A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೩೩ಮೋಶೆಗೆ ಸರ್ವೇಶ್ವರ ಸ್ವಾಮಿ ಹೇಳಿದ ಮಾತುಗಳಿವು: “ನೀನು ಈಜಿಪ್ಟಿನಿಂದ ಕರೆದುತಂದ ಜನರನ್ನು ನಿನ್ನ ಸಂಗಡ ಕರೆದುಕೊಂಡು ಈ ಸ್ಥಳಬಿಟ್ಟು ತೆರಳು. ನಾನು ಅಬ್ರಹಾಮ್, ಇಸಾಕ್, ಯಕೋಬ್ ಎಂಬುವರೊಡನೆ ಅವನ ಸಂತತಿಯವರಿಗೆ ಕೊಡುವುದಾಗಿ ಪ್ರಮಾಣ ಮಾಡಿದ ನಾಡಿಗೆ ಹೊರಟುಹೋಗು.
ನಾನು ಒಬ್ಬ ದೂತನನ್ನು ನಿನಗೆ ಮುಂದಾಗಿ ಕಳಿಸಿ ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು, ಹಾಗು ಯೆಬೂಸಿಯರನ್ನು ಅಲ್ಲಿಂದ ಹೊರದೂಡುವೆನು.
ಅದು ಹಾಲೂ ಜೇನೂ ಹರಿಯುವ ಶ್ರೀಮಂತ ನಾಡು. ನಾನು ಸ್ವತಃ ನಿಮ್ಮ ಸಂಗಡ ಬರುವುದಿಲ್ಲ. ಏಕೆಂದರೆ ನೀವು ನನ್ನ ಆಜ್ಞೆಗೆ ತಲೆಬಾಗದ ಹಟಮಾರಿ ಜನ; ದಾರಿಯಲ್ಲೇ ನಾನು ನಿಮ್ಮನ್ನು ಸಂಹರಿಸಬೇಕಾಗಬಹುದು.
ಈ ದುಃಖಕರವಾದ ಮಾತುಗಳನ್ನು ಕೇಳಿ, ಇಸ್ರಯೇಲರು ಶೋಕತಪ್ತರಾದರು; ಒಬ್ಬರೂ ಒಡವೆ ವಸ್ತುಗಳನ್ನು ಧರಿಸಿಕೊಳ್ಳಲಿಲ್ಲ.
ಏಕೆಂದರೆ ಮೋಶೆಯ ಮುಖಾಂತರ ಸರ್ವೇಶ್ವರ, “ನೀವು ನನ್ನ ಆಜ್ಞೆಗಳಿಗೆ ಬಗ್ಗದ ಹಟಮಾರಿಗಳು. ನಾನು ಕ್ಷಣಮಾತ್ರ ನಿಮ್ಮೊಡನೆ ಬರುವುದಾದರೆ ನಿರ್ಮೂಲವಾಗಿಬಿಡುವಿರಿ, ಎಚ್ಚರಿಕೆ! ಆದ್ದರಿಂದ ನಿಮ್ಮ ಒಡವೆವಸ್ತುಗಳನ್ನು ತೆಗೆದುಬಿಡಿ. ನಿಮಗೇನು ಮಾಡಬೇಕೆಂದು ಆಲೋಚಿಸುವೆನು,” ಎಂದಿದ್ದರು.
ಅಂತೆಯೇ ಇಸ್ರಯೇಲರು ಹೋರೆಬ್ ಬೆಟ್ಟದಿಂದೀಚೆಗೆ ಒಡವೆವಸ್ತುಗಳನ್ನು ತೊಟ್ಟುಕೊಳ್ಳದೆ ಇದ್ದರು.
ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ ‘ದೇವದರ್ಶನದ ಗುಡಾರ’ ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು.
ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಗೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು.
ಮೋಶೆ ಗುಡಾರದೊಳಕ್ಕೆ ಹೋದಕೂಡಲೆ ಮೇಘಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು.
೧೦
ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದುನಿಂತು ತಮ್ಮತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು.
೧೧
ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ.
೧೨
ಮೋಶೆ ಸರ್ವೇಶ್ವರ ಸ್ವಾಮಿಗೆ, ” ಈ ಜನರನ್ನು ಇಂಥ ಈ ನಾಡಿಗೆ ನಡೆಸಿಕೊಂಡು ಹೋಗಬೇಕೆಂದು ನನಗೆ ನೀವು ವಿಧಿಸಿದಿರಿ. ನನ್ನ ಸಂಗಡ ಬೇರೆ ಯಾರನ್ನು ಕಳುಹಿಸುವಿರೆಂದು ನನಗೆ ತಿಳಿಸಲಿಲ್ಲ. ‘ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ. ನಿನಗೆ ನನ್ನ ದಯೆ ದೊರಕಿದೆ,’ ಎಂದು ಹೇಳಿದ್ದೀರಿ.
೧೩
ನನಗೆ ನಿಮ್ಮ ದಯೆ ದೊರಕಿದೆಯಾದರೆ ನಾನು ನಿಮ್ಮನ್ನು ಬಲ್ಲವನಾಗಿರುವಂತೆ ನಿಮ್ಮ ಮಾರ್ಗವನ್ನು ನನಗೆ ತೋರಿಸಿರಿ. ಆಗ ನಿಮ್ಮ ದಯೆ ನನಗೆ ದೊರಕಿದೆಯೆಂದು ತಿಳಿದುಕೊಳ್ಳುತ್ತೇನೆ. ಈ ಜನ ನಿಮ್ಮ ಪ್ರಜೆಯೆಂಬುದನ್ನು ನೆನಪಿನಲ್ಲಿಡಿ,” ಎಂದು ಅರಿಕೆ ಮಾಡಿದನು.
