೧ |
ಮಸ್ಸಾರಾಜ್ಯದ ಅರಸ ಲೆಮೂವೇಲನ ವಚನಗಳು: ಅವನ ತಾಯಿ ಅವನಿಗೆ ಉಪದೇಶಿಸಿದ ಹಿತೋಕ್ತಿಗಳು: |
೨ |
ಮಗನೇ, ನನ್ನ ಕರುಳಿನ ಕುಡಿಯೇ, ನನ್ನ ಹರಕೆಯ ಮಗನೇ, ನಾನು ಹೇಳುವುದನ್ನು ಕೇಳು: |
೩ |
ನಿನ್ನ ಪೌರುಷತ್ವವನ್ನೆಲ್ಲಾ ಸ್ತ್ರೀಯರಿಗೆ ಒಪ್ಪಿಸದಿರು; ಅರಸನನ್ನೆ ನಾಶಮಾಡಬಲ್ಲ ಅವರಿಗಾಗಿ ಹಣವನ್ನೆಲ್ಲ ವ್ಯಯಮಾಡದಿರು. |
೪ |
ಕುಡುಕತನ ರಾಜನಿಗೆ ತಕ್ಕುದ್ದಲ್ಲ; ಲೆಮೂವೇಲನೇ ಕೇಳು, ಅದು ರಾಜನಿಗೆ ಯೋಗ್ಯವಲ್ಲ; ಮದ್ಯಪಾನಾಸಕ್ತಿ ಅಧಿಕಾರಿಗಳಿಗೆ ಹಿತವಲ್ಲ. |
೫ |
ಕುಡಿದರೆ ಕರ್ತವ್ಯವನ್ನು ಮರೆಯುತ್ತಾರೆ; ದೀನದಲಿತರಿಗೆ ನ್ಯಾಯ ತೀರಿಸದೆ ತಾರತಮ್ಯ ಮಾಡುತ್ತಾರೆ. |
೬ |
ಸಾರಾಯಿ ಸಾಯುತ್ತಿರುವವನಿಗಿರಲಿ; ಮದ್ಯ, ಮನೋವ್ಯಥೆಪಡುವವನಿಗಿರಲಿ. |
೭ |
ಅವರು ಕುಡಿದು ಬಡತನ ಮರೆಯಲಿ, ತಮ್ಮ ಯಾತನೆಯನ್ನು ನೆನೆಯದಿರಲಿ. |
೮ |
ಬಾಯಿಲ್ಲದವರ ಹಾಗೂ ದೀನದಲಿತರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಚ್ಚಿ ಮಾತಾಡು. |
೯ |
ಅವರ ಪರವಾಗಿ ಮಾತಾಡಿ ನ್ಯಾಯವಾದ ತೀರ್ಪುಕೊಡು; ದೀನದರಿದ್ರರ ಹಕ್ಕು ಬಾಧ್ಯತೆಯನ್ನು ಕಾಪಾಡು. |
೧೦ |
ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು. |
೧೧ |
ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು. |
೧೨ |
ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು. |
೧೩ |
ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು. |
೧೪ |
ವ್ಯಾಪಾರದ ಹಡಗುಗಳಂತೆ ದೂರದಿಂದ ಆಹಾರ ಪದಾರ್ಥಗಳನ್ನು ತರುವಳು. |
೧೫ |
ಇನ್ನೂ ಕತ್ತಲಿರುವಾಗಲೆ ಎದ್ದುಬಿಡುತ್ತಾಳೆ, ಮನೆಯವರಿಗೆ ತಿಂಡಿತೀರ್ಥ ಅಣಿಮಾಡುತ್ತಾಳೆ, ಕೆಲಸಗಿತ್ತಿಯರಿಗೆ ದಿನಗೆಲಸಗಳನ್ನು ನೇಮಿಸುತ್ತಾಳೆ. |
೧೬ |
ಆಲೋಚನೆಮಾಡಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ಕೈಗೆಲಸದ ಆದಾಯದಿಂದಲೆ ತೋಟ ಮಾಡಿಸುತ್ತಾಳೆ. |
೧೭ |
ನಡುಕಟ್ಟಿ ಕೆಲಸಕ್ಕೆ ನಿಲ್ಲುತ್ತಾಳೆ, ದುಡಿಮೆಯಲ್ಲಿ ತೋಳ್ಬಲವನ್ನು ತೋರ್ಪಡಿಸುತ್ತಾಳೆ. |
೧೮ |
ತನ್ನ ಕೆಲಸದಿಂದ ಲಭಿಸುವ ಆದಾಯದ ರುಚಿ ಆಕೆಗಿದೆ; ಆಕೆಯ ಮನೆದೀಪ ರಾತ್ರಿಯೆಲ್ಲ ಆರದಿದೆ. |
೧೯ |
ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ. |
೨೦ |
ಬಡವರಿಗೆ ಕೈಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ. |
೨೧ |
ಚಳಿಗಾಲದಲ್ಲಿ ಮನೆಯವರಿಗಾಗಿ ಆಕೆ ಚಿಂತಿಸಬೇಕಿಲ್ಲ; ಏಕೆಂದರೆ ಎಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ. |
೨೨ |
ತನಗೆ ಬೇಕಾದ ರತ್ನಗಂಬಳಿಯನ್ನು ತಾನೆ ನೇಯ್ದಿದ್ದಾಳೆ; ಆಕೆಯ ಉಡುಪೋ ನಾರುಮಡಿ, ರಕ್ತಾಂಬರ. |
೨೩ |
ಆಕೆಯ ಗಂಡ ನಾಡಿಗರಲ್ಲಿ ಗಣ್ಯ; ನ್ಯಾಯಸ್ಥಾನದಲ್ಲಿ ಸನ್ಮಾನಿತ. |
೨೪ |
ದುಪ್ಪಟಿಗಳನ್ನು ನೇಯ್ದು ಮಾರಾಟ ಮಾಡುತ್ತಾಳೆ; ನಡುಕಟ್ಟುಗಳನ್ನು ಮಾಡಿ ವರ್ತಕರಿಗೆ ವಿಕ್ರಯಿಸುತ್ತಾಳೆ. |
೨೫ |
ಘನತೆ, ಗೌರವ, ಆಕೆಯ ಬಟ್ಟೆಬರೆ; ಭವಿಷ್ಯತ್ತಿನಲ್ಲಿ ಆಕೆಗೆ ನಿರ್ಭೀತ ನಗೆ. |
೨೬ |
ಆಕೆಯ ಬಾಯಿಂದ ಬರುವ ಮಾತು ಜ್ಞಾನಪೂರ್ಣ; ಆಕೆ ಹೇಳುವ ಬುದ್ಧಿಮಾತು ಪ್ರೀತಿಪ್ರೇರಿತ. |
೨೭ |
ಮನೆಗೆಲಸವನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತಾಳೆ; ಆಕೆ ಕೆಲಸಮಾಡದೆ ಊಟಮಾಡುವವಳಲ್ಲ. |
೨೮ |
ಮಕ್ಕಳು ಆಕೆಯನ್ನು ಧನ್ಯಳೆಂದು ಹೊಗಳುವರು. |
೨೯ |
ಗಂಡನು, “ಗುಣವತಿಯರು ಎಷ್ಟೋಮಂದಿ ಇರುವರು; ಅವರೆಲ್ಲರಿಗಿಂತ ನೀನೆ, ಶ್ರೇಷ್ಠಳು” ಎಂದು ಕೊಂಡಾಡುವನು. |
೩೦ |
ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು. |
೩೧ |
ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ!
|
Kannada Bible (KNCL) 2016 |
No Data |