A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೪ಆಗ ಮೋಶೆ ಉತ್ತರ ನೀಡಿ,” ಆಲಿಸಬೇಕು; ಆ ಜನರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋಗಬಹುದು: ‘ಸರ್ವೇಶ್ವರ ಸ್ವಾಮಿ ನಿನಗೆ ಕಾಣಿಸಿಕೊಂಡಿದ್ದೇ ಇಲ್ಲ’ ಎಂದು ಹೇಳಬಹುದು” ಎಂದನು.
ಅದಕ್ಕೆ ಸರ್ವೇಶ್ವರ ಅವನನ್ನು, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದರು, ಅವನು, “ಇದು ಕೋಲು” ಎಂದನು.
ಸರ್ವೇಶ್ವರ ಅವನಿಗೆ, “ಅದನ್ನು ನೆಲದಲ್ಲಿ ಬಿಸಾಡು,” ಎಂದರು. ನೆಲದಲ್ಲಿ ಬಿಸಾಡುತ್ತಲೇ ಅದು ಹಾವಾಯಿತು! ಅದನ್ನು ಕಂಡ ಮೋಶೆ ಭಯಪಟ್ಟು ಓಡಿಹೋದನು.
ಸರ್ವೇಶ್ವರ ಅವನಿಗೆ, “ಕೈಚಾಚಿ ಅದರ ಬಾಲವನ್ನು ಹಿಡಿ,” ಎಂದರು. ಅಂತೆಯೇ ಹಿಡಿದಾಗ ಅದು ಕೋಲು ಆಯಿತು. ಆಗ ಸರ್ವೇಶ್ವರ ಅವನಿಗೆ,
“ಇದರಿಂದ ಆ ಜನರು ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನಿನಗೆ ಕಾಣಸಿದ್ದು ನಿಜ ಎಂಬುದನ್ನು ನಂಬುವರು,” ಎಂದು ಹೇಳಿದರು.
ಮತ್ತೆ ಸರ್ವೇಶ್ವರ ಅವನಿಗೆ, “ನಿನ್ನ ಕೈಯನ್ನು ನಿನ್ನ ಉಡಿಗೆಯಲ್ಲಿ ಇಟ್ಟುಕೊ,” ಎಂದರು. ಅಂತೆಯೇ ಉಡಿಗೆಯಲ್ಲಿ ಇಟ್ಟು ಹೊರಗೆ ತೆಗೆದಾಗ ಅವನ ಕೈ ತೊನ್ನುಹತ್ತಿ ಹಿಮದಂತೆ ಬೆಳ್ಳಗಾಗಿ ಇತ್ತು.
ಸರ್ವೇಶ್ವರ ಅವನಿಗೆ, “ನಿನ್ನ ಕೈಯನ್ನು ತಿರುಗಿ ಉಡಿಗೆಯಲ್ಲಿ ಸೇರಿಸು,” ಎಂದು ಹೇಳಿದರು. ಹಾಗೆಯೆ ಅವನು ಅದನ್ನು ಉಡಿಗೆಯಲ್ಲಿ ಸೇರಿಸಿದನು. ಬಳಿಕ ತೆಗೆದು ನೋಡಿದಾಗ ಅದು ಉಳಿದ ಮೈಯಂತೆಯೇ ಆಗಿತ್ತು.
ಆಗ ಸರ್ವೇಶ್ವರ ಅವನಿಗೆ, “ಆ ಜನರು ನಿನ್ನನ್ನು ನಂಬದೆ ಮೊದಲನೆಯ ಸೂಚಕಕಾರ್ಯವನ್ನು ಅರ್ಥಮಾಡಿಕೊಳ್ಳದೆ ಹೋದರೂ ಎರಡನೆಯದನ್ನು ಅರ್ಥಮಾಡಿಕೊಂಡು ನಂಬುವರು.
ಈ ಎರಡು ಸೂಚಕಕಾರ್ಯಗಳನ್ನೂ ಅವರು ಮನಸ್ಸಿಗೆ ತಂದುಕೊಳ್ಳದೆ ಹಾಗು ನಿನ್ನ ಮಾತನ್ನು ನಂಬದೆ ಹೋದರೆ ನೀನು ನೈಲ್ ನದಿಯಿಂದ ನೀರನ್ನು ತೆಗೆದುಕೊಂಡು ಒಣನೆಲದ ಮೇಲೆ ಸುರಿ. ಆಗ ನೆಲದಲ್ಲಿ ಸುರಿದ ನೀರು ರಕ್ತವಾಗುವುದು,” ಎಂದು ಹೇಳಿದರು.
೧೦
ಆದರೆ ಮೋಶೆ ಸರ್ವೇಶ್ವರನಿಗೆ, “ಸ್ವಾಮಿ, ನಾನು ವಾಕ್ಚಾತುರ್ಯ ಇಲ್ಲದವನು; ಮೊದಲಿನಿಂದಲೂ ಹಾಗು ತಾವು ನಿಮ್ಮ ದಾಸನ ಸಂಗಡ ಮಾತಾಡಿದ ಮೇಲೆಯೂ ಹಾಗೆಯೇ ಇದ್ದೇನೆ. ನನ್ನ ಮಾತು ತೊದಲು, ನನ್ನ ನಾಲಿಗೆ ಮಂದ,” ಎಂದನು.
