೧ |
ಮಗನೇ, ನನ್ನ ಮಾತುಗಳನ್ನು ಅಂಗೀಕರಿಸು; ನಿಧಿಯಂತೆ ನನ್ನ ವಿಧಿಗಳನ್ನು ಕಾದಿರಿಸು. |
೨ |
ಜ್ಞಾನದ ಕಡೆಗೆ ಕಿವಿಗೊಡು, ವಿವೇಕದ ಕಡೆಗೆ ಮನತಿರುಗಿಸು. |
೩ |
ಬುದ್ಧಿಗಾಗಿ ಮೊರೆಯಿಡು, ವಿವೇಕಕ್ಕಾಗಿ ಕೂಗಿಕೊಳ್ಳು. |
೪ |
ಹಣದಂತೆ ಅದನ್ನು ಹುಡುಕು, ನಿಧಿಯಂತೆ ಅದನ್ನು ತಡಕು. |
೫ |
ಆಗ ಅರಿತುಕೊಳ್ಳುವೆ ದೈವಭಯವನ್ನು, ಪಡೆದುಕೊಳ್ಳುವೆ ದೈವಜ್ಞಾನವನ್ನು. |
೬ |
ಜ್ಞಾನವನ್ನು ನೀಡುವಾತ ಸರ್ವೇಶ್ವರನೇ; ತಿಳುವಳಿಕೆ, ವಿವೇಕ ಹೊರಡುವುದು ಆತನ ಬಾಯಿಂದಲೇ. |
೭ |
ಜ್ಞಾನವನ್ನು ಸಜ್ಜನರಿಗೆ ಸೇರಿಸಿಡುವನಾತ, ಸನ್ಮಾರ್ಗಿಗಳಿಗೆ ಕವಚವಾಗಿರುವನಾತ. |
೮ |
ನ್ಯಾಯಮಾರ್ಗವನ್ನು ಕಾಯುವನಾತ, ಭಕ್ತರ ಹಾದಿಯನ್ನು ಭದ್ರವಾಗಿಸುವನಾತ. |
೯ |
ಆಗ ನೀತಿನ್ಯಾಯಗಳನ್ನು ನೀನರಿತುಕೊಳ್ಳುವೆ, ಸಕಲ ಸನ್ಮಾರ್ಗಸತ್ಯತೆಗಳನ್ನೂ ತಿಳಿದುಕೊಳ್ಳುವೆ. |
೧೦ |
ಜ್ಞಾನ ಉದಯಿಸುವುದು ನಿನ್ನ ಹೃದಯದೊಳಗೆ, ತಿಳುವಳಿಕೆ ಬೆಳಗುವುದು ನಿನ್ನ ಆತ್ಮದೊಳಗೆ. |
೧೧ |
ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು. |
೧೨ |
ಹೀಗೆ ದುರ್ಮಾರ್ಗದಿಂದ ತಪ್ಪಿಸಿಕೊಳ್ಳುವೆ, ಮೂರ್ಖ ಮಾತುಗಾರನಿಂದ ಮರೆಯಾಗುವೆ. |
೧೩ |
ಅಂಥವರು ಹಿಡಿವುದು ಕತ್ತಲು ಹಾದಿಯನ್ನು, ತೊರೆದುಬಿಡುವರು ಸತ್ಯದ ಮಾರ್ಗವನ್ನು. |
೧೪ |
ಅವರು ಸಂತೋಷಿಸುವುದು ಕೇಡನ್ನು ಮಾಡುವುದರಲ್ಲಿ. ಉಲ್ಲಾಸಿಸುವುದು ಕೆಟ್ಟವರ ದುಷ್ಟತನದಲ್ಲಿ, |
೧೫ |
ಅವರ ಮಾರ್ಗ ಅಂಕು, ಅವರ ನಡತೆ ಡೊಂಕು. |
೧೬ |
ವಿವೇಕವು ನಿನ್ನನ್ನು ತಪ್ಪಿಸುವುದು ಜಾರಳಿಂದ, ಸವಿಮಾತಾಡುವ ಆ ಪರಸ್ತ್ರೀಯಳಿಂದ. |
೧೭ |
ನಿನ್ನನ್ನು ಅದು ತಪ್ಪಿಸುವುದು ತನ್ನ ಯೌವನಕಾಲದ ಪ್ರಿಯನನ್ನು ತ್ಯಜಿಸಿದವಳಿಂದ, ತನ್ನ ದೇವರ ಮುಂದೆ ಮಾಡಿದ ಒಪ್ಪಂದವನ್ನು ಮರೆತವಳಿಂದ. |
೧೮ |
ಅವಳ ಮನೆ ಪಾತಾಳಕ್ಕಿಳಿಸುವ ದಾರಿ, ಅವಳ ಮಾರ್ಗ ಪ್ರೇತಲೋಕಕ್ಕೆ ಹಾದಿ. |
೧೯ |
ಅವಳ ಬಳಿಗೆ ಹೋಗುವವರು ಹಿಂದಿರುಗುವುದಿಲ್ಲ, ಅವರಿಗೆ ಜೀವಮಾರ್ಗ ಪುನಃ ದೊರಕುವುದಿಲ್ಲ. |
೨೦ |
ನೀನಾದರೊ ಸಜ್ಜನರ ಮಾರ್ಗದಲ್ಲಿ ನಡೆವೆ, ನೀತಿವಂತರ ಹಾದಿಯನ್ನು ಹಿಡಿವೆ. |
೨೧ |
ಸತ್ಯವಂತರು ನಾಡಿನಲ್ಲಿ ಬಾಳುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. |
೨೨ |
ದುರುಳರಾದರೋ ನಾಡಿನಿಂದ ಬೇರ್ಪಡುವರು, ದ್ರೋಹಿಗಳು ಅಲ್ಲಿಂದ ಅಳಿದು ನಾಶವಾಗುವರು.
|
Kannada Bible (KNCL) 2016 |
No Data |