A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೯ಅನಂತರ ಸರ್ವೇಶ್ವರ, ಮೋಶೆಗೆ ಹೇಳಿದ್ದೇನೆಂದರೆ: “ನೀನು ಫರೋಹನ ಬಳಿಗೆ ಹೋಗಿ ಹೀಗೆಂದು ಹೇಳು: ‘ಹಿಬ್ರಿಯರ ದೇವರಾದ ಸರ್ವೇಶ್ವರನು ತನ್ನನ್ನು ಆರಾಧಿಸಲು ತನ್ನ ಜನರಿಗೆ ನಿಮ್ಮಿಂದ ಹೋಗಲು ಅಪ್ಪಣೆಯಾಗಬೇಕೆಂದು ಹೇಳಿದ್ದರು.
ನೀನು ಅವರಿಗೆ ಅಪ್ಪಣೆಕೊಡದೆ ಇನ್ನೂ ಅವರನ್ನು ತಡೆದೆಯಾದರೆ,
ಸರ್ವೇಶ್ವರನು ನಾಡಿನಲ್ಲಿರುವ ನಿನ್ನ ಎಲ್ಲ ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲ ಪ್ರಾಣಿಗಳ ಮೇಲೆ ಕೈಯೆತ್ತಿ ದೊಡ್ಡರೋಗ ಬರುವಂತೆ ಮಾಡುವರೆಂದು ತಿಳಿದುಕೊ.
ಇಸ್ರಯೇಲರ ಪಶುಪ್ರಾಣಿಗಳಿಗೂ ಈಜಿಪ್ಟಿನವರ ಪಶುಪ್ರಾಣಿಗಳಿಗೂ ಆತನು ವ್ಯತ್ಯಾಸಮಾಡುವನು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯುವುದಿಲ್ಲವೆಂದು ಹೇಳು.
ಇದಕ್ಕೆ ಕಾಲವನ್ನೂ ಆತ ನಿಗದಿ ಮಾಡಿದ್ದಾರೆ; ನಾಳೆಯೇ ಈ ಕಾರ್ಯವನ್ನು ನಡೆಸುವರು,’ ಎಂದು ಹೇಳು.”
ಮಾರನೆಯ ದಿನವೇ ಸರ್ವೇಶ್ವರ ಈ ಕಾರ್ಯವನ್ನು ನೆರವೇರಿಸಿದರು. ಈಜಿಪ್ಟಿನವರ ಪಶುಪ್ರಾಣಿಗಳೆಲ್ಲಾ ಸಾಯುತ್ತಾ ಬಂದವು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯಲಿಲ್ಲ.
ಫರೋಹನು ಆಳುಗಳನ್ನು ಕಳುಹಿಸಿ ವಿಚಾರಿಸಿದನು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯಲಿಲ್ಲವೆಂದು ತಿಳಿದುಬಂದಿತು. ಆದರೂ ಕೂಡ ಫರೋಹನ ಹೃದಯ ಕಠಿಣವಾಯಿತು. ಆ ಜನರಿಗೆ ಹೊರಡಲಿಕ್ಕೆ ಅವನು ಅಪ್ಪಣೆ ಕೊಡದೆಹೋದನು.
ಸರ್ವೇಶ್ವರ, ಮೋಶೆ ಮತ್ತು ಆರೋನರಿಗೆ, “ನೀವು ಆವಿಗೆಯ ಬೂದಿಯನ್ನು ಕೈ ತುಂಬ ತೆಗೆದುಕೊಳ್ಳಿ. ಮೋಶೆ ಅದನ್ನು ಫರೋಹನ ಕಣ್ಮುಂದೆ ಆಕಾಶಕ್ಕೆ ತೂರಲಿ.
ಅದು ಪುಡಿಪುಡಿಯಾಗಿ ಈಜಿಪ್ಟ್ ದೇಶದಲ್ಲೆಲ್ಲಾ ಹಬ್ಬಿ ಮನುಷ್ಯರಲ್ಲೂ ಪಶುಪ್ರಾಣಿಗಳಲ್ಲೂ ಕುರುಗಳನ್ನೆಬ್ಬಿಸಿ ಒಡೆದು ಹುಣ್ಣಾಗುವಂತೆ ಮಾಡುವುದು,” ಎಂದು ಹೇಳಿದರು.
