೧ |
“ಆರೋನನು ಮತ್ತು ಅವನ ಮಕ್ಕಳು ನನಗೆ ಯಾಜಕರಾಗಿ ಸೇವೆ ಸಲ್ಲಿಸುವಂತೆ ನೀನು ಅವರನ್ನು ಹೀಗೆ ಪ್ರತಿಷ್ಠಿಸು: ಕಳಂಕರಹಿತವಾದ ಒಂದು ಹೋರಿಕರುವನ್ನು ಮತ್ತು ಎರಡು ಟಗರುಗಳನ್ನು ತೆಗೆದುಕೊ. |
೨ |
ಹುಳಿಯಿಲ್ಲದ ರೊಟ್ಟಿಗಳನ್ನು ಎಣ್ಣೆಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು ಹಾಗು ಎಣ್ಣೆ ಹೊಯಿದು ಹುಳಿಯಿಲ್ಲದ ಕಡುಬುಗಳನ್ನು ಗೋದಿ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಿಕೊ. |
೩ |
ಆಮೇಲೆ ಆ ಪುಟ್ಟಿಯನ್ನು, ಆ ಹೋರಿಯನ್ನು ಹಾಗು ಟಗರುಗಳನ್ನು ತಂದಿಡು. |
೪ |
ಬಳಿಕ ಆರೋನನನ್ನೂ ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿಗೆ ಕರೆದುಕೊಂಡು ಬಂದು ನೀರಿನಲ್ಲಿ ಸ್ನಾನಮಾಡಿಸು. |
೫ |
ತರುವಾಯ ಆರೋನನಿಗೆ ಆ ವಸ್ತ್ರಗಳನ್ನು ಅಂದರೆ, ನಿಲುವಂಗಿಯನ್ನು, ಕವಚದೊಳಗೆ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು, ಎಫೋದ್ ಕವಚವನ್ನು, ಎದೆಕವಚವನ್ನು ತೊಡಿಸಿ, ಕವಚದ ಕಸೂತಿ ನಡುಕಟ್ಟನ್ನು ಕಟ್ಟು. |
೬ |
ಅವನ ತಲೆಗೆ ಪೇಟವನ್ನು ಹಾಕಿಸಿ ಪೇಟದ ಮೇಲೆ ಪವಿತ್ರ ಪಟ್ಟಿಯನ್ನು ಕಟ್ಟಿಸು; |
೭ |
ಅಭಿಷೇಕತೈಲವನ್ನು ಅವನ ತಲೆಯ ಮೇಲೆ ಅಭ್ಯಂಜನ ಮಾಡಿ ಅವನನ್ನು ಅಭಿಷೇಕಿಸು. |
೮ |
ಅನಂತರ ಅವನ ಮಕ್ಕಳನ್ನು ಹತ್ತಿರಕ್ಕೆ ಕರೆದು ಅವರಿಗೆ ನಿಲುವಂಗಿಗಳನ್ನು ತೊಡಿಸು, ನಡುಕಟ್ಟುಗಳನ್ನು ಕಟ್ಟಿಸಿ ಪೇಟಗಳನ್ನು ಸುತ್ತಿಸು. |
೯ |
ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕ ಸೇವೆಗೆ ಸೇರಿಸು. ಅಂದಿನಿಂದ ಯಾಜಕತ್ವವು ಅವರಿಗೆ ಶಾಶ್ವತ ನಿಯಮವಾಗಿ ಪ್ರಾಪ್ತಿಸುವುದು. |
೧೦ |
ತರುವಾಯ ನೀನು ಆ ಹೋರಿಯನ್ನು ದೇವದರ್ಶನದ ಗುಡಾರದ ಎದುರಿಗೆ ತರಿಸಿ ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ಕೈಗಳನ್ನಿಟ್ಟ ನಂತರ |
೧೧ |
ಅದನ್ನು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. |
೧೨ |
ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲ ಬಲಿಪೀಠದ ಬುಡಕ್ಕೆ ಸುರಿಯಬೇಕು. |
೧೩ |
