English
A A A A A
×

ಕನ್ನಡ ಬೈಬಲ್ (KNCL) 2016

ಜ್ಞಾನೋಕ್ತಿಗಳು ೨೦
ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ.
ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು; ಅವನನ್ನು ಕೆಣಕುವವನು ಪ್ರಾಣಕ್ಕೆ ಅಪಾಯ ತಂದುಕೊಳ್ವನು.
ಕಲಹಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು; ಕಲಹಕ್ಕೆ ಕೈಹಾಕುವ ಪ್ರತಿಯೊಬ್ಬನು ಮೂರ್ಖನು.
ಮೈಗಳ್ಳನು ಮಳೆಗಾಲದಲ್ಲೂ ಹೊಲ ಉಳಲಾರನು; ಸುಗ್ಗಿಕಾಲದಲ್ಲಿ ಅಂಗಲಾಚಿದರೂ ಅವನಿಗೆ ಬೆಳೆಸಿಗಲಾರದು.
ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರ ತೆಗೆಯಬಲ್ಲ ಸೇದಿ.
ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ಆದರೆ ನಂಬಿಗಸ್ತ ಸ್ನೇಹಿತನು ಸಿಗುವುದೆಲ್ಲಿ?
ನಿರ್ದೋಷಿಗಳಾಗಿ ನಡೆಯುತ್ತಾರೆ ನೀತಿವಂತರು; ಅವರು ಗತಿಸಿದ ಮೇಲೂ ಅವರ ಸಂತತಿಯವರು ಭಾಗ್ಯವಂತರು.
ರಾಜನು ನ್ಯಾಯಾಸನದ ಮೇಲೆ ವಿರಾಜಿಸುವಾಗ ಕೆಟ್ಟತನವನ್ನು ತೂರಿಬಿಡುವನು ದೃಷ್ಟಿಯಿಂದ.
“ಹೃದಯವನ್ನು ಪರಿಶುದ್ಧವಾಗಿ ಇಟ್ಟುಕೊಂಡಿದ್ದೇನೆ; ಪಾಪವಿಮುಕ್ತನಾಗಿ ಪವಿತ್ರನಾಗಿದ್ದೇನೆ” ಎಂದು ಹೇಳಬಲ್ಲವನಾರು?
೧೦
ಕಳ್ಳ ಕಲ್ಲುತೂಕಗಳನ್ನೂ ಕಳ್ಳ ಅಳತೆಪಾತ್ರೆಗಳನ್ನೂ ಬಳಸುವವರನ್ನು ಕಂಡರೆ ಸರ್ವೇಶ್ವರನಿಗೆ ಅಸಹ್ಯ.
೧೧
ಹುಡುಗನಾದರೂ ನಡತೆಯಲ್ಲೇ ತೋರ್ಪಡಿಸಿಕೊಳ್ಳುವನು ತನ್ನ ಗುಣ ಶುದ್ಧವೋ, ಸತ್ಯವೋ ಎಂಬುದನ್ನು.
೧೨
ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಉಂಟುಮಾಡಿದವ ಸರ್ವೇಶ್ವರ.
೧೩
ನಿದ್ದೆಯಲ್ಲೆ ನಿರತನಾಗಿರಬೇಡ, ಬಡವನಾಗಿ ಬಿಡುವೆ. ಕಣ್ಣು ತೆರೆದು ದುಡಿ, ಹೊಟ್ಟೆತುಂಬ ಊಟ ಪಡೆವೆ.
೧೪
ಕೊಳ್ಳುವಾಗ ‘ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ’ ಅನ್ನುತ್ತಾನೆ; ಕೊಂಡಾದ ಮೇಲೆ ಮಾಡಿದ ಚೌಕಾಶಿಗಾಗಿ ಹೆಚ್ಚಳ ಪಡುತ್ತಾನೆ.
೧೫
ಹೊನ್ನು ಉಂಟು, ಹವಳದ ರಾಶಿ ಉಂಟು; ಆದರೆ ತಿಳುವಳಿಕೆಯುಳ್ಳ ತುಟಿಗಳು ಬೆಲೆಮೀರಿದ ಆಭರಣಗಳು.
೧೬
ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ.
೧೭
ವಂಚಿಸಿ ಪಡೆದ ಊಟ ಬಲು ರುಚಿ; ಆಮೇಲೆ ಬಾಯಿ ತುಂಬ ಕಲ್ಲುಜಲ್ಲಿ.
