೧ |
ಸರ್ವೇಶ್ವರ ಸ್ವಾಮಿ ಮೋಶೆಗೆ, “ನೀನು ಮೊದಲಿನ ಕಲ್ಲಿನ ಹಲಗೆಗಳಂತೆ ಇನ್ನು ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೋ. ನೀನು ಒಡೆದುಬಿಟ್ಟ ಆ ಮೊದಲನೆಯ ಹಲಗೆಗಳ ಮೇಲಿದ್ದ ವಾಕ್ಯಗಳನ್ನು ನಾನು ಈ ಹಲಗೆಗಳ ಮೇಲೆ ಬರೆಯುವೆನು. |
೨ |
ಬೆಳಿಗ್ಗೆ ನೀನು ಸಿದ್ಧವಾಗಿದ್ದು, ಸೀನಾಯಿ ಬೆಟ್ಟವನ್ನು ಹತ್ತಿ, ಅಲ್ಲಿ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರು. |
೩ |
ಯಾರೂ ನಿನ್ನ ಜೊತೆಯಲ್ಲಿ ಮೇಲಕ್ಕೆ ಬರಕೂಡದು. ಈ ಬೆಟ್ಟದ ಮೇಲೆ ಯಾರೂ ಎಲ್ಲಿಯೂ ಕಾಣಿಸಕೂಡದು. ದನಕುರಿಗಳೂ ಈ ಬೆಟ್ಟದ ಮುಂದೆ ಮೇಯಕೂಡದು,” ಎಂದು ಹೇಳಿದರು. |
೪ |
ಅಂತೆಯೇ ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು. |
೫ |
ಆಗ ಸರ್ವೇಶ್ವರ ಸ್ವಾಮಿ ಮೇಘಾವೃತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. |
೬ |
ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳು ದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು, |
೭ |
ಸಾವಿರಾರು ತಲೆಗಳವರೆಗೂ ಅಚಲಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷಪರಿಣಾಮಗಳನ್ನು ಮಕ್ಕಳ ಮೇಲೆ ಮೂರುನಾಲ್ಕು ತಲೆಗಳವರೆಗೆ ಬರಮಾಡುವವರು. |
೮ |
ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ, |
೯ |
ಸ್ವಾಮಿ, ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು. |
೧೦ |
ಸರ್ವೇಶ್ವರ ಮೋಶೆಗೆ, “ಕೇಳು, ನಾನೊಂದು ಒಡಂಬಡಿಕೆಯನ್ನು ಮಾಡುತ್ತೇನೆ. ಜಗದಲ್ಲಿ ಯಾವ ನಾಡಿನಲ್ಲೂ ಯಾವ ಜನಾಂಗದಲ್ಲೂ ನಡೆಯದಂಥ ಮಹಾತ್ಕಾರ್ಯಗಳನ್ನು ನಿನ್ನ ಜನರೆಲ್ಲರು ನೋಡುವಂತೆ ನಡೆಸುವೆನು. ನಿಮ್ಮ ಸುತ್ತಮುತ್ತಲಿರುವ ಜನರೆಲ್ಲರು ಸರ್ವೇಶ್ವರನಾದ ನಾನು ಮಾಡುವ ಮಹಾತ್ಕಾರ್ಯವನ್ನು ನೋಡುವರು. ನಾನು ನಿಮ್ಮ ವಿಷಯದಲ್ಲಿ ಮಾಡಬೇಕೆಂದಿರುವುದು ಅದ್ಭುತಕರವಾದುದು. |
೧೧ |
ನಾನು ಈ ದಿನ ನಿಮಗೆ ಆಜ್ಞಾಪಿಸುವುದನ್ನು ನೀವು ಅನುಸರಿಸಿ ನಡೆಯಬೇಕು. ಇಗೋ, ನಾನು ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಹಾಗು ಯೆಬೂಸಿಯರನ್ನು ನಿಮ್ಮ ಮುಂದೆಯೇ ಹೊರಡಿಸಿಬಿಡುವೆನು. |
೧೨ |
ನೀವು ಸೇರುವ ನಾಡಿನ ನಿವಾಸಿಗಳೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳದಂತೆ ಎಚ್ಚರಿಕೆಯಿಂದಿರಿ; ಮಾಡಿಕೊಂಡರೆ ಅದು ಕೊರಳನ್ನು ಸಿಕ್ಕಿಸುವ ಉರುಳಾಗುವುದು. |
೧೩ |
ಅವರ ಬಲಿಪೀಠಗಳನ್ನು ಕೆಡವಿಬಿಡಿ; ಅವರ ಕಲ್ಲುಕಂಬದ ವಿಗ್ರಹಗಳನ್ನು ಒಡೆದುಬಿಡಿ; ‘ಅಶೇರ’ ಎಂಬ ಸ್ತಂಭಗಳನ್ನು ಕಡಿದುಬಿಡಿ. |
೧೪ |