ಅದರ ವಪೆಯನ್ನು, ಕಾಳಿಜದ ಮೇಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಹಾಗು ಅವುಗಳ ಮೇಲಿರುವ ಕೊಬ್ಬನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮ ಮಾಡಬೇಕು. |
೧೪ |
ಹೋರಿಯ ಮಾಂಸವನ್ನು, ಚರ್ಮವನ್ನು ಹಾಗು ಕಲ್ಮಷವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟುಬಿಡಬೇಕು. ಏಕೆಂದರೆ ಇದು ಪಾಪಪರಿಹಾರಕ ಬಲಿದಾನ. |
೧೫ |
ಇದಾದ ಬಳಿಕ ಆ ಟಗರುಗಳಲ್ಲಿ ಒಂದನ್ನು ತೆಗೆದುಕೊ. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟ ನಂತರ |
೧೬ |
ಅದನ್ನು ವಧಿಸಿ ಅದರ ರಕ್ತವನ್ನು ಬಲಿಪೀಠದ ನಾಲ್ಕು ಕಡೆಗಳಿಗೆ ಸುರಿ. |
೧೭ |
ಆಮೇಲೆ ಆ ಟಗರನ್ನು ತುಂಡುತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆಸಿ ಅವುಗಳನ್ನೂ ಆ ತುಂಡುಗಳನ್ನೂ ಹಾಗು ತಲೆಯನ್ನೂ ಒಟ್ಟಿಗೆ ಇಟ್ಟು |
೧೮ |
ಅದನ್ನೆಲ್ಲಾ ಬಲಿಪೀಠದ ಮೇಲೆ ಸರ್ವೇಶ್ವರನಾದ ನನಗೆ ದಹನಬಲಿಯಾಗಿ ಸಮರ್ಪಿಸು. ಇದು ನನಗೆ ಪ್ರಿಯವಾದ ಸುಗಂಧ. |
೧೯ |
ಅನಂತರ ಎರಡನೆಯ ಟಗರನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ಮೇಲೆ ತಮ್ಮ ಕೈಗಳನ್ನು ಇಟ್ಟ ನಂತರ ಅದನ್ನು ವಧಿಸು. |
೨೦ |
ಅದರ ರಕ್ತದಲ್ಲಿ ಸ್ವಲ್ಪವನ್ನು ಆರೋನನ ಮತ್ತು ಅವನ ಮಕ್ಕಳ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಸೋಂಕಿಸಿ ಮಿಕ್ಕ ರಕ್ತವನ್ನು ಬಲಿಪೀಠದ ನಾಲ್ಕು ಕಡೆಗಳಿಗೂ ಸುರಿ. |
೨೧ |
ಅದಲ್ಲದೆ ಬಲಿಪೀಠದ ಮೇಲಿರುವ ರಕ್ತದಲ್ಲಿಯೂ ಅಭಿಷೇಕ ತೈಲದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿಮಕಿಸು. ಹೀಗೆ ಅವನೂ ಅವನ ಮಕ್ಕಳು ಅವನ ವಸ್ತ್ರಗಳ ಸಹಿತವಾಗಿ ಪ್ರತಿಷ್ಠಾಪಿತರಾಗುವರು. |
೨೨ |
ಪಟ್ಟಾಭಿಷೇಕಕ್ಕಾಗಿ ಸಮರ್ಪಿತವಾದ ಆ ಟಗರನ್ನೆಲ್ಲ, ಅಂದರೆ ಬಾಲದ ಕೊಬ್ಬನ್ನು, ವಪೆಯನ್ನು, ಕಾಳಿಜದ ಮೇಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು, ಅವುಗಳ ಮೇಲಿರುವ ಕೊಬ್ಬನ್ನು, |
೨೩ |
ಬಲತೊಡೆಯನ್ನು ಮತ್ತು ಸರ್ವೇಶ್ವರನಾದ ನನಗೆದುರಾಗಿ ಪುಟ್ಟಿಯಲ್ಲಿ ಇಟ್ಟಿರುವ ಹುಳಿಯಿಲ್ಲದ ಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊ. |
೨೪ |
