೧ |
ಮಗನೇ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿ ಇಡು. |
೨ |
ಕನೀನಿಕೆಯಂತೆ ನನ್ನ ಕಟ್ಟಳೆಯನ್ನು ಪಾಲಿಸು, ನನ್ನ ಆಜ್ಞೆಗಳನ್ನು ಕೈಗೊಂಡು ಬಾಳು. |
೩ |
ಅವು ನಿನ್ನ ಬೆರಳಿಗೆ ಉಂಗುರವಾಗಿರಲಿ, ನಿನ್ನ ಹೃದಯದ ಹಲಗೆಯಲ್ಲಿ ಬರೆದಿರಲಿ. |
೪ |
ಜ್ಞಾನವನ್ನು ‘ಅಕ್ಕಾ’ ಎಂದು ಕರೆ; ವಿವೇಕವನ್ನು ಆಪ್ತಳೆಂದು ಬಗೆ. |
೫ |
ಅವು ನಿನ್ನನ್ನು ಕಾಪಾಡುವುವು ವ್ಯಭಿಚಾರಿಣಿಯಿಂದ, ಸವಿಮಾತಾಡುವ ಆ ಪರಸ್ತ್ರೀಯಿಂದ. |
೬ |
ಒಮ್ಮೆ ಮನೆಯ ಕಿಟಕಿಯಿಂದ ಇಣಕಿನೋಡುವಾಗ, |
೭ |
ಜನಸಾಮಾನ್ಯರ ನಡುವೆ, ಯೌವನಸ್ಥರ ಮಧ್ಯೆ ಮತಿಗೆಟ್ಟ ಯುವಕನೊಬ್ಬ ನಡೆವುದನ್ನು ನಾನು ಕಂಡೆ. |
೮ |
ಹೊತ್ತು ಮೀರಿ, ಸಂಜೆಯಾಗಿ, ಕತ್ತಲು ಕವಿದಿದ್ದಾ ರಾತ್ರಿಯಲ್ಲಿ, ಅವನು ಹಾದುಹೋಗುತ್ತಿದ್ದ ಬೀದಿಯ ಮೂಲೆ ಮನೆಯ ಬಳಿ. |
೯ |
ಒಬ್ಬಾಕೆಯ ಮನೆಯ ಕಡೆಗೆ ಆತ ತಿರುಗುವುದನ್ನು ನಾ ಕಂಡೆ; |
೧೦ |
ಇಗೋ, ಅವನನ್ನು ಎದುರುಗೊಳ್ಳುತ್ತಾಳೆ ವೇಷಧಾರಿಯಾದ ಕಪಟಸ್ತ್ರೀಯೊಬ್ಬಳು. |
೧೧ |
ಹಟಮಾರಿ, ಕೂಗಾಟದವಳು, ಮನೆಯಲ್ಲಿ ನಿಲ್ಲಲಾರದವಳು. |
೧೨ |
ಹೊಂಚುಹಾಕುತ್ತಾಳೆ ಅವಳು ಮೂಲೆ ಮೂಲೆಗಳಲ್ಲಿ; ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ. |
೧೩ |
ಅವನನ್ನು ಬಿಗಿಹಿಡಿದು ಮುದ್ದಾಡುತ್ತಾಳೆ. ಲಜ್ಜೆಗೆಟ್ಟ ಮೋರೆಯುಳ್ಳ ಅವಳು ಹೀಗೆನ್ನುತ್ತಾಳೆ: |
೧೪ |
“ನನ್ನ ಬಯಕೆ ಈಡೇರಲೆಂದು ಬಲಿಯರ್ಪಿಸಿದ್ದೇನೆ; ಇಂದೇ ನನ್ನ ಹರಕೆಯನ್ನು ತೀರಿಸಿದ್ದೇನೆ. |
೧೫ |
ಎಂತಲೇ ನಿನ್ನನ್ನು ಎದುರುಗೊಳ್ಳಲು ಬಂದೆ ಆಕಾಂಕ್ಷೆಯಿಂದ ಹುಡುಕಿ; ಇಗೋ ನಿನ್ನನ್ನು ಕಂಡುಕೊಂಡೆ. |