ನೀವು ಬೇರೆ ದೇವರ ಮುಂದೆ ಅಡ್ಡಬೀಳಬಾರದು; ಏಕೆಂದರೆ ಸ್ವಾಭಿಮಾನಿಯೆಂಬ ಹೆಸರುಳ್ಳ ಸರ್ವೇಶ್ವರನಾದ ನಾನು ನನಗೆ ಸಲ್ಲಬೇಕಾದ ಅಭಿಮಾನವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ. |
೧೫ |
ನೀವು ಆ ನಾಡಿನ ನಿವಾಸಿಗಳ ಸಂಗಡ ಒಪ್ಪಂದ ಮಾಡಿಕೊಳ್ಳದಂತೆ ಜಾಗರೂಕರಾಗಿರಿ. ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಬಲಿಯರ್ಪಿಸುವಾಗ ಬಲಿ ಭೋಜನಕ್ಕೆ ನಿಮ್ಮನ್ನು ಕರೆಯಬಹುದು. ನೀವು ಹೋಗಿ ಅದನ್ನು ಭುಜಿಸುವ ಸಂಭವವುಂಟು. |
೧೬ |
ಅದೂ ಅಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಹೆಣ್ಣುಗಳನ್ನು ತೆಗೆದುಕೊಳ್ಳುವುದಕ್ಕೆ ಆಸ್ಪದವುಂಟಾಗುವುದು. ಅನಂತರ ಆ ಸೊಸೆಯಂದಿರು ತೌರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನು ಅನ್ಯದೇವರುಗಳ ಪೂಜೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು. ಆದ್ದರಿಂದ ಎಚ್ಚರಿಕೆಯಾಗಿರಿ. |
೧೭ |
“ನಿಮಗಾಗಿ ದೇವರುಗಳ ಎರಕದ ವಿಗ್ರಹಗಳನ್ನು ಮಾಡಿಸಿಕೊಳ್ಳಬೇಡಿ. |
೧೮ |
“ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬಗಳನ್ನು ಆಚರಿಸಿರಿ. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದ ನಿಯಮಿತ ಕಾಲದಲ್ಲಿ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ನೀವು ಚೈತ್ರಮಾಸದಲ್ಲಿ ಈಜಿಪ್ಟಿನಿಂದ ಬಿಡುಗಡೆಯಾಗಿ ಹೊರಬಂದದ್ದು. |
೧೯ |
“ಪ್ರಥಮ ಗರ್ಭಫಲವೆಲ್ಲಾ, ಅಂದರೆ ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲು ಮರಿಗಳೆಲ್ಲಾ ಗಂಡಾಗಿದ್ದರೆ ಅವು ನನ್ನವೇ. |
೨೦ |
ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು. ಹಾಗೆ ಬಿಡಿಸಲಾಗದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಗುವನ್ನು ಕೊಲ್ಲದೆ, ಬದಲುಕೊಟ್ಟು ಬಿಡಿಸಲೇಬೇಕು. ಯಾರೂ ಬರೀಗೈಯಲ್ಲಿ ನನ್ನ ಮುಂದೆ ಕಾಣಿಸಿಕೊಳ್ಳಬಾರದು.” |
೨೧ |
“ಆರು ದಿವಸಗಳು ನೀವು ದುಡಿಯಬಹುದು. ಆದರೆ ಏಳನೆಯ ದಿನ ಯಾವ ದುಡಿಮೆಯನ್ನೂ ಮಾಡಬಾರದು. ಅದು ಉಳುವ ಕಾಲವಾಗಿರಲಿ, ಕೊಯ್ಯುವ ಕಾಲವಾಗಿರಲಿ ಏಳನೆಯ ದಿನ ದುಡಿಯದೆ ಇರಬೇಕು. |
೨೨ |
“ಹೊಸ ಗೋದಿ ಬೆಳೆಯ ಪ್ರಥಮ ಸಮರ್ಪಣೆಯ, ಅಂದರೆ (ಪಾಸ್ಕವಾದ ಏಳು) ವಾರಗಳ ಮೇಲೆ ನೀವು ಸುಗ್ಗಿಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಬೆಳೆ ಒಕ್ಕಣೆಯ ಹಬ್ಬವನ್ನು ಆಚರಿಸಬೇಕು. |
೨೩ |
ವರ್ಷಕ್ಕೆ ಮೂರು ಸಾರಿ ನಿಮ್ಮಲ್ಲಿರುವ ಗಂಡಸರೆಲ್ಲರು ಇಸ್ರಯೇಲರ ದೇವರೂ ಸರ್ವೇಶ್ವರನೂ ಆದ ನನ್ನ ಸನ್ನಿಧಿಯಲ್ಲಿ ಸೇರಬೇಕು. |
೨೪ |