೧೦
ಮೋಶೆ ಮತ್ತು ಆರೋನರು ಆವಿಗೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತುಕೊಂಡರು. ಮೋಶೆ ಆ ಬೂದಿಯನ್ನು ಆಕಾಶಕ್ಕೆ ತೂರಿದನು. ಅದು ಮನುಷ್ಯರಲ್ಲೂ ಪಶುಪ್ರಾಣಿಗಳಲ್ಲೂ ಕುರುಗಳನ್ನೆಬ್ಬಿಸಿ ಒಡೆದು ಹುಣ್ಣಾಗುವಂತೆ ಮಾಡಿತು.
೧೧
ಆ ಹುಣ್ಣುಗಳು ಮಂತ್ರವಾದಿಗಳಲ್ಲೂ ಈಜಿಪ್ಟಿನವರೆಲ್ಲರಲ್ಲೂ ಇದ್ದುದರಿಂದ ಆ ಮಂತ್ರವಾದಿಗಳು ಹುಣ್ಣುಗಳ ನಿಮಿತ್ತ ಮೋಶೆಯ ಮುಂದೆ ನಿಲ್ಲಲಾರದೆ ಹೋದರು.
೧೨
ಆದರೂ ಸರ್ವೇಶ್ವರ, ಮೋಶೆಗೆ ಮುಂತಿಳಿಸಿದಂತೆಯೇ ಆಯಿತು. ಸರ್ವೇಶ್ವರ ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
೧೩
ಬಳಿಕ ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಬೆಳಿಗ್ಗೆ ಎದ್ದು ಹೋಗಿ ಫರೋಹನ ಮುಂದೆ ನಿಂತುಕೊಂಡು ಹೀಗೆನ್ನಬೇಕು: ‘ಹಿಬ್ರಿಯರ ದೇವರಾದ ಸರ್ವೇಶ್ವರ ನಿನಗೆ ಮಾಡುವ ಆಜ್ಞೆ ಇದು - ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆಕೊಡಬೇಕು.
೧೪
ಇಲ್ಲವಾದರೆ ಈ ಸಾರಿ ವಿಧಿಸುವ ಈ ಬಾಧೆಗಳು ನಿನ್ನ ಪ್ರಜಾಪರಿವಾರದವರಿಗೆ ಮಾತ್ರವಲ್ಲ ನಿನಗೂ ತಗಲುವುದು. ಇದರಿಂದ ಇಡೀ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವೆ.
೧೫
ನಾನು ಕೈಯೆತ್ತಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಅಂಟುರೋಗದಿಂದ ಸಾಯಿಸಬಹುದಾಗಿತ್ತು. ಆಗ ನೀನು ಈವರೆಗೆ ಭೂಮಿಯಲ್ಲಿ ಇರದಂತೆ ನಿರ್ಮೂಲವಾಗುತ್ತಿದ್ದೆ.
೧೬
ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೆ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.
೧೭
ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯೋ?
೧೮
ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು. ಈಜಿಪ್ಟಿನ ರಾಜ್ಯ ಸ್ಥಾಪಿತವಾಗಿ ಇಂದಿನವರೆಗೂ ಬೀಳದಂಥ ಕಲ್ಲಿನ ಮಳೆ ಬೀಳುವುದು.
೧೯
ಆದಕಾರಣ ಆಳುಗಳನ್ನು ಕಳಿಸಿ ನಿನ್ನ ಪಶುಪ್ರಾಣಿಗಳನ್ನೂ ನಿನ್ನ ಹೊಲಗದ್ದೆಯಲ್ಲಿ ಇರುವದೆಲ್ಲವನ್ನು ಭದ್ರಪಡಿಸು. ಮನೆಗೆ ಸೇರದೆ ಹೊರಗೆ ಇರುವ ಎಲ್ಲ ನರಮಾನವರೂ, ಪಶುಪ್ರಾಣಿಗಳೂ ಆ ಕಲ್ಲಿನ ಮಳೆಯ ಹೊಡೆತದಿಂದ ಸಾಯುವರು'.”
೨೦
ಫರೋಹನ ಸೇವಕರಲ್ಲಿ ಕೆಲವರು ಸರ್ವೇಶ್ವರನ ಈ ಮಾತಿಗೆ ಹೆದರಿ ತಮ್ಮ ಆಳುಗಳನ್ನೂ ಪಶುಪ್ರಾಣಿಗಳನ್ನೂ ಬೇಗನೆ ಮನೆಗೆ ಬರಮಾಡಿಕೊಂಡರು.
೨೧
ಮಿಕ್ಕವರು ಆ ಮಾತನ್ನು ಗಮನಕ್ಕೆ ತಂದುಕೊಳ್ಳದೆ ತಮ್ಮ ಆಳುಗಳನ್ನೂ ಪಶುಪ್ರಾಣಿಗಳನ್ನೂ ಹೊಲಗದ್ದೆಗಳಲ್ಲೇ ಬಿಟ್ಟರು.
೨೨
ಸರ್ವೇಶ್ವರ ಮೋಶೆಗೆ; “ಆಕಾಶದತ್ತ ನಿನ್ನ ಕೈಚಾಚು; ಆಗ ಈಜಿಪ್ಟ್ ದೇಶದಲ್ಲೆಲ್ಲಾ ಆನೆಕಲ್ಲಿನ ಮಳೆ ಬೀಳುವುದು - ಮನುಷ್ಯರ ಮೇಲೂ ಮೃಗಗಳ ಮೇಲೂ ಹೊಲದಲ್ಲಿನ ಪೈರುಪಚ್ಚೆಗಳ ಮೇಲೂ ಬೀಳುವುದು,” ಎಂದು ಹೇಳಿದರು.
೨೩
ಅಂತೆಯೇ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಸರ್ವೇಶ್ವರ ಗುಡುಗನ್ನೂ ಆನೆಕಲ್ಲಿನ ಮಳೆಯನ್ನೂ ಕಳುಹಿಸಿದರು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಈಜಿಪ್ಟ್ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದರು ಸರ್ವೇಶ್ವರ.
೨೪
ಆ ಮಳೆ ಬಲು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತ್ತಿತ್ತು. ಈಜಿಪ್ಟಿನವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.
೨೫
ಆ ಮಳೆಯಿಂದ ಈಜಿಪ್ಟ್ ದೇಶದ ಎಲ್ಲಾ ಕಡೆಯಲ್ಲಿ ಮನುಷ್ಯರು - ಮೃಗಗಳು ಮಾತ್ರವಲ್ಲ ಬಯಲಿನಲ್ಲಿ ಇದ್ದ ಎಲ್ಲವೂ ನಾಶವಾದುವು; ಹೊಲಗದ್ದೆಗಳಲ್ಲಿದ್ದ ಪೈರುಪಚ್ಚೆಗಳೆಲ್ಲವು ಬಿದ್ದುಹೋದವು.
೨೬
ಇಸ್ರಯೇಲರು ವಾಸವಾಗಿದ್ದ ಗೋಷೆನ್ ಪ್ರಾಂತ್ಯದಲ್ಲಿ ಮಾತ್ರ ಆ ಮಳೆ ಬೀಳಲಿಲ್ಲ.
೨೭
ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, ಅವರಿಗೆ, “ನಾನು ಅಪರಾಧಿಯೆಂದು ಈಗ ಒಪ್ಪಿಕೊಳ್ಳುತ್ತೇನೆ. ಸರ್ವೇಶ್ವರನು ಸತ್ಯವಂತನು; ನಾನೂ ನನ್ನ ಜನರೂ ತಪ್ಪಿತಸ್ಥರು.