೧೪
ಅದಕ್ಕೆ ಸರ್ವೇಶ್ವರ, “ನನ್ನ ಪ್ರಸನ್ನತೆ ನಿನ್ನ ಜೊತೆಯಲ್ಲಿ ಬರುವುದು. ನಾನು ನಿನಗೆ ವಿಶ್ರಾಂತಿ ನೀಡುವೆನು,” ಎಂದರು.
೧೫
ಆಗ ಮೋಶೆ: “ನೀವೇ ನಮ್ಮ ಸಂಗಡ ಬಾರದೆ ಹೋದರೆ ನಮ್ಮನ್ನು ಇಲ್ಲಿಂದ ಕಳುಹಿಸಬೇಡಿ.
೧೬
ನನಗೂ ನಿಮ್ಮ ಪ್ರಜೆಗಳಾದ ಇವರಿಗೂ ನಿಮ್ಮ ಅನುಗ್ರಹ ದೊರಕಿದೆ ಎಂಬುದು ನೀವೇ ನಮ್ಮ ಸಂಗಡ ಬರುವುದರಿಂದಲೇ ಹೊರತು ಬೇರೆ ಯಾವುದರಿಂದ ತಿಳಿದೀತು? ನೀವು ಬರುವುದರಿಂದ ನಾನೂ ನಿಮ್ಮ ಪ್ರಜೆಗಳಾದ ಇವರೂ ಜಗದಲ್ಲಿರುವ ಬೇರೆ ಎಲ್ಲಾ ಜನಗಳಿಗಿಂತಲೂ ವಿಶಿಷ್ಟರಾದವರೆಂಬುದು ಖಚಿತವಾಗುವುದು,” ಎಂದನು.
೧೭
ಅದಕ್ಕೆ ಸರ್ವೇಶ್ವರ, “ನಿನ್ನ ಕೋರಿಕೆಯಂತೆ ಮಾಡುವೆನು. ಏಕೆಂದರೆ ನೀನು ನನ್ನ ಅನುಗ್ರಹಕ್ಕೆ ಪಾತ್ರನು; ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ,” ಎಂದು ಮೋಶೆಗೆ ಹೇಳಿದರು.
೧೮
ಆಗ ಮೋಶೆ, “ನಿಮ್ಮ ಮಹಿಮೆಯನ್ನು ದಯಮಾಡಿ ನನಗೆ ತೋರಿಸಿ,” ಎಂದು ವಿನಂತಿಸಿದನು.
೧೯
ಸರ್ವೇಶ್ವರ, “ನನ್ನ ಒಳ್ಳೆಯತನವೆಲ್ಲ ನಿನ್ನೆದುರಿಗೆ ಹಾದುಹೋಗುವಂತೆ ಮಾಡುವೆನು. ಸರ್ವೇಶ್ವರನಾದ ನನ್ನ ನಾಮದ ಮಹತ್ವವನ್ನು ನಿನ್ನೆದುರಿಗೆ ಪ್ರಕಟಿಸುವೆನು. ಯಾರ್ಯಾರ ಮೇಲೆ ದಯೆಯಿಡಲು ಆಶಿಸುತ್ತೇನೋ ಅವರ ಮೇಲೆ ದಯೆಯಿಡುತ್ತೇನೆ. ಯಾರ್ಯಾರನ್ನು ಕರುಣಿಸಲು ಆಶಿಸುತ್ತೇನೋ ಅವರನ್ನು ಕರುಣಿಸುತ್ತೇನೆ,” ಎಂದರು.
೨೦
ಮತ್ತೆ ಅವರು, “ಆದರೆ ನೀನು ನನ್ನ ಮುಖವನ್ನು ನೋಡಲಾಗದು. ಏಕೆಂದರೆ ನನ್ನನ್ನು ನೋಡಿದ ಮಾನವ ಜೀವಂತನಾಗಿ ಉಳಿಯಲಾರ,” ಎಂದು ಹೇಳೀದರು.
೨೧
ಇನ್ನೂ ಮೋಶೆಗೆ, “ಇಗೋ ಇಲ್ಲಿ ಸಮೀಪದಲ್ಲೇ ಒಂದು ಸ್ಥಳವಿದೇ. ನೀನು ಆ ಬಂಡೆಯ ಮೇಲೆ ನಿಂತಿರು.
೨೨
ನನ್ನ ಮಹಿಮೆ ನಿನ್ನೆದುರಿಗೆ ದಾಟಿ ಹೋಗುವಾಗ ನಾನು ಆ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ, ನಿನ್ನ ಮುಂದೆ ನಾನು ಹಾದುಹೋಗುವ ತನಕ ನಿನ್ನನ್ನು ನನ್ನ ಕೈಯಿಂದ ಮುಚ್ಚುವೆನು.
೨೩
ಬಳಿಕ ನಾನು ಕೈ ತೆಗೆವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವೆ. ಆದರೆ ನನ್ನ ಮುಖ ನಿನಗೆ ಕಾಣಿಸದು,” ಎಂದು ಸರ್ವೇಶ್ವರ ಹೇಳಿದರು.