೧ |
ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ. |
೨ |
ಅನ್ಯಾಯದ ಸಂಪತ್ತು ನಿಷ್ಪ್ರಯೋಜಕ; ಧರ್ಮವು ಮೃತ್ಯುವಿನಿಂದ ರಕ್ಷಕ. |
೩ |
ಸತ್ಪುರುಷನನ್ನು ಸರ್ವೇಶ್ವರ ಹಸಿವೆಗೊಳಿಸನು; ದುಷ್ಟನ ಆಶೆಯನ್ನಾತ ಭಂಗಪಡಿಸುವನು. |
೪ |
ಜೋಲುಗೈ ತರುತ್ತದೆ ದಾರಿದ್ರ್ಯ; ಚುರುಕು ಕೈ ತರುತ್ತದೆ ಐಶ್ವರ್ಯ. |
೫ |
ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತ; ಕೊಯ್ಲಿನಲ್ಲಿ ತೂಕಡಿಸುವವನು ಲಜ್ಜೆಗೆಡುಕ. |
೬ |
ಸಜ್ಜನರ ತಲೆಯ ಮೇಲೆ ಆಶೀರ್ವಾದ; ದುರ್ಜನರ ಬಾಯಿ ಹಿಂಸಾಚಾರದ ಮುಚ್ಚಳ. |
೭ |
ಸಜ್ಜನರ ಸ್ಮರಣೆ ಮಂಗಳಕರ; ದುರ್ಜನರ ಹೆಸರು ಅಸಹ್ಯಕರ. |
೮ |
ಬುದ್ಧಿಜೀವಿಗಳು ಆಜ್ಞೆಗಳನ್ನು ಅಂಗೀಕರಿಸುವರು; ಹರಟೆಕೋರ ಹುಚ್ಚರು ನೆಲ ಕಚ್ಚುವರು. |
೯ |
ನಿರ್ದೋಷಿ ನಡೆಯುವನು ನಿರ್ಭಯನಾಗಿ; ವಕ್ರಮಾರ್ಗಿ ಸಿಕ್ಕಿಬಿಡುವನು ಬಟ್ಟಬಯಲಾಗಿ. |
೧೦ |
ಕಣ್ಣು ಮಿಟುಕಿಸುವವನು ತೊಂದರೆಗೆ ಕಾರಣನು; ನೆಟ್ಟಗೆ ಗದರಿಸುವವನು ಸಮಾಧಾನಕರನು. |
೧೧ |
ಸಜ್ಜನನ ಬಾಯಿ ಜೀವದ ಬುಗ್ಗೆ; ದುರ್ಜನನ ಬಾಯಿತುಂಬ ಚಿತ್ರಹಿಂಸೆ. |
೧೨ |
ಜಗಳವೆಬ್ಬಿಸುತ್ತದೆ ದ್ವೇಷ; ಪಾಪಗಳ ಮರೆಸುತ್ತದೆ ಪ್ರೇಮ. |
೧೩ |
ಬುದ್ಧಿವಂತನ ಬಾಯಿಂದ ಜ್ಞಾನ; ಬುದ್ಧಿಹೀನನ ಬೆನ್ನಿಗೆ ಬೆತ್ತ. |
೧೪ |
ಬುದ್ಧಿವಂತರು ಜ್ಞಾನದ ಭಂಡಾರಿಗಳು; ಮೂರ್ಖನ ಮಾತುಗಳು ವಿನಾಶದ ಸೋಪಾನಗಳು. |
೧೫ |
ಐಶ್ವರ್ಯವಂತನಿಗೆ ಐಶ್ವರ್ಯವೇ ಬಲವಾದ ಡೆಂಕಣ; ಬಡವನ ಅಳಿವಿಗೆ ಬಡತನವೇ ಕಾರಣ. |
೧೬ |
ಸಜ್ಜನರ ದುಡಿತ ಜೀವಾಸ್ಪದ; ದುರ್ಜನರ ಆದಾಯ ಪಾಪಾಸ್ಪದ. |
೧೭ |
ಶಿಸ್ತನ್ನು ಕೈಗೊಳ್ಳುವವನು ಜೀವಮಾರ್ಗದಲ್ಲಿರುವನು; ತಿದ್ದುಪಾಟನ್ನು ತಿರಸ್ಕರಿಸುವವನು ದಾರಿ ತಪ್ಪುವನು. |
