English
A A A A A
×

ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೨೧
ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.
ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ.
ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ.
ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.
ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ.
ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು.
ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ, ಅವರನ್ನೇ ಎಳೆದೊಯ್ಯುವುದು ಅವರ ಹಿಂಸಾಚಾರ.
ದೋಷಿಯ ದಾರಿ ಸೊಟ್ಟಗೆ; ದೋಷರಹಿತನ ನಡತೆ ನೆಟ್ಟಗೆ.
ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.
೧೦
ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ.
೧೧
ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ.
೧೨
ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ.
೧೩
ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?
೧೪
ಗುಟ್ಟಾಗಿ ಬಹುಮಾನ ಕೊಟ್ಟು ಸಿಟ್ಟನ್ನು ಅಡಗಿಸುತ್ತಾರೆ; ಮಡಿಲಲ್ಲಿ ಲಂಚವನ್ನು ಮುಚ್ಚಿಟ್ಟು ಕೋಪವನ್ನು ಆರಿಸುತ್ತಾರೆ.
೧೫
ನ್ಯಾಯವಾದ ತೀರ್ಪಿನಿಂದ ಸಜ್ಜನರಿಗೆ ಸಂತಸ; ದುರ್ಜನರಿಗಾದರೊ ಅದು ತರುತ್ತದೆ ಸಂಕಟ.
೧೬
ಬುದ್ಧಿಮಾರ್ಗ ಬಿಟ್ಟು ನಡೆದವನು ಪ್ರೇತಗಳ ನಡುವೆ ವಿಶ್ರಾಂತಿ ಪಡೆಯುವನು.
೧೭
ಭೋಗಾಸಕ್ತನು ಬಡವನಾಗುವನು, ಮಧ್ಯಸುಗಂಧಗಳನ್ನು ಬಯಸುವವನು ಧನವಂತನಾಗನು.
೧೮
ದುರ್ಜನರು ಸಜ್ಜನರಿಗೆ ದ್ರೋಹಿಗಳು; ನೀತಿವಂತರಿಗೆ ಮಾಡಲಾಶಿಸುವ ಕೇಡಿಗೆ ತಾವೇ ಈಡಾಗುವರು.
೧೯
ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲು ಕಾಡಿನಲ್ಲಿ ಒಂಟಿಯಾಗಿ ವಾಸಿಸುವುದೇ ಲೇಸು.
೨೦
ಬುದ್ಧಿವಂತನ ಮನೆಯ ಸಿರಿ, ಎಣ್ಣೆ ಬೆಣ್ಣೆ; ಬುದ್ಧಿಹೀನನು ನುಂಗಿಬಿಡುವನು ಸರ್ವಸ್ವವನ್ನೆ.
೨೧
ನೀತಿ ಪ್ರೀತಿ ಪಾಲಿಸುವವನಿಗೆ ಲಭಿಸುವುದು ಆಯುಸ್ಸು, ಕೀರ್ತಿ, ದೊಡ್ಡಸ್ತಿಕೆ.
೨೨
ಜ್ಞಾನಿ ಹಿಡಿಯಬಲ್ಲನು ಬಲಿಷ್ಠರ ಪಟ್ಟಣವನ್ನು ಕೆಡವಬಲ್ಲನು ಅವರ ಬಲವಾದ ಕೋಟೆಯನ್ನು.
೨೩
ಬಾಯನ್ನೂ ನಾಲಿಗೆಯನ್ನೂ ಕಾಯಬಲ್ಲವನು ಜಯಿಸುವನು ತೊಂದರೆ ತಾಪತ್ರಯಗಳನ್ನು.
೨೪
ಸೊಕ್ಕೇರಿದ ಗರ್ವಿ ಕುಚೋದ್ಯನೆನಿಸಿಕೊಳ್ಳುವನು; ಅಹಂಕಾರ, ಮದಮತ್ಸರಗಳಿಂದ ಅವನು ವರ್ತಿಸುವನು.
೨೫
ಮೈಗಳ್ಳನನ್ನು ಕೊಲ್ಲುವುದು ಅವನ ಇಚ್ಛೆಯೆ; ಬಗ್ಗದು ಅವನ ಕೈ ದುಡಿಮೆಗೆ.
೨೬
ಇಲ್ಲವೆನ್ನದೆ ಕೊಡುವವರು ಸಜ್ಜನರು; ದಾನವೆಲ್ಲ ಬೇಕೆನ್ನುತ್ತಿರುವವನು ಜಿಪುಣನು.
೨೭
ದುಷ್ಟರು ಅರ್ಪಿಸುವ ಬಲಿಯಜ್ಞ ಅಸಹ್ಯ; ದುರಾಲೋಚನೆಯಿಂದ ಅರ್ಪಿಸುವುದು ಮತ್ತೂ ಅಸಹ್ಯ.
೨೮
ಸುಳ್ಳು ಸಾಕ್ಷಿ ಹೇಳುವವನೇ ಅಳಿದುಹೋಗುವನು; ಕೇಳಿದ್ದನ್ನೆ ಹೇಳುವವನ ಸಾಕ್ಷಿ ಅಳಿಯದೆ ಉಳಿಯುವುದು.
೨೯
ದುಷ್ಟನ ಮುಖದಲ್ಲಿ ಹಟಭಾವನೆ; ಸಜ್ಜನನ ನಡತೆಯಲ್ಲಿ ಸದೃಢತೆ.
೩೦
ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.
೩೧
ಯುದ್ಧಕ್ಕಾಗಿ ಸನ್ನದ್ಧವಾಗಿರಬಹುದು ಅಶ್ವಬಲ; ಜಯಸಿಗುವುದಾದರೋ ಸರ್ವೇಶ್ವರನಿಂದ.