೧೬ |
ಮೆತ್ತೆ ಸುಪ್ಪತ್ತಿಗೆಯಿಂದ, ಚಿತ್ರವಿಚಿತ್ರ ವಸ್ತುಗಳಿಂದ, ಈಜಿಪ್ಟಿನ ನಾರುಮಡಿಯಿಂದ ಸಿದ್ಧಮಾಡಿರುವೆ ಹಾಸಿಗೆಯನ್ನು. |
೧೭ |
ರಸಗಂಧ, ಅಗರು, ಲವಂಗ ಚಕ್ಕೆಗಳಿಂದ ಅದನ್ನು ಘಮಘಮಗೊಳಿಸಿರುವೆ. |
೧೮ |
ಬೆಳಗಿನ ತನಕ ಬೇಕಾದಷ್ಟು ರಮಿಸೋಣ ಬಾ, ಕಾಮವಿಲಾಸಗಳಿಂದ ಸಂತೃಪ್ತಿ ಪಡೆಯೋಣ ಬಾ. |
೧೯ |
ಯಜಮಾನ ಮನೆಯಲ್ಲಿ ಇಲ್ಲ; ಕೈಗೊಂಡು ಇದ್ದಾನೆ ದೂರ ಪ್ರಯಾಣ. |
೨೦ |
ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಮನೆಗೆ ಬರುವಂತಿಲ್ಲ ಹುಣ್ಣಿಮೆಯ ತನಕ.” |
೨೧ |
ಹೀಗೆ ಮೋಹಕ ಮಾತುಗಳಿಂದ ಒತ್ತಾಯಪಡಿಸುತ್ತಾಳೆ, ಅತಿಯಾದ ಒಲುಮೆಯಿಂದ ಪುಸಲಾಯಿಸುತ್ತಾಳೆ. |
೨೨ |
ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ, ಬಲೆಗೆ ಸಿಕ್ಕಿಬೀಳುವ ಜಿಂಕೆಯಂತೆ, |
೨೩ |
ಉರುಳಿನತ್ತ ಹಾರುವ ಹಕ್ಕಿಯಂತೆ, ಕರುಳನ್ನು ತಿವಿಯುವ ಬಾಣದಂತೆ, ತನ್ನ ಪ್ರಾಣಕ್ಕಿರುವ ಅಪಾಯವನ್ನು ತಿಳಿಯದೆ, ಅವಳನ್ನು ತಡಮಾಡದೆ ಹಿಂಬಾಲಿಸುತ್ತಾನೆ ಆತ. |
೨೪ |
ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ; ನನ್ನ ಮಾತುಗಳನ್ನು ಆಲಿಸಿರಿ. |
೨೫ |
ನಿಮ್ಮ ಹೃದಯ ಅವಳ ದಾರಿಯತ್ತ ತಿರುಗದಿರಲಿ; ಅಪ್ಪಿತಪ್ಪಿ ನಿಮ್ಮ ಕಾಲು ಅವಳ ಹಾದಿಯನ್ನು ತುಳಿಯದಿರಲಿ. |
೨೬ |
ಅವಳಿಗೆ ಬಲಿಯಾಗಿ ಬಿದ್ದವರು ಬಹುಮಂದಿ; ಹತರಾದವರೋ ಲೆಕ್ಕವಿಲ್ಲದಷ್ಟು ಮಂದಿ. |
೨೭ |
ಅವಳ ಮನೆ ಪಾತಾಳಕ್ಕೆ ಹಾದಿ; ಮರಣದ ಗುಡಾರಗಳಿಗೆ ಇಳಿದಾರಿ.
|
Kannada Bible (KNCL) 2016 |
No Data |