A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೨೨ಅತುಳ ಐಶ್ವರ್ಯಕ್ಕಿಂತ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತ ಪ್ರೀತಿ ವಿಶ್ವಾಸ ಅಮೂಲ್ಯ.
ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರುಬದುರು; ಅವರೆಲ್ಲರನ್ನು ಸೃಷ್ಟಿಸಿದಾತ ಸರ್ವೇಶ್ವರನು.
ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.
ಸರ್ವೇಶ್ವರನಲ್ಲಿ ಭಯಭಕ್ತಿ ದೀನಮನೋಭಾವ, ಇವು ನೀಡುವ ಫಲ-ಸಂಪತ್ತು, ಸನ್ಮಾನ, ಆಯುಸ್ಸು.
ವಕ್ರಬುದ್ಧಿಯುಳ್ಳವನ ಹಾದಿತುಂಬ ಮುಳ್ಳು, ಉರುಳು; ಅದರಿಂದ ದೂರವಿರುವನು ಪ್ರಾಣದಾಸೆಯುಳ್ಳವನು.
ಬಾಲ್ಯದಲ್ಲೇ ಮಕ್ಕಳನ್ನು ಸರಿದಾರಿಯಲ್ಲಿ ಪಳಗಿಸು; ಮುಪ್ಪಿನಲ್ಲೂ ಅವರು ಆ ಪದ್ಧತಿ ಮೀರಿ ನಡೆಯದಿರಲಿ.
ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
ಕೆಟ್ಟತನವನ್ನು ಬಿತ್ತುವವನು ಕೇಡನ್ನೆ ಕೊಯ್ಯುವನು; ಅವನ ಸಿಟ್ಟು ಅವನನ್ನೆ ಸುಟ್ಟುಬಿಡುವುದು.
ಉದಾರ ದೃಷ್ಟಿಯುಳ್ಳವನು ಆಶೀರ್ವದಿತನು; ಆಹಾರವನ್ನು ಬಡವರೊಂದಿಗೆ ಆತ ಹಂಚಿಕೊಳ್ಳುವನು.
೧೦
ಕುಚೋದ್ಯನನ್ನು ಓಡಿಸಿಬಿಟ್ಟರೆ ಜಗಳ ನಿಲ್ಲುವುದು, ವ್ಯಾಜ್ಯ ಮುಗಿಯುವುದು, ನಿಂದೆ ಅವಮಾನ ಇಲ್ಲದಾಗುವುದು.
೧೧
ಸವಿಮಾತಿನಿಂದ ಅರಸನ ಗೆಳೆತನ ಪಡೆಯಬಹುದು; ಸರ್ವೇಶ್ವರ ಬಯಸುವುದು ಅಂತರಂಗ ಶುದ್ಧಿಯನ್ನು.
೧೨
ಸರ್ವೇಶ್ವರನ ದೃಷ್ಟಿ ಸಜ್ಜನರನ್ನು ಕಾಯುವುದು; ವಂಚಕರ ಮಾತನ್ನು ನಿರರ್ಥಕಗೊಳಿಸುವುದು.
೧೩
“ಹೊರಗಡೆ ಕಾದಿದೆ ಸಿಂಹ, ಬೀದಿಗೆ ಕಾಲಿಟ್ಟರೆ ತಿಂದುಬಿಡುವುದು!” ಇದು ಮೈಗಳ್ಳನ ಪಿಳ್ಳೆಯ ನೆವ.
೧೪
ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಸರ್ವೇಶ್ವರನಿಗೆ ಸಿಟ್ಟೆಬ್ಬಿಸಿದವನು ಬೀಳುವನು ಅದರಲ್ಲಿ.
೧೫
ಮಂಕುತನ ಮಕ್ಕಳ ಮನಸ್ಸಿಗೆ ಸಹಜ; ಬೆತ್ತದ ಬಿಸಿಯಿಂದ ಅದನ್ನು ತೊಲಗಿಸಲು ಸಾಧ್ಯ.
