A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೩೦ಮಸ್ಸಾಗೆ ಸೇರಿದ ಜಾಕೆ ಎಂಬುವವನ ಮಗ ಆಗೂರನ ಹಿತೋಕ್ತಿಗಳು: ಈತನು ಇಥಿಯೇಲನಿಗೆ ಹಾಗೂ ಉಕ್ಕಾಲನಿಗೆ ಮಾಡಿದ ಪ್ರವಾದನೆ:
ಮಾನವರಲ್ಲಿ ನನ್ನಂಥ ಪಶುಪ್ರಾಯನಿಲ್ಲ; ಮನುಷ್ಯ ವಿವೇಕವೂ ನನಗಿಲ್ಲ.
ಜ್ಞಾನವನ್ನು ನಾನು ಪಡೆದುಕೊಂಡಿಲ್ಲ; ಪರಮಪಾವನರ ತಿಳುವಳಿಕೆ ನನಗಿಲ್ಲ.
ಆಕಾಶಕ್ಕೆ ಏರಿ ಮರಳಿದವನು ಯಾರು? ಮುಷ್ಟಿಯಲ್ಲಿ ಗಾಳಿಯನ್ನು ಹಿಡಿದಿಟ್ಟವನು ಯಾರು? ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿದವನು ಯಾರು? ಭೂಮಿಗೆ ಎಲ್ಲೆಮೇರೆಗಳನ್ನು ನಿಗದಿಮಾಡಿದವನು ಯಾರು? ಆತನ ಹೆಸರೇನು? ಆತನ ಮಗನ ಹೆಸರೇನು? ಬಲ್ಲೆಯಾ?
ದೇವರ ಒಂದೊಂದು ಮಾತೂ ಪರಿಶುದ್ಧ; ಆತನೇ ಶರಣರ ಖೇಡ್ಯ;
ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿಬಂದೀಯೆ!
ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು:
ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು.
ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.
೧೦
ದಾಸನ ವಿರುದ್ಧ ದಣಿಗೆ ದೂರು ಹೇಳಬೇಡ; ಅವನು ನಿನ್ನನ್ನು ಶಪಿಸಾನು, ನಿನ್ನಲ್ಲೆ ದೋಷ ಕಂಡುಬಂದೀತು.
೧೧
ತಂದೆಯನ್ನೇ ಶಪಿಸುವ, ತಾಯಿಗು ಮರ್ಯಾದೆಯನ್ನೂ ತರದ ಮಕ್ಕಳುಂಟು.
೧೨
ತಮ್ಮ ಕೊಳೆಯನ್ನು ತೊಳೆದುಕೊಳ್ಳದ, ತಾವೆ ಪರಿಶುದ್ಧರೆಂದು ಎಣಿಸಿಕೊಳ್ಳುವ ಜನರುಂಟು.
೧೩
ಮೇಲಿಂದ ಮೇಲಕ್ಕೆ ದೃಷ್ಟಿಸಿ ನೋಡುವ, ಠೀವಿಯಿಂದ ಕಣ್ಣುರೆಪ್ಪೆಗಳನ್ನೇರಿಸುವ ಜನರುಂಟು.
೧೪
ಖಡ್ಗದಂಥ ಹಲ್ಲುಗಳು, ಕತ್ತಿಯಂಥ ಕೋರೆಗಳೂ ಉಳ್ಳವರಿದ್ದಾರೆ. ನಾಡಿನ ಬಡವರನ್ನು ಇವರು ತಿಂದುಬಿಡುವರು; ಜನರಲ್ಲಿ ದಿಕ್ಕಿಲ್ಲದವರನ್ನು ಇವರು ನುಂಗಿಬಿಡುವರು.
೧೫
ಜಿಗಣೆಗೆ “ಕೊಡು, ಕೊಡು” ಎಂಬ ಇಬ್ಬರು ಹೆಣ್ಣು ಮಕ್ಕಳುಂಟು; ಎಂದೂ ತೃಪ್ತಿಪಡೆಯದವು ಮೂರುಂಟು; ಹೌದು, ‘ಸಾಕು’ ಎನ್ನದವುಗಳು ನಾಲ್ಕುಂಟು:
೧೬
ಅವು ಯಾವುದೆಂದರೆ: ಪಾತಾಳ, ಹೆರದ ಗರ್ಭ, ನೀರಿಗಾಗಿ ಹಾತೊರೆಯುವ ಭೂಮಿ, ‘ಸಾಕಾಯಿತು’ ಎನ್ನದ ಬೆಂಕಿ.
೧೭
ತಂದೆಯನ್ನು ಪರಿಹಾಸ್ಯಮಾಡುವ ಕಣ್ಣನ್ನು, ತಾಯಿಯ ಆಜ್ಞೆಯನ್ನು ಧಿಕ್ಕರಿಸುವ ನೇತ್ರವನ್ನು ಹಳ್ಳಕೊಳ್ಳದ ಕಾಗೆಗಳು ಕುಕ್ಕುವುವು, ರಣಹದ್ದುಗಳು ತಿಂದುಬಿಡುವುವು.