ನಾನು ನಿಮ್ಮ ಎದುರಿನಿಂದ ಅನ್ಯಜನರನ್ನು ಹೊರಡಿಸಿ ನಿಮ್ಮ ಎಲ್ಲೆಯನ್ನು ವಿಸ್ತರಿಸುವೆನು. ಅದೂ ಅಲ್ಲದೆ ನೀವು ವರ್ಷಕ್ಕೆ ಮೂರು ಸಾರಿ ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಸನ್ನಿಧಿಗೆ ಬರುವಾಗ ಯಾರೂ ನಿಮ್ಮ ನಾಡನ್ನು ಅಪಹರಿಸಲು ಅಪೇಕ್ಷಿಸುವುದಿಲ್ಲ. |
೨೫ |
ನನಗೆ ಬಲಿಯರ್ಪಿಸುವಾಗ ಆ ಬಲಿಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಕೂಡದು. ಪಸ್ಕದಲ್ಲಿ ನೀವು ಸಮರ್ಪಿಸುವ ಬಲಿ ಮಾಂಸವನ್ನು ಮರುದಿನದವರೆಗೂ ಉಳಿಸಬಾರದು. |
೨೬ |
“ಭೂಮಿಯ ಮೊದಲನೆಯ ಬೆಳೆಗಳಲ್ಲಿ ಶ್ರೇಷ್ಠವಾದುದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು. “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಕೂಡದು.” |
೨೭ |
ಸರ್ವೇಶ್ವರ ಮೋಶೆಗೆ, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಆಧಾರದ ಮೇಲೆ ನಾನು ನಿನ್ನೊಂದಿಗೂ ಇಸ್ರಯೇಲರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ,” ಎಂದು ಹೇಳಿದರು. |
೨೮ |
ಮೋಶೆ ಆ ಬೆಟ್ಟದಲ್ಲಿ ನಾಲ್ವತ್ತು ದಿನ ಹಗಲಿರುಳೂ ಅನ್ನಪಾನವಿಲ್ಲದೆ ಸರ್ವೇಶ್ವರನ ಸನ್ನಿಧಿಯಲ್ಲಿ ಇದ್ದನು. ಒಡಂಬಡಿಕೆಯ ವಾಕ್ಯಗಳನ್ನು, ಅಂದರೆ ಹತ್ತು ಆಜ್ಞೆಗಳನ್ನು, ಆ ಕಲ್ಲಿನ ಹಲಗೆಗಳ ಮೇಲೆ ಬರೆದನು. |
೨೯ |
ಮೋಶೆ ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಅವನ ಮುಖ ಪ್ರಕಾಶಮಾನವಾಗಿತ್ತು. ಏಕೆಂದರೆ ಅವನು ಸರ್ವೇಶ್ವರನ ಸಂಗಡ ಸಂಭಾಷಿಸಿದ್ದನು. ಆದರೆ ಅದು ಅವನಿಗೆ ತಿಳಿದಿರಲಿಲ್ಲ. |
೩೦ |
ಮೋಶೆಯ ಮುಖ ಹೀಗೆ ಪ್ರಕಾಶವಾಗಿರುವುದನ್ನು ಆರೋನನು ಮತ್ತು ಇಸ್ರಯೇಲರೆಲ್ಲರು ನೋಡಿ ಅವನ ಹತ್ತಿರಕ್ಕೆ ಬರಲು ಭಯಪಟ್ಟರು. |
೩೧ |
ಆದರೆ ಮೋಶೆ ಅವರನ್ನು ಕರೆದನು. ಆಗ ಆರೋನನು ಹಾಗು ಜನನಾಯಕರೆಲ್ಲರು ಅವನ ಬಳಿಗೆ ಬಂದರು. ಆಗ ಮೋಶೆ ಅವರ ಸಂಗಡ ಮಾತಾಡಿದನು. |
೩೨ |
ಅನಂತರ ಇಸ್ರಯೇಲರೆಲ್ಲರು ಕೂಡ ಹತ್ತಿರಕ್ಕೆ ಬಂದರು. ಮೋಶೆ ತಾನು ಸೀನಾಯಿ ಬೆಟ್ಟದಲ್ಲಿ ಸರ್ವೇಶ್ವರನಿಂದ ಹೊಂದಿದ ಆಜ್ಞೆಗಳನ್ನೆಲ್ಲ ಅವರಿಗೆ ತಿಳಿಸಿದನು. |
೩೩ |
ಅವರೊಡನೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು. |
೩೪ |
ಸರ್ವೇಶ್ವರನ ಸಂಗಡ ಮಾತಾಡಬೇಕೆಂದು ಅವರ ಸನ್ನಿಧಿಗೆ ಹೋಗುವಾಗಲೆಲ್ಲ ಅಲ್ಲಿಂದ ಹೊರಗೆ ಬರುವ ತನಕ ಅವನು ಆ ಮುಸುಕನ್ನು ತೆಗೆದಿಡುತ್ತಿದ್ದನು. ಹೊರಗೆ ಬಂದಾಗ ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸುತ್ತಿದ್ದನು. |
೩೫ |
ಮೋಶೆಯ ಮುಖ ಪ್ರಕಾಶಮಾನವಾಗಿರುವುದನ್ನು ಇಸ್ರಯೇಲರು ಗಮನಿಸುತ್ತಿದ್ದರು. ಆದಕಾರಣ ಅವನು ಸರ್ವೇಶ್ವರನ ಸಂಗಡ ಮಾತಾಡಲು ಹೋಗುವವರೆಗೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡಿರುತ್ತಿದ್ದನು.
|
Kannada Bible (KNCL) 2016 |
No Data |