಕಿಂತ ಒಂದೇ ಕೈಹಿಡಿಯಷ್ಟು ಸಂಪಾದನೆ ಪಡೆದು ನೆಮ್ಮದಿಯಿಂದಿರುವುದು ಲೇಸು. |
೭ |
ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆ. ಒಬ್ಬಂಟಿಗನಾದ ಮನುಷ್ಯನೊಬ್ಬ ಇದ್ದ. ಅವನಿಗೆ ಅಣ್ಣತಮ್ಮಂದಿರು ಇರಲಿಲ್ಲ. ಮಕ್ಕಳುಮರಿ ಇರಲಿಲ್ಲ. ಆದರೂ ಅವನ ದುಡಿಮೆಗೆ ಎಲ್ಲೆ ಇರಲಿಲ್ಲ. ಆಸ್ತಿಪಾಸ್ತಿಯಿಂದ ಅವನ ಕಣ್ಣಿಗೆ ತೃಪ್ತಿ ಇರಲಿಲ್ಲ. |
೮ |
“ನಾನು ಸುಖಾನುಭವವನ್ನು ತೊರೆದು ಯಾರಿಗೋಸ್ಕರ ಒಂದೇ ಸಮನೆ ದುಡಿಯುತ್ತಾ ಇದ್ದೇನೆ?” ಎಂದುಕೊಂಡ. ಇದೂ ಕೂಡ ವ್ಯರ್ಥ, ಕೇವಲ ಪ್ರಯಾಸವೇ ಸರಿ. |
೯ |
ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಹೆಚ್ಚಿನ ಲಾಭ. |
೧೦ |
ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುತ್ತಾನೆ; ಬಿದ್ದಾಗ ಎತ್ತುವವನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ ಸರಿ. |
೧೧ |
ಇದಲ್ಲದೆ, ಒಬ್ಬನ ಮಗ್ಗುಲಲ್ಲಿ ಇನ್ನೊಬ್ಬನು ಮಲಗಿಕೊಂಡರೆ ಇಬ್ಬರಿಗೂ ಬೆಚ್ಚಗಾದೀತು! |
೧೨ |
ಒಬ್ಬಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಕೂಡ ಎದುರಾಗಿ ನಿಲ್ಲಬಹುದು. ಮೂರು ಹುರಿಗಳಿಂದ ಹೆಣೆದ ಹಗ್ಗ ಸುಲಭವಾಗಿ ಕಿತ್ತುಹೋಗುವುದಿಲ್ಲ. |
೧೩ |
ಬುದ್ಧಿಮಾತಿಗೆ ಕಿವಿಗೊಡದ ಮೂರ್ಖನಾದ ಮುದಿಯರಸನಿಗಿಂತ ಜ್ಞಾನಿಯಾದ ಬಡ ಯುವಕನೇ ಮೇಲು. |
೧೪ |
ಇಂಥ ಯುವಕನೊಬ್ಬನನ್ನು ರಾಜನನ್ನಾಗಿಸಲು ಸೆರೆಮನೆಯಿಂದ ಕರೆ ತರಲಾಯಿತು. ರಾಜ್ಯದಲ್ಲಿ ಒಬ್ಬ ಬಡ ಪ್ರಜೆಯಾಗಿ ಹುಟ್ಟಿದವನು ಆತ. |
೧೫ |
ಜಗತ್ತಿನಲ್ಲಿ ಬದುಕಿದ್ದ ಜೀವಂತರೆಲ್ಲರು ರಾಜನಿಗೆ ಪ್ರತಿಯಾಗಿ ನಿಂತ ಆ ಯುವಕನ ಪಕ್ಷ ವಹಿಸುವುದನ್ನು ಕಂಡೆ. |
೧೬ |
ಇವನ ಅಧಿಪತ್ಯಕ್ಕೆ ಒಳಪಟ್ಟ ಜನಜಂಗುಳಿಯ ಸಂಖ್ಯೆ ಅಪಾರವಾಗಿತ್ತು. ಇವನ ನಂತರ ಬಂದವರಾದರೋ ಇವನ ಬಗ್ಗೆ ಅಭಿಮಾನ ತೋರಲಿಲ್ಲ. ಇದು ಸಹ ವ್ಯರ್ಥ, ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.
|
Kannada Bible (KNCL) 2016 |
No Data |