೧ |
“ಬೆಚಲೇಲನು ಮತ್ತು ಒಹೋಲೀಯಾಬನು ಎಲ್ಲವನ್ನು ಸರ್ವೇಶ್ವರ ಸ್ವಾಮಿ ಆಜ್ಞಾಪಿಸಿದ ಪ್ರಕಾರವೇ ಮಾಡುವರು. ಬೇರೆ ಕಲೆಗಾರರು, ಅಂದರೆ ಸರ್ವೇಶ್ವರನಿಂದ ಜ್ಞಾನವಿವೇಕಗಳನ್ನು ಹೊಂದಿ, ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಬೇಕಾದ ಸಕಲವಿಧ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಅವರೊಂದಿಗೆ ಕೆಲಸ ಮಾಡುವರು,” ಎಂದನು. |
೨ |
ಬೆಚಲೇಲನನ್ನು ಒಹೋಲೀಯಾಬನನ್ನು ಮತ್ತು ಸರ್ವೇಶ್ವರನಿಂದ ಜ್ಞಾನಪಡೆದು ಕೆಲಸ ಕೈಗೊಳ್ಳಲು ಉತ್ಸುಕರಾಗಿದ್ದ ಕಲೆಗಾರರೆಲ್ಲರನ್ನು ಮೋಶೆ ತನ್ನ ಬಳಿಗೆ ಕರೆಸಿದನು. |
೩ |
ಅವರು ದೇವಮಂದಿರದ ನಿರ್ಮಾಣಕ್ಕಾಗಿ ಜನರು ಕೊಟ್ಟಿದ್ದ ಕಾಣಿಕೆಗಳನ್ನು ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಯೇಲರು ಪ್ರತಿದಿನ ಬೆಳಿಗ್ಗೆ ಮೋಶೆಯ ಬಳಿಗೆ ಬಂದು ಹೆಚ್ಚೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು. |
೪ |
ದೇವಮಂದಿರದ ನಿರ್ಮಾಣದಲ್ಲಿ ಮಗ್ನರಾಗಿದ್ದ ಆ ಶಿಲ್ಪಿಗಳೆಲ್ಲರು ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮೋಶೆಯ ಬಳಿಗೆ ಬಂದು, |
೫ |
“ಸರ್ವೇಶ್ವರ ಆಜ್ಞಾಪಿಸಿದ ಕೆಲಸಕ್ಕೆ ಬೇಕಾದುದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಿದ್ದಾರೆ,” ಎಂದು ಹೇಳಿದರು. |
೬ |
ಆಗ ಮೋಶೆ, “ದೇವಮಂದಿರದ ನಿರ್ಮಾಣಕ್ಕಾಗಿ ಯಾವ ಸ್ತ್ರೀಪುರುಷನು ಇನ್ನು ಮುಂದೆ ಏನನ್ನೂ ತರಬಾರದೆಂದು ಅಪ್ಪಣೆಮಾಡಿ, ಪಾಳೆಯದಲ್ಲಿ ಪ್ರಕಟಿಸಿ, ಜನರ ಕಾಣಿಕೆಗಳನ್ನು ನಿಲ್ಲಿಸಿಬಿಟ್ಟನು. |
೭ |
ನಿರ್ಮಾಣ ಕೆಲಸ ಮುಗಿಸುವುದಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚಾಗಿ ಸರಕುಸಾಮಗ್ರಿಗಳನ್ನು ಶೇಖರಿಸಲಾಗಿತ್ತು. |
೮ |
ನಿಪುಣ ಶಿಲ್ಪಗಾರರೆಲ್ಲರು ಸೇರಿ ಹತ್ತು ತಾನು ನಯವಾದ ನಾರುಬಟ್ಟೆಯಿಂದ ಗುಡಾರವನ್ನು ನಿರ್ಮಿಸಿದರು. ಆ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮತ್ಕಾರವಾಗಿ ಕಸೂತಿಹಾಕಿ ಮಾಡಿದರು. |
೯ |
ಪ್ರತಿಯೊಂದು ಬಟ್ಟೆ ಇಪ್ಪತ್ತೆಂಟು ಮೊಳ ಉದ್ದ ಹಾಗು ನಾಲ್ಕು ಮೊಳ ಅಗಲವಾಗಿತ್ತು. ಎಲ್ಲ ಬಟ್ಟೆಗಳು ಒಂದೇ ಅಳತೆಯಾಗಿದ್ದವು. |
೧೦ |
ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿದರು. |
೧೧ |
ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು. |
೧೨ |
ಆ ಕುಣಿಕೆಗಳನ್ನು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರಾಗಿ ಇರಿಸಿದರು. |
೧೩ |
ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿ ಆ ಬಟ್ಟೆಗಳನ್ನು ಒಂದಕ್ಕೊಂದು ಕೂಡಿಸಿದರು. ಹೀಗೆ ಒಂದೇ ಗುಡಾರ ಆಯಿತು. |
೧೪ |
ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡುಕೂದಲಿನ ಹನ್ನೊಂದು ತಾನು ಬಟ್ಟೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದರು. |
೧೫ |
ಒಂದೊಂದು ಬಟ್ಟೆಯೂ ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು; ಎಲ್ಲಾ ಬಟ್ಟೆಗಳೂ ಒಂದೇ ಅಳತೆಯಾಗಿದ್ದವು. |
೧೬ |
ಐದು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಬಟ್ಟೆಗಳನ್ನು ಒಂದಾಗಿ ಜೋಡಿಸಿದರು. |
೧೭ |
ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿಸಿದರು. |
೧೮ |
ಒಂದೇ ಡೇರೆಯಾಗುವಂತೆ ಸಮಸ್ತವನ್ನು ಕೂಡಿಸುವುದಕ್ಕಾಗಿ ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿದರು. |