೧೮ |
ಹೊಟ್ಟೆಯಲ್ಲಿ ಹಗೆ ಇಟ್ಟುಕೊಳ್ಳುವವನು ಸಟೆಗಾರ; ಚಾಡಿ ಹೇಳಿ ಕೇಡುಮಾಡುವುದು ಮೂರ್ಖತನ. |
೧೯ |
ವಾಚಾಳಿಗೆ ಪಾಪ ತಪ್ಪದು; ಮೌನಿಗೆ ಜ್ಞಾನ ಕೆಡದು. |
೨೦ |
ಸಜ್ಜನರ ನಾಲಿಗೆ ಚೊಕ್ಕಬೆಳ್ಳಿ; ದುರ್ಜನರ ಹೃದಯ ಹುಲ್ಲುಕಡ್ಡಿ. |
೨೧ |
ಸಜ್ಜನರ ಭಾಷಣದಿಂದ ಬಹುಜನರಿಗೆ ಪೋಷಣ; ಬುದ್ಧಿಹೀನತೆಯಿಂದ ಮೂರ್ಖರಿಗೆ ನಾಶನ. |
೨೨ |
ಸರ್ವೇಶ್ವರನ ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟದುಃಖ. |
೨೩ |
ಮೂರ್ಖನಿಗೆ ಕೆಡುಕುಮಾಡುವ ಚಟ; ಬುದ್ಧಿವಂತನಿಗೆ ಜ್ಞಾನಗಳಿಸುವ ಹಟ. |
೨೪ |
ದುರ್ಜನರು ಭಯಪಡುವುದೇ ಸಂಭವಿಸುವುದು; ಸಜ್ಜನರು ಇಷ್ಟಪಡುವುದೇ ಲಭಿಸುವುದು. |
೨೫ |
ಬಿರುಗಾಳಿ ಬೀಸಿದರೆ ದುರ್ಜನರು ಇಲ್ಲವಾಗುವರು; ಸಜ್ಜನರಾದರೋ ಸದಾಕಾಲ ಸ್ಥಿರವಾಗಿ ನಿಲ್ಲುವರು. |
೨೬ |
ಹಲ್ಲಿಗೆ ಹುಳಿ ಹೇಗೋ, ಕಣ್ಣಿಗೆ ಹೊಗೆ ಹೇಗೋ; ಯಜಮಾನನಿಗೆ ಮೈಗಳ್ಳನು ಹಾಗೆ. |
೨೭ |
ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ಬಾಳುವರು ದೀರ್ಘಕಾಲ; ದುರುಳ ಜನರ ಜೀವಮಾನವೋ ಅಲ್ಪಕಾಲ. |
೨೮ |
ಸಜ್ಜನರ ನಂಬಿಕೆ ಆನಂದಕರ; ದುರ್ಜನರ ನಿರೀಕ್ಷೆ ವಿನಾಶಕರ. |
೨೯ |
ಸನ್ಮಾರ್ಗಿಗೆ ಸರ್ವೇಶ್ವರನೆ ಆಶ್ರಯ; ಕೆಡುಕನಿಗೆ ಆತನೆ ಪ್ರಳಯ. |
೩೦ |
ಸಜ್ಜನರು ಎಂದಿಗೂ ಕದಲರು; ದುರ್ಜನರು ನಾಡಿನಲ್ಲಿ ನಿಲ್ಲರು. |
೩೧ |
ಸಜ್ಜನರ ಬಾಯಲ್ಲಿ ಜ್ಞಾನ ಮೊಳೆಯುವುದು; ನೀಚನ ನಾಲಿಗೆಯೂ ಕತ್ತರಿಸಿ ಹೋಗುವುದು. |
೩೨ |
ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.
|
Kannada Bible (KNCL) 2016 |
No Data |