೧೧
ಅದಕ್ಕೆ ಸರ್ವೇಶ್ವರ, “ಮನುಷ್ಯರಿಗೆ ಬಾಯಿಕೊಟ್ಟವರು ಯಾರು? ಒಬ್ಬನನ್ನು ಮೂಕನಾಗಿ, ಮತ್ತೊಬ್ಬನನ್ನು ಕಿವುಡನಾಗಿ, ಇನ್ನೊಬ್ಬನನ್ನು ಕಣ್ಣುಳ್ಳವನಾಗಿ, ಮಗದೊಬ್ಬನನ್ನು ಕಣ್ಣಿಲ್ಲದವನಾಗಿ ಇಡುವವರು ಯಾರು? ಸರ್ವೇಶ್ವರನಾಗಿರುವ ನಾನೇ ಅಲ್ಲವೆ?
೧೨
ಆದುದರಿಂದ ಈಗಲೇ ಹೊರಡು; ನಿನ್ನ ಬಾಯಲ್ಲಿ ನಾನೇ ಇರುವೆನು; ನೀನು ಮಾತಾಡಬೇಕಾದುದನ್ನು ನಿನಗೆ ಕಲಿಸಿಕೊಡುವೆನು,” ಎಂದು ಹೇಳಿದರು.
೧೩
ಅದಕ್ಕೆ ಮೋಶೆ, “ಸ್ವಾಮೀ, ಈ ಕಾರ್ಯಕ್ಕೆ ತಾವು ಬೇರೊಬ್ಬನನ್ನು ನೇಮಿಸಬೇಕು,” ಎನ್ನಲು, ಸರ್ವೇಶ್ವರ ಅವನ ಮೇಲೆ ಸಿಟ್ಟುಗೊಂಡರು.
೧೪
ಅವನಿಗೆ, “ಲೇವಿಯನಾದ ಆರೋನನು ನಿನಗೆ ಅಣ್ಣನಲ್ಲವೆ? ಅವನು ಚೆನ್ನಾಗಿ ಮಾತಾಡಬಲ್ಲನೆಂದು ನನಗೆ ಗೊತ್ತಿದೆ. ಇಗೋ, ಅವನೇ ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ನಿನ್ನನ್ನು ಕಂಡು ಆನಂದಿಸಲಿದ್ದಾನೆ.
೧೫
ನೀನು ಅವನ ಸಂಗಡ ಮಾತಾಡಿ ಹೇಳಬೇಕಾದ ವಿಷಯಗಳನ್ನು ತಿಳಿಸು. ನಾನು ನಿನಗೂ ಅವನಿಗೂ ಹೇಗೆ ಮಾತಾಡಬೇಕೆಂದು ತಿಳಿಸಿ ನೀವು ಮಾಡಬೇಕಾದುದನ್ನು ಕಲಿಸುವೆನು.
೧೬
ನಿನ್ನ ಪರವಾಗಿ ಅವನೇ ಆ ಜನರ ಸಂಗಡ ಮಾತಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತೆ ಇರುವೆ.
೧೭
ಈ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವೆ,” ಎಂದರು.
೧೮
ಇದಾದ ಮೇಲೆ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂದಿರುಗಿ ಬಂದು, “ನಾನು ಈಜಿಪ್ಟ್ ದೇಶದಲ್ಲಿರುವ ಸ್ವಜನರ ಬಳಿಗೆ ಮರಳಿ ಹೋಗಿ ಅವರು ಜೀವದಿಂದ ಇದ್ದಾರೋ ಇಲ್ಲವೋ ನೋಡುವುದಕ್ಕೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದನು. ಇತ್ರೋನನು, “ಸುಖವಾಗಿ ಹೋಗಿ ಬಾ,” ಎಂದನು.
೧೯
ಮಿದ್ಯಾನ್ ನಾಡಿನಲ್ಲಿ ಸರ್ವೇಶ್ವರ ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಮರಳಿ ಹೋಗು. ನಿನ್ನನ್ನು ಕೊಲ್ಲಬೇಕೆಂದಿದ್ದವರೆಲ್ಲರು ಸತ್ತುಹೋದರು,” ಎಂದು ತಿಳಿಸಿದರು.
೨೦
ಆದ್ದರಿಂದ ಮೋಶೆ ತನ್ನ ಮಡದಿ ಮಕ್ಕಳನ್ನು ಹೇಸರ ಕತ್ತೆಯ ಮೇಲೆ ಏರಿಸಿಕೊಂಡು ಈಜಿಪ್ಟಿಗೆ ಹೊರಟುಹೋದನು. ದೇವದಂಡ ಅವನ ಕೈಯಲ್ಲಿತ್ತು.