೧೬
ಹಣ ಹೆಚ್ಚಿಸಲು ಬಡವರನ್ನು ಪೀಡಿಸುವವನಿಗೆ, ಲಂಚಕೊಟ್ಟು ಬಲ್ಲಿದರನ್ನು ಒಲಿಸುವವನಿಗೆ, ಕೊರತೆಯೆ ಕಟ್ಟಿಟ್ಟ ಬುತ್ತಿ.
೧೭
ಜ್ಞಾನಿಗಳ ನುಡಿಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ಮನಸ್ಸಿನಲ್ಲಿಡು.
೧೮
ಆ ನುಡಿಗಳನ್ನು ನಿನ್ನ ಅಂತರಂಗದಲ್ಲಿ ಕಾದಿಡು; ಅವು ನಿನ್ನ ತುಟಿಯ ಮೇಲೆ ಸಿದ್ಧವಿದ್ದರೆ ಒಳಿತು.
೧೯
ಸರ್ವೇಶ್ವರನಲ್ಲಿ ನೀನು ಭರವಸೆ ಇಡುವಂತೆ, ಅವುಗಳನ್ನು ತಿಳಿಸಿರುವೆನು ಇಂದೆ.
೨೦
ಉಚಿತಾಲೋಚನೆಯನ್ನೂ ತಿಳುವಳಿಕೆಯನ್ನೂ ನೀಡಬಲ್ಲ ಮೂವತ್ತು ವಚನಗಳನ್ನು ನಿನಗೆ ಈ ಮುಂಚೆಯೆ ಬರೆದಿರುವೆನಲ್ಲಾ.
೨೧
ಸತ್ಯವಾದ ಆ ವಚನಗಳು ಎಷ್ಟೋ ಯಥಾರ್ಥವೆಂದು ತಿಳಿದು ನಿನ್ನನ್ನು ಪ್ರಶ್ನಿಸಿದವರಿಗೆ ಅವುಗಳನ್ನು ಅರಿಕೆಮಾಡು.
೨೨
ಬಡವರಿಗೆ ದಿಕ್ಕಿಲ್ಲವೆಂದು ಅವರನ್ನು ಶೋಷಣೆಗೆ ಗುರಿಮಾಡಬೇಡ; ನ್ಯಾಯಾಲಯದಲ್ಲಿ ಆ ದಟ್ಟದರಿದ್ರರನ್ನು ಬಾಧಿಸಬೇಡ;
೨೩
ಸರ್ವೇಶ್ವರನೇ ಅವರ ಪರವಾಗಿ ವಾದಿಸುವನು; ಸೂರೆಮಾಡಬಂದವರ ಪ್ರಾಣವನ್ನು ಆತನೆ ಸೂರೆ ಮಾಡುವನು.
೨೪
ಕೋಪಿಷ್ಠನ ಸಂಗಡ ಸ್ನೇಹ ಬೆಳೆಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.
೨೫
ಹಾಗೆ ಮಾಡಿದರೆ ಅವರ ದುರ್ನಡತೆಯನ್ನು ಕಲಿತುಕೊಳ್ಳುವೆ, ನಿನ್ನ ಪ್ರಾಣ ಉರುಲಿಗೆ ತುತ್ತಾಗುವುದು, ಎಚ್ಚರಿಕೆ!
೨೬
ಬೇರೆಯವರ ಸಾಲಕ್ಕೆ ಹೊಣೆಯಾಗಬೇಡ, ಅದಕ್ಕಾಗಿ ಕೈ ಮೇಲೆ ಕೈ ಇಟ್ಟು ಜಾಮೀನು ನಿಲ್ಲಬೇಡ.
೨೭
ಆ ಸಾಲ ತೀರಿಸಲು ನಿನ್ನಿಂದ ಸಾಧ್ಯವಾಗದಿರಲು, ಅವನೇಕೆ ನೀನು ಮಲಗಿರುವ ಹಾಸಿಗೆಯನ್ನೇ ಕಿತ್ತುಕೊಳ್ಳಬೇಕು?
೨೮
ನಿನ್ನ ಪೂರ್ವಜರು ಹಾಕಿರುವ ಎಲ್ಲೆ ಗುರುತನ್ನು, ಸ್ಥಳಾಂತರಿಸಬೇಡ ನೀನು.
೨೯
ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು.