A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೮ಕೇಳಿ, ಜ್ಞಾನವೆಂಬಾಕೆ ಕರೆಯುತ್ತಾಳೆ ವಿವೇಕವೆಂಬಾಕೆ ಕೂಗಿ ಕರೆಯುತ್ತಿದ್ದಾಳೆ!
ಹೆದ್ದಾರಿಯ ಅಕ್ಕಪಕ್ಕದ ದಿಣ್ಣೆಗಳಲ್ಲಿ ಹಾದಿಬೀದಿಗಳ ನಡುವಿನಲ್ಲಿ ನಿಂತಿದ್ದಾಳೆ, ನೋಡಿ
ನಗರದ ಹೆಬ್ಬಾಗಿಲುಗಳಲ್ಲೂ ಜನಸೇರುವ ಪ್ರವೇಶದ್ವಾರಗಳಲ್ಲೂ ಘೋಷಿಸುತ್ತಾಳೆ ಹೀಗೆಂದು:
ಮನುಜರೇ, ನಾನು ಕರೆಯುತ್ತಿರುವುದು ನಿಮ್ಮನ್ನೆ ನಾನು ಕೂಗಿ ಕರೆಯುತ್ತಿರುವುದು ಮಾನವ ಕುಲಪುತ್ರರನ್ನೆ.
ಮೂಢರೇ, ಕಲಿತುಕೊಳ್ಳಿ ಜಾಣತನವನ್ನು ಬುದ್ಧಿಹೀನರೇ, ಗ್ರಹಿಸಿರಿ ಸನ್ಮತಿಯನ್ನು.
ಕೇಳಿ, ನಾನು ಹೇಳುವ ಮಹತ್ವಪೂರ್ಣವಾದ ವಿಷಯವನ್ನು ನನ್ನ ನಾಲಿಗೆ ನುಡಿಯುವ ಯಥಾರ್ಥವಾದ ಸಂಗತಿಯನ್ನು
ನನ್ನ ಬಾಯಿಂದ ಬರುತ್ತಿರುವುದು ಸತ್ಯ ನನ್ನ ತುಟಿಗೆ ದುಷ್ಟತನ ಅಸಹ್ಯ.
ನನ್ನ ಮಾತುಗಳೆಲ್ಲ ನೀತಿಭರಿತ ಅವುಗಳಲ್ಲಿ ಇಲ್ಲ ಕುಟಿಲ, ಕುತಂತ್ರ.
ತಿಳುವಳಿಕೆ ಉಳ್ಳವನಿಗೆ ಅವೆಲ್ಲ ಸರಳ ಗ್ರಹಿಕೆ ಉಳ್ಳವನಿಗೆ ಅವು ಯಥಾರ್ಥ.
೧೦
ಅಂಗೀಕರಿಸಿರಿ ಬೆಳ್ಳಿಗಿಂತ ಶ್ರೇಷ್ಠವಾದ ಬೋಧನೆಯನ್ನು ಅಪರಂಜಿಗಿಂತ ಅಪೂರ್ವವಾದ ಉಪದೇಶವನ್ನು.
೧೧
ಜ್ಞಾನವೆಂಬುದು ಹವಳಕ್ಕಿಂತ ಶ್ರೇಷ್ಠ, ಇಷ್ಟವಸ್ತುಗಳಾವುವು ಅದಕ್ಕೆ ಸಾಟಿಯಿಲ್ಲ.
೧೨
ಜ್ಞಾನವೆಂಬ ನನಗೆ ಜಾಣ್ಮೆಯೆ ಸಹವಾಸಿ ಯುಕ್ತ ತಿಳುವಳಿಕೆ ನನಗೆ ಸಂಗಾತಿ.
೧೩
ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.
೧೪
ಸದಾಲೋಚನೆ, ಸುಜ್ಞಾನ, ವಿವೇಕ ನನ್ನಲ್ಲಿವೆ; ಎಂತಲೇ ಶಕ್ತಿಸಾಮರ್ಥ್ಯ ಹೊಂದಿರುವೆ.
೧೫
ರಾಜರು ಆಳುವುದು ನನ್ನ ಸಹಾಯದಿಂದ ಅಧಿಪತಿಗಳು ನ್ಯಾಯತೀರ್ಪು ಮಾಡುವುದು ನನ್ನಿಂದ.
೧೬
ನನ್ನ ಮೂಲಕ ಭೂಪತಿಗಳು ರಾಜ್ಯ ಆಳುವರು ನಾಯಕರು ಭೂಮಿಯ ಮೇಲೆ ದೊರೆತನ ಮಾಡುವರು.
೧೭
ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ ಹಂಬಲಿಸಿ ಹುಡುಕುವವರು ನನ್ನನ್ನು ಕಂಡುಕೊಳ್ಳುತ್ತಾರೆ.
೧೮
ನನ್ನಲ್ಲಿವೆ ಶ್ರೀಮಂತಿಕೆ ಮತ್ತು ಘನತೆ ಶಾಶ್ವತ ಸಂಪತ್ತು ಹಾಗೂ ಸಮೃದ್ಧಿ.