೨೧
ಸರ್ವೇಶ್ವರ ಮೋಶೆಗೆ ಮತ್ತೆ ಇಂತೆಂದರು: “ನೀನು ಈಜಿಪ್ಟಿಗೆ ಮರಳಿದಾಗ ನಾನು ನಿನಗೆ ತೋರಿಸಿಕೊಟ್ಟ ಸೂಚಕಕಾರ್ಯಗಳನ್ನೆಲ್ಲಾ ಫರೋಹ ರಾಜನ ಮುಂದೆ ಮಾಡಿ ತೋರಿಸು. ಆದರೆ ನಾನು ಅವನ ಹೃದಯವನ್ನು ಕಲ್ಲಾಗಿಸುವೆನು. ಅವನು ಇಸ್ರಯೇಲರನ್ನು ಹೋಗಗೊಡಿಸುವುದಿಲ್ಲ.
೨೨
ಆಗ ನೀನು ಅವನಿಗೆ ತಿಳಿಸಬೇಕಾದುದು, 'ಸರ್ವೇಶ್ವರನು ಹೇಳುವುದನ್ನು ಕೇಳು: ಇಸ್ರಯೇಲ್ ಜನತೆ ನನಗೆ ಮಗನಂತೆ, ಜ್ಯೇಷ್ಠಪುತ್ರನಂತಿದೆ.
೨೩
ನನ್ನನ್ನು ಆರಾಧಿಸಲು ನಿನ್ನ ದೇಶದಿಂದ ಹೊರಡುವುದಕ್ಕೆ ಅವನಿಗೆ ಅಪ್ಪಣೆಕೊಡು.' ಇದಕ್ಕೆ ನೀನು ಒಪ್ಪದೆ ಹೋದರೆ ನಾನು ನಿನ್ನ ಜ್ಯೇಷ್ಠ ಪುತ್ರನನ್ನು ಕೊಲ್ಲುವೆನು,”
೨೪
ಈಜಿಪ್ಟಿಗೆ ಹೋಗುವ ದಾರಿಯಲ್ಲಿದ್ದ ಛತ್ರವೊಂದರಲ್ಲಿ ಸರ್ವೇಶ್ವರ ಅವನೆದುರಿಗೆ ಬಂದು ಅವನ ಪ್ರಾಣ ತೆಗೆಯಬೇಕೆಂದಿದ್ದರು.
೨೫
ಆಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ ಮೋಶೆಗೆ, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ,” ಎಂದು ಹೇಳಿ
೨೬
ಕತ್ತರಿಸಿದ ಮುಂದೊಗಲನ್ನು ಅವನ ಪಾದಗಳಿಗೆ ಮುಟ್ಟಿಸಿದಳು. ಆಗ ಸರ್ವೇಶ್ವರ ಅವನನ್ನು ಉಳಿಸಿದರು. ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ,” ಎಂದು ಹೇಳಿದ್ದು.
೨೭
ಇದಲ್ಲದೆ ಸರ್ವೇಶ್ವರ ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳಲು ಮರುಭೂಮಿಗೆ ತೆರಳು,” ಎಂದರು. ಅಂತೆಯೇ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಎದುರುಗೊಂಡು ಮುದ್ದಿಟ್ಟನು.
೨೮
ಆಗ ಮೋಶೆ, ಸರ್ವೇಶ್ವರ ಸ್ವಾಮಿ ತನ್ನನ್ನು ಕಳಿಸುವಾಗ ಯಾವ ಮಾತುಗಳನ್ನು ಹೇಳಿದರೋ ಏನೇನು ಸೂಚಕಕಾರ್ಯಗಳು ಮಾಡಬೇಕೆಂದು ಆಜ್ಞಾಪಿಸಿದರೋ ಅವುಗಳನ್ನೆಲ್ಲ ಆರೋನನಿಗೆ ತಿಳಿಸಿದನು.
೨೯
ತರುವಾಯ ಅವರಿಬ್ಬರು ಹೋಗಿ ಇಸ್ರಯೇಲರ ಹಿರಿಯರನ್ನೆಲ್ಲ ಕೂಡಿಸಿದರು.
೩೦
ಮೋಶೆಗೆ ಸರ್ವೇಶ್ವರ ಹೇಳಿದ ಮಾತುಗಳನ್ನೆಲ್ಲ ಆರೋನನು ಆ ಜನರಿಗೆ ತಿಳಿಸಿದನು. ಮೋಶೆ ಅವರ ಮುಂದೆ ಆ ಸೂಚಕಕಾರ್ಯಗಳನ್ನು ಮಾಡಿದನು. ಜನರು ನಂಬಿದರು.
೩೧
ಸರ್ವೇಶ್ವರ ಸ್ವಾಮಿ ತಮ್ಮನ್ನು ಭೇಟಿಮಾಡಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡಿದ್ದಾರೆಂದು ತಿಳಿದ ಆ ಇಸ್ರಯೇಲರು ತಲೆಬಾಗಿ ಆರಾಧಿಸಿದರು.