A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೨೫ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು. ಜುದೇಯದ ಅರಸ ಹಿಜ್ಕೀಯನ ಲೇಖಕರು ಸಂಗ್ರಹಿಸಿದ ನುಡಿಗಳು:
ವಿಷಯಗಳನ್ನು ರಹಸ್ಯವಾಗಿಡುವ ದೇವರಿಗೆ ಮಹಿಮೆ; ವಿಷಯಗಳನ್ನು ವಿಮರ್ಶಿಸುವ ರಾಜರಿಗೆ ಹಿರಿಮೆ.
ಆಕಾಶವು ಉನ್ನತ, ಭೂಮಿಯು ಅಗಾಧ, ಅಂತೆಯೇ ರಾಜರ ಮನಸ್ಸು ಅಗೋಚರ.
ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ದಕ್ಕುವುದು ಚೊಕ್ಕ ಒಡವೆ.
ಅಂತೆಯೆ ರಾಜನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ರಾಜ್ಯಭಾರ ನೀತಿಯಾಧಾರದಿಂದ ಸುಸ್ಥಿರ.
ರಾಜನ ಸನ್ನಿಧಾನದಲ್ಲಿ ನಿನ್ನನ್ನೇ ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನದಲ್ಲಿ ನಿಂತುಕೊಳ್ಳಬೇಡ.
ಘನವಂತರ ಮುಂದೆ ಕೆಳಗಣ ಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತ “ಇನ್ನೂ ಮೇಲಕ್ಕೆ ಬಾ” ಎಂದು ಕರೆಸಿಕೊಳ್ಳುವುದು ಲೇಸು.
ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಓಡಬೇಡ; ಕಡೆಗೆ ಅವನು ನಿನ್ನ ಮಾನಕಳೆದಾಗ ಏನು ಮಾಡುವೆ, ಯೋಚಿಸು.
ವ್ಯಾಜ್ಯವನ್ನು ನೆರೆಯವನ ಸಂಗಡವೆ ಚರ್ಚಿಸಿ ತೀರ್ಮಾನಿಸಿಕೊ; ನೆರೆಹೊರೆಯವರ ಗುಟ್ಟನ್ನು ಬಯಲು ಮಾಡಬೇಡ.
೧೦
ಬಯಲು ಮಾಡಿದರೆ ಕೇಳುವವನು ನಿನ್ನನ್ನೆ ಅವಮಾನಗೊಳಿಸಾನು, ನಿನಗೆ ಬರುವ ಅಪಕೀರ್ತಿ ಅಳಿಯದೆ ಉಳಿದೀತು.
೧೧
ಸಮಯೋಚಿತ ಮಾತು ಬೆಳ್ಳಿ ತಟ್ಟೆಯಲ್ಲಿ ಖಚಿತವಾದ ಬಂಗಾರದ ಹಣ್ಣು.
೧೨
ಕೇಳುವ ಕಿವಿಗೆ ಕೊಡುವ ಬುದ್ಧಿವಾದವು ಹೊನ್ನಿನ ಮುರುವು, ಅಪರಂಜಿಯ ಆಭರಣವು.
೧೩
ಸುಗ್ಗಿಯ ಕಾಲದಲ್ಲಿ ಹಿಮದ ತಂಪು ಹೇಗೋ ಹಾಗೆ ಕಳುಹಿಸುವ ಒಡೆಯನಿಗೆ ಪ್ರಾಮಾಣಿಕ ದೂತನೂ ಹಾಗೆ.
೧೪
ಗಾಳಿಯಿದೆ, ಮೋಡವಿದೆ, ಆದರೆ ಮಳೆಯಿಲ್ಲ; ಕೊಡದೆಯೆ ತಾನೊಬ್ಬ ದಾನಿಯೆಂದು ಕೊಚ್ಚಿಕೊಳ್ಳುವವನೂ ಹಾಗೆಯೆ.
೧೫
ಸಹನಶೀಲತೆಯಿಂದ ಅರಸನನ್ನೂ ಒಲಿಸಿಕೊಳ್ಳಬಹುದು; ಮೃದುವಾದ ನಾಲಿಗೆ ಎಲುಬನ್ನೂ ಮುರಿಯಬಲ್ಲದು.
೧೬
ಜೇನು ಸಿಕ್ಕಿದರೆ ಅಳತೆಯಿಂದ ತಿನ್ನು, ಮಿತಿಮೀರಿದರೆ ವಾಂತಿಯಾದೀತು.
೧೭
ಪದೇ ಪದೇ ನೆರೆಯವನ ಮನೆಗೆ ಹೋಗಬೇಡ, ಬೇಸರಗೊಂಡು ನಿನ್ನನ್ನು ಹಗೆಮಾಡಾನು.
೧೮
ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಕೊಡತಿಗೆ, ಕತ್ತಿಗೆ, ಹರಿತವಾದ ಬಾಣಕ್ಕೆ ಸಮಾನನು.
೧೯
ಕಷ್ಟಕಾಲದಲ್ಲಿ ಕಪಟಿಯನ್ನು ನಂಬುವುದು, ಮುರುಕು ಹಲ್ಲನ್ನು ಕುಂಟಕಾಲನ್ನು ನಂಬಿದಂತಾಗುವುದು.
೨೦
ಮನಗುಂದಿದವನಿಗೆ ಸಂಗೀತ ಹಾಡುವುದೆಂದರೆ ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆ, ಉರಿಗಾಯಕ್ಕೆ ಉಪ್ಪು ಹಚ್ಚಿದಂತೆ.
೨೧
ಹಗೆಯವನು ಹಸಿದಿದ್ದರೆ ಅನ್ನ ನೀಡು, ಬಾಯಾರಿದ್ದರೆ ಕುಡಿಯಲು ಕೊಡು.
೨೨
ಹೀಗೆ ಅವನ ತಲೆಯ ಮೇಲೆ ಉರಿಕೆಂಡ ಸುರಿವೆ; ಸರ್ವೇಶ್ವರನಿಂದಲೂ ಪ್ರತಿಫಲ ಪಡೆಯುವೆ.
೨೩
ಮಳೆ ಬರುವುದು ಪಡುವಣ ಗಾಳಿಯಿಂದ; ಮುಖಕ್ಕೆ ಸಿಟ್ಟು ಬರುವುದು ಚಾಡಿ ನಾಲಿಗೆಯಿಂದ.
೨೪
ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಿಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.
೨೫
ದೂರನಾಡಿನಿಂದ ಬಂದ ಶುಭವರದಿ, ದಣಿದ ಪ್ರಾಣಕ್ಕೆ ತಣ್ಣೀರ ತೃಪ್ತಿ.
೨೬
ದುಷ್ಟರಿಗೆ ಬಿಟ್ಟುಕೊಡುವ ನೀತಿವಂತ ಕೆಸರಿನ ಬುಗ್ಗೆಗೆ, ಕೊಳಕು ಚಿಲುಮೆಗೆ ಸಮಾನ.
೨೭
ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಗೌರವದ ಮೇಲೆ ಗೌರವ ಬಯಸುವುದು ಸರಿಯಲ್ಲ.
೨೮
ಆತ್ಮಸ್ವಾಧೀನವಲ್ಲದ ಮನುಷ್ಯ ಗೋಡೆಬಿದ್ದು ಕಾವಲಿಲ್ಲದ ಹಾಳೂರು.