೧೮
ಉದ್ದೇಶಗಳು ಕೈಗೂಡುವುವು ಹಿತಾಲೋಚನೆಯಿಂದ; ಬುದ್ಧಿವಂತರ ಆಲೋಚನೆ ಕೇಳದೆ ಹೂಡಬೇಡ ಯುದ್ಧ.
೧೯
ಗುಟ್ಟನ್ನು ರಟ್ಟು ಮಾಡದಿರನು ಚಾಡಿಕೋರ; ತುಟಿ ಬಿಗಿಹಿಡಿಯದವನ ಗೊಡವೆ ನಿನಗೆ ಬೇಡ.
೨೦
ಹೆತ್ತವರನ್ನು ಶಪಿಸುವವನ ದೀಪ ಕಾರಿರುಳಲ್ಲೆ ಆರಿಹೋಗುವುದು ಖಚಿತ.
೨೧
ಬೇಗಬೇಗನೆ ಬಾಚಿಕೊಂಡ ಮೊದಲ ಸೊತ್ತು, ಕೊನೆಯಲ್ಲಿ ಕಳೆದುಹೋಗುವುದು ನಿಶ್ಚಿತ.
೨೨
“ಕೇಡಿಗೆ ಕೇಡು” ಎಂದು ಮುಯ್ಯಿತೀರಿಸುವುದು ಬೇಡ; ಸರ್ವೇಶ್ವರನಲ್ಲಿ ಭರವಸೆಯಿಡು, ಆತ ನಿನ್ನ ಕೈಬಿಡ.
೨೩
ತಾರತಮ್ಯದ ತೂಕದ ಕಲ್ಲು ಸರ್ವೇಶ್ವರನಿಗೆ ಅಸಹ್ಯ; ಮೋಸದ ತಕ್ಕಡಿಯನ್ನು ಬಳಸುವುದು ಸರಿಯಲ್ಲ.
೨೪
ಮಾನವನ ಸ್ಥಿತಿಗತಿ ಸರ್ವೇಶ್ವರನ ಏರ್ಪಾಡು; ಮನುಷ್ಯ ತನ್ನ ಮಾರ್ಗವನ್ನು ತಾನೇ ಹೇಗೆ ತಿಳಿದಾನು?
೨೫
ದುಡುಕಿ ದೇವರಿಗೆ ಮುಡಿಪುಕಟ್ಟುವುದು, ಹರಕೆ ಹೊತ್ತ ಮೇಲೆ ವಿಚಾರಮಾಡುವುದು, ಉರುಳಿಗೆ ಸಿಕ್ಕಿಕೊಂಡಂತೆ ಆಗುವುದು.
೨೬
ಜ್ಞಾನಿಯಾದ ಅರಸ ಚದರಿಸಿಬಿಡುವನು ದುಷ್ಟರನ್ನು; ಅವರ ಮೇಲೆ ಉರುಳಿಸುವನು ಕಣದ ಗುಂಡನ್ನು.
೨೭
ಮನುಷ್ಯನ ಆತ್ಮ ಸರ್ವೇಶ್ವರನು ಕೊಟ್ಟ ದೀಪ; ಅಂತರಂಗವನ್ನೆಲ್ಲ ಶೋಧಿಸಬಲ್ಲದು ಅದರ ಪ್ರಕಾಶ.
೨೮
ಪ್ರೀತಿಸತ್ಯತೆಗಳು ರಾಜನನ್ನು ಕಾಪಾಡುವ ಕವಚ; ಕರುಣೆಯೇ ಅವನ ಸಿಂಹಾಸನಕ್ಕೆ ಸ್ಥಿರಾಧಾರ.
೨೯
ಯುವಕರಿಗೆ ಬಲವೆ ಭೂಷಣ; ಮುದುಕರಿಗೆ ನರೆಯೆ ಕಿರೀಟ.
೩೦
ಗಾಯಗೊಳಿಸುವ ಏಟು ಕೆಟ್ಟದ್ದನ್ನು ತೊಳೆಯಬಲ್ಲ ಮದ್ದು; ಅಂತರಂಗವನ್ನೂ ಮುಟ್ಟಬಲ್ಲದು ಆ ಪೆಟ್ಟು.