೨೮
ಈ ಭಯಂಕರವಾದ ಗುಡುಗು ಮತ್ತು ಆನೆಕಲ್ಲು ಮಳೆ ಇನ್ನು ಸಾಕೇ ಸಾಕು. ಇವುಗಳನ್ನು ನಿಲ್ಲಿಸುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿರಿ. ಈ ದೇಶವನ್ನು ಬಿಟ್ಟು ಹೋಗುವುದಕ್ಕೆ ನಿಮಗೆ ಅಪ್ಪಣೆಕೊಡುತ್ತೇನೆ. ಇನ್ನು ನಿಮ್ಮನ್ನು ತಡೆಯುವುದಿಲ್ಲ,” ಎಂದು ಹೇಳಿದನು.
೨೯
ಅದಕ್ಕೆ ಮೋಶೆ, “ನಾನು ಈ ಪಟ್ಟಣದಿಂದಾಚೆಗೆ ಹೋದ ಕೂಡಲೆ ಸರ್ವೇಶ್ವರ ಸ್ವಾಮಿಯ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು. ಆಗ ಗುಡುಗು ಮತ್ತು ಕಲ್ಲಿನ ಮಳೆಯು ನಿಂತುಹೋಗುವುವು. ಇದರಿಂದ ಇಡೀ ಲೋಕವು ಸರ್ವೇಶ್ವರನ ಅಧೀನದಲ್ಲಿದೆ ಎಂದು ತಾವು ತಿಳಿದುಕೊಳ್ಳುವಿರಿ.
೩೦
ಆದರೂ ತಾವಾಗಲಿ ತಮ್ಮ ಪರಿವಾರದವರಾಗಲಿ ದೇವರಾದ ಸರ್ವೇಶ್ವರನಿಗೆ ಭಯಪಡುವುದಿಲ್ಲವೆಂದು ಬಲ್ಲೆನು,” ಎಂದನು.
೩೧
ಜವೆಗೋದಿ ಮತ್ತು ಅಗಸೆ ಬೆಳೆಗಳು ನಾಶವವಾದವು. ಏಕೆಂದರೆ ಜವೆಗೋದಿ ತೆನೆಬಿಟ್ಟಿತ್ತು, ಅಗಸೆ ಮೊಗ್ಗು ಕಚ್ಚಿತ್ತು.
೩೨
ಆದರೆ ಗೋದಿ ಮತ್ತು ಕಡಲೆ ಹಿಂದಿನ ಬೆಳೆಗಳಾಗಿದ್ದುದರಿಂದ ಅವುಗಳಿಗೆ ನಷ್ಟವಾಗಲಿಲ್ಲ.
೩೩
ಮೋಶೆ ಫರೋಹನನ್ನು ಬಿಟ್ಟು ಪಟ್ಟಣದಿಂದ ಹೊರಗೆ ಬಂದು ಸರ್ವೇಶ್ವರ ಸ್ವಾಮಿಯ ಕಡೆಗೆ ಕೈಯೆತ್ತಿ ಪ್ರಾರ್ಥಿಸಿದನು. ಗುಡುಗು, ಆನೆಕಲ್ಲು ಹಾಗು ಮಳೆ ನಿಂತುಹೋದವು.
೩೪
ಆದರೆ ಆ ಮಳೆ, ಆ ಕಲ್ಲುಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನು ಹಾಗು ಅವನ ಪರಿವಾರದವರು ತಮ್ಮ ಹೃದಯಗಳನ್ನು ಪುನಃ ಕಠಿಣವಾಗಿಸಿಕೊಂಡು, ಪಾಪ ಕಟ್ಟಿಕೊಂಡರು.
೩೫
ಮೋಶೆಯ ಮುಖಾಂತರ ಸರ್ವೇಶ್ವರ ಹೇಳಿಸಿದಂತೆಯೇ ಆಯಿತು. ಫರೋಹನ ಹೃದಯ ಕಲ್ಲಾಯಿತು, ಇಸ್ರಯೇಲರನ್ನು ಅವನು ಹೋಗಲು ಬಿಡಲಿಲ್ಲ.