೧೯
ನಾನು ನೀಡುವ ಫಲ ಬಂಗಾರಕ್ಕಿಂತ ಶ್ರೇಷ್ಠ ನನ್ನಿಂದ ದೊರಕುವ ಆದಾಯ ಅಪ್ಪಟ ಬೆಳ್ಳಿಗಿಂತ ಅಮೂಲ್ಯ.
೨೦
ನಾನು ಹಿಡಿದಿರುವ ಹಾದಿ ನೀತಿಯುತ ನಾನು ನಡೆಯುವುದು ನ್ಯಾಯಪಥ.
೨೧
ನನ್ನನ್ನು ಪ್ರೀತಿಸುವವರಿಗೆ ದೊರಕಿಸುವೆ ಸಿರಿಸಂಪತ್ತನ್ನು ಬಾಧ್ಯವಾಗಿ ನಾನವರ ಬೊಕ್ಕಸಗಳನ್ನು ತುಂಬಿಸುವೆ ಭರ್ತಿಯಾಗಿ.
೨೨
ತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳು.
೨೩
ನಾನು ಸ್ಥಾಪಿಸಲ್ಪಟ್ಟೆ ಪ್ರಾರಂಭದಲ್ಲೆ ಜಗದುತ್ಪತ್ತಿಗೆ ಮುಂಚೆಯೇ, ಅನಾದಿಕಾಲದಲ್ಲೆ.
೨೪
ಜಲನಿಧಿಗಳಾಗಲಿ, ನೀರಿನ ಬುಗ್ಗೆಗಳಾಗಲಿ ಇಲ್ಲದಿರುವಾಗಲೆ ನಾ ಬಂದೆ ಜನ್ಮತಾಳಿ.
೨೫
ನಾನು ಹುಟ್ಟಿದೆ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮೊದಲೆ.
೨೬
ನಾನು ಜನಿಸಿದೆ ಭೂಮಿಯನ್ನಾಗಲಿ, ಬೈಲನ್ನಾಗಲಿ ನೆಲದ ಅಣುರೇಣನ್ನಾಗಲಿ ಆತ ನಿರ್ಮಿಸದೆ ಇರುವಾಗಲೆ.
೨೭
ನಾನು ಅಲ್ಲಿದ್ದೆ ಆತ ಆಕಾಶಮಂಡಲವನ್ನು ಸ್ಥಾಪಿಸುವಾಗ ಸಾಗರದ ಮೇಲೆ ಚಕ್ರಾಕಾರದ ಗೆರೆಯನ್ನು ಎಳೆವಾಗ,
೨೮
ಗಗನವನ್ನು ಮೇಲೆ ಸ್ಥಿರಪಡಿಸುವಾಗ ಸಾಗರದ ಸೆಲೆಗಳನ್ನು ನೆಲೆಗೊಳಿಸಿದಾಗ,
೨೯
ಜಲಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಸಮುದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸುವಾಗ ಭೂಮಿಯ ಅಸ್ತಿಭಾರವನ್ನು ಗೊತ್ತುಮಾಡುವಾಗ.
೩೦
ನಾನು ಆತನ ಬಳಿ ಕುಶಲ ಶಿಲ್ಪಿಯಂತಿದ್ದೆ ಅನುದಿನವೂ ಆತನಿಗೆ ಆನಂದವನ್ನೀಯುತ್ತಿದ್ದೆ ಸದಾ ಆತನ ಮುಂದೆ ಸಂತೋಷಪಡುತ್ತಿದ್ದೆ.
೩೧
ಉಲ್ಲಾಸಿಸುತ್ತಿದ್ದೆ ಆತನ ಭೂಲೋಕದಲ್ಲಿ ಹರ್ಷಿಸುತ್ತಾ ಇದ್ದೆ ಮಾನವ ಸಂತಾನದಲ್ಲಿ.
೩೨
ಆದ್ದರಿಂದ ಮಕ್ಕಳೇ, ಕಿವಿಗೊಡಿ ನನಗೀಗ ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೆಂಬುದು ನಿಜ.
೩೩
ಉಪದೇಶವನ್ನು ಕೇಳಿ ಬುದ್ಧಿವಂತರಾಗಿರಿ ಅದನ್ನು ನೀವು ನಿರಾಕರಿಸಬೇಡಿ.
೩೪
ನನ್ನ ಬಾಗಿಲಬಳಿ ಪ್ರತಿದಿನ ಕಾಯುತ್ತಾ ನನ್ನ ಹೊಸಲಿನತ್ತ ನಿರೀಕ್ಷಿಸಿ ನೋಡುತ್ತಾ ನನ್ನ ಮಾತನ್ನು ಆಲಿಸುವವನು ಭಾಗ್ಯವಂತ.
೩೫
ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಳ್ಳುವನು ಸರ್ವೇಶ್ವರನ ಕೃಪಾಕಟಾಕ್ಷಕ್ಕೆ ಪಾತ್ರನಾಗುವನು.
೩೬
ನನಗೆ ತಪ್ಪುಮಾಡುವವನು ತನ್ನಾತ್ಮಕ್ಕೇ ಕೇಡುಮಾಡುತ್ತಾನೆ ನನ್ನನ್ನು ಹಗೆಮಾಡುವವರೆಲ್ಲರು ಮೃತ್ಯುವನ್ನು ಪ್ರೀತಿಸುತ್ತಾರೆ.