೧೮
ನನ್ನ ಅರಿವಿಗೆ ಬಾರದ ಮೂರು ವಿಷಯಗಳಿವೆ: ಹೌದು, ನನ್ನ ಬುದ್ಧಿಗೆ ಎಟುಕದವು ನಾಲ್ಕಿವೆ:
೧೯
ಅವು ಯಾವುವೆಂದರೆ: ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಯುವಕ-ಯುವತಿಯರ ಪರಸ್ಪರ ಆಕರ್ಷಣೆ.
೨೦
ವ್ಯಭಿಚಾರಿಣಿಯ ವರ್ತನೆ ಹೀಗಿದೆ: ಅವಳು ಉಣ್ಣುತ್ತಾಳೆ, ಬಾಯಿ ಒರೆಸಿಕೊಳ್ಳುತ್ತಾಳೆ. ಬಳಿಕ ‘ನಾನು ತಪ್ಪುಮಾಡಲಿಲ್ಲವಲ್ಲಾ’ ಎನ್ನುತ್ತಾಳೆ.
೨೧
ಜಗತ್ತು ಮೂರು ವಿಷಯಗಳ ನಿಮಿತ್ತ ಕಂಪಿಸುತ್ತದೆ: ನಾಲ್ಕರ ನಿಮಿತ್ತವೂ ಹೊರೆ ತಾಳಲಾರದಂತೆ ಆಗುತ್ತದೆ:
೨೨
ಅವು ಯಾವುವೆಂದರೆ: ಅರಸನಾದ ಆಳು, ಹೊಟ್ಟೆ ತುಂಬಿಸಿಕೊಂಡು ಸುತ್ತಾಡುವ ನೀಚ,
೨೩
ಯಾರಿಗೂ ಬೇಡವಾದವಳಾಗಿದ್ದ ಮದುವೆಯಾದ ಚಂಡಿ, ಧರ್ಮಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.
೨೪
ಚಿಕ್ಕವು ಆದರೂ ದೊಡ್ಡ ಜ್ಞಾನವುಳ್ಳ ನಾಲ್ಕು ಜಂತುಗಳುಂಟು:
೨೫
ಇರುವೆಗಳು - ಬಲಹೀನ ಜಂತುಗಳು, ಆದರೂ ಸುಗ್ಗಿಯಲ್ಲೆ ಆಹಾರವನ್ನು ಸೇರಿಸಿಟ್ಟುಕೊಳ್ಳುತ್ತವೆ;
೨೬
ಬೆಟ್ಟದ ಮೊಲಗಳು - ದೊಡ್ಡ ಪ್ರಾಣಿಗಳೇನೂ ಅಲ್ಲ, ಆದರೂ ಬಂಡೆಗಳ ಬಿರುಕುಗಳಲ್ಲಿ ಮನೆಮಾಡಿಕೊಳ್ಳುತ್ತವೆ;
೨೭
ಮಿಡತೆಗಳು - ಅವಕ್ಕೆ ಅರಸನಿಲ್ಲ, ಆದರೂ ಅವೆಲ್ಲ ದಂಡುದಂಡಾಗಿ ಹೊರಡುತ್ತವೆ;
೨೮
ಹಲ್ಲಿ - ಅಂಗೈ ಆಸರೆ ಪಡೆವ ಪ್ರಾಣಿ, ಆದರೂ ಅರಮನೆಗಳಲ್ಲಿ ವಾಸ ಮಾಡುತ್ತದೆ.
೨೯
ಗಂಭೀರ ಗಮನದ ಮೂರು ಪ್ರಾಣಿಗಳುಂಟು: ಹೌದು ಗಂಭೀರ ಗತಿಯ ನಾಲ್ಕನೆಯ ಪ್ರಾಣಿಯೂ ಉಂಟು:
೩೦
ಯಾವುದಕ್ಕೂ ಹೆದರಿ ಓರೆಯಾಗದ ಮೃಗರಾಜನಾದ ಸಿಂಹ,
೩೧
ಕತ್ತೆತ್ತಿ ನಡೆಯುವ ಹುಂಜ, ಮಂದೆಗೆ ಮುಂದೆ ಹೋಗುವ ಹೋತ, ಸೈನ್ಯಸಮೇತನಾದ ರಾಜ.
೩೨
ನೀನು ಗರ್ವದಿಂದ ಮೂರ್ಖನಾಗಿ ನಡೆದಿದ್ದರೆ, ದುರಾಲೋಚನೆಯನ್ನು ಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೊ.
೩೩
ಹಾಲು ಕಡೆಯುವುದರಿಂದ ಬೆಣ್ಣೆ; ಮೂಗು ಹಿಂಡುವುದರಿಂದ ರಕ್ತ; ಕೋಪ ಎಬ್ಬಿಸುವುದರಿಂದ ಜಗಳ.