೧೯ |
ಅದಲ್ಲದೆ ಹದಮಾಡಿರುವ ಕುರಿದೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನೂ ಕಡಲುಹಂದಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿದರು. |
೨೦ |
ಗುಡಾರಕ್ಕೆ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿದರು. |
೨೧ |
ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದವಾಗಿಯೂ ಒಂದುವರೆ ಮೊಳ ಅಗಲವಾಗಿಯೂ ಇತ್ತು; |
೨೨ |
ಪ್ರತಿಯೊಂದು ಚೌಕಟ್ಟೂ ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವುಪಟ್ಟಿಗಳುಳ್ಳದ್ದಾಗಿತ್ತು; ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆ ಮಾಡಿದರು. |
೨೩ |
ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು. |
೨೪ |
ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಟ್ಟರು; ಒಂದೊಂದು ಚೌಕಟ್ಟಿನಲ್ಲಿರುವ ಎರಡು ನಿಲುವುಪಟ್ಟಿಗಳ ಕೆಳಗೆ ಒಂದೊಂದು ಗದ್ದಿಗೇಕಲ್ಲನ್ನು ಇಟ್ಟರು. |
೨೫ |
ಹಾಗೆಯೇ ಗುಡಾರದ ಉತ್ತರದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮತ್ತು |
೨೬ |
ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೇಕಲ್ಲುಗಳ ಮೇರೆಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. |
೨೭ |
ಗುಡಾರದ ಹಿಂಭಾಗಕ್ಕೆ, ಅಂದರೆ ಪಶ್ಚಿಮದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿದರು. |
೨೮ |
ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು; |
೨೯ |
ಅವು ಬುಡದಿಂದ ತುದಿಯವರೆಗೂ ಅಂದರೆ ಮೊದಲನೆಯ ಬಳೆಯ ತನಕ ಜೋಡಿಸಿದ್ದವು; ಹಾಗೆ ಎರಡು ಮೂಲೆಗಳಿಗೂ ಮಾಡಿದರು. |
೩೦ |
ಹೀಗೆ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೇಕಲ್ಲುಗಳೂ, ಅಂತೂ ಹದಿನಾರು ಗದ್ದಿಗೇಕಲ್ಲುಗಳೂ ಇದ್ದವು. |
೩೧ |
ಜಾಲೀಮರದಿಂದ ಅಗುಳಿಗಳನ್ನು ಮಾಡಿದರು. |
೩೨ |
ಹಿಂದುಗಡೆಯ ಅಂದರೆ ಪಶ್ಚಿಮಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿದರು. |
೩೩ |
ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟುವಂತೆ ಮಾಡಿದರು. |
೩೪ |
ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿದರು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಿದರು. |
೩೫ |
ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮತ್ಕಾರವಾಗಿ ಕಸೂತಿ ಹಾಕಿ ಒಂದು ತೆರೆಯನ್ನು ಮಾಡಿದರು. |
೩೬ |
ಅದಕ್ಕೆ ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿ ಚಿನ್ನದ ತಗಡುಗಳನ್ನು ಹೊದಿಸಿದರು; ಅವುಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿ, ನಾಲ್ಕು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಎರಕಹೊಯಿಸಿದರು. |
೩೭ |
ಡೇರೆಯ ಬಾಗಿಲಿಗೆ ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿಹಾಕಿ ಪರದೆಯನ್ನು ಮಾಡಿದರು. |
೩೮ |
ಆ ಪರದೆ ತೂಗಿಸುವುದಕ್ಕಾಗಿ ಐದು ಕಂಬಗಳನ್ನೂ ಅವುಗಳ ಕೊಂಡಿಗಳನ್ನೂ ಮಾಡಿ, ಅವುಗಳ ಬೋದಿಗೆಗಳಿಗೂ ಕಟ್ಟುಗಳಿಗೂ ಚಿನ್ನದ ತಗಡುಗಳನ್ನು ಹೊದಿಸಿದರು. ಅವುಗಳ ಐದು ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಿದರು.
|
Kannada Bible (KNCL) 2016 |
No Data |