ಅವುಗಳನ್ನೆಲ್ಲ ಆರೋನನ ಮತ್ತು ಅವನ ಮಕ್ಕಳ ಕೈಗೆ ಕೊಟ್ಟು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಕಾಣಿಕೆಯಾಗಿ ಆರತಿ ಮಾಡಿಸು. |
೨೫ |
ಆಮೇಲೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಬಲಿಪೀಠದ ಮೇಲೆ ದಹನಬಲಿಯ ಸಂಗಡ ಸರ್ವೇಶ್ವರನಾದ ನನಗೆ ಆಹುತಿ ಕೊಡು. ಇದು ನನಗೆ ಪ್ರಿಯವಾದ ಸುಗಂಧ ಆಹಾರ ದಹನಬಲಿ. |
೨೬ |
“ಆರೋನನ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಿದ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಅದನ್ನು ಕೂಡ ಕಾಣಿಕೆಯಾಗಿ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಆರತಿ ಮಾಡಿಸು. ಅದು ನಿನಗೇ ಸಲ್ಲತಕ್ಕ ಪಾಲು. |
೨೭ |
ಆರೋನನಿಗೂ ಅವನ ಮಕ್ಕಳಿಗೂ ಯಾಜಕದೀಕ್ಷೆಯನ್ನು ಕೊಡುವಾಗ ಸಮರ್ಪಿಸಿದ ಟಗರಿನ ಮಾಂಸದಲ್ಲಿ ಕಾಣಿಕೆಯಾಗಿ ಆರತಿ ಮಾಡಿಸಿದ ಎದೆಯ ಭಾಗವನ್ನು ಮತ್ತು ಯಾಜಕರ ಭಾಗಕ್ಕೆ ಪ್ರತ್ಯೇಕಿಸಿದ ಅದರ ತೊಡೆಯನ್ನು ದೇವರದೆಂದು ಭಾವಿಸಬೇಕು. |
೨೮ |
ಶಾಶ್ವತ ನಿಯಮವಾಗಿ ಇಸ್ರಯೇಲರು ಅವುಗಳನ್ನು ಆರೋನನಿಗೂ ಅವನ ವಂಶಸ್ಥರಿಗೂ ಕೊಡತಕ್ಕದ್ದು, ಅವು ಯಾಜಕರ ಭಾಗಕ್ಕಾಗಿ ಪ್ರತ್ಯೇಕಿಸಲ್ಪಟ್ಟವು. ಇಸ್ರಯೇಲರು ಸಮಾಧಾನದ ಬಲಿದಾನಕ್ಕಾಗಿ ಪ್ರಾಣಿಗಳನ್ನು ವಧಿಸಿ ಸರ್ವೇಶ್ವರನಾದ ನನಗೆ ಕಾಣಿಕೆಯನ್ನು ಅರ್ಪಿಸುವಾಗಲೆಲ್ಲಾ ಆ ಭಾಗಗಳನ್ನು ಯಾಜಕರಿಗಾಗಿ ಪ್ರತ್ಯೇಕಿಸಬೇಕು. |
೨೯ |
“ಆರೋನನ ಯಾಜಕ ದೀಕ್ಷಾವಸ್ತ್ರಗಳನ್ನು ಅವನ ತರುವಾಯ ಅವನ ವಂಶಸ್ಥರಿಗೂ ಉಪಯೋಗವಾಗುವಂತೆ ಇಡಬೇಕು. ಅವರೂ ಯಾಜಕಾಭಿಷಿಕ್ತರಾಗಿ ಮಹಾಯಾಜಕ ಸೇವೆಯನ್ನು ಕೈಗೊಂಡಾಗ ಅವುಗಳನ್ನು ಧರಿಸಿಕೊಳ್ಳಬೇಕು, |
೩೦ |
ಅವನ ಮಕ್ಕಳಲ್ಲಿ ಅವನಿಗೆ ಪ್ರತಿಯಾಗಿ ಮಹಾಯಾಜಕನಾಗುವವನು ಪವಿತ್ರಸ್ಥಾನದಲ್ಲಿ ದೇವರ ಸೇವೆಯನ್ನು ನಡೆಸುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದ ದಿನದಿಂದ ಏಳು ದಿವಸಗಳವರೆಗೆ ಆ ವಸ್ತ್ರಗಳನ್ನು ತೊಟ್ಟುಕೊಂಡಿರಬೇಕು. |
೩೧ |
ಆರೋನನ ಯಾಜಕಾಭಿಷೇಕಕ್ಕಾಗಿ ಸಮರ್ಪಿಸಿದ ಟಗರಿನ ಮಾಂಸವನ್ನು ದೇವದರ್ಶನದ ಗುಡಾರದ ಪ್ರಾಕಾರದಲ್ಲಿ ಬೇಯಿಸಬೇಕು. |
೩೨ |
ಆರೋನನು ಮತ್ತು ಅವನ ಮಕ್ಕಳು ಆ ಟಗರಿನ ಮಾಂಸವನ್ನು ಹಾಗು ಪುಟ್ಟಿಯಲ್ಲಿರುವ ರೊಟ್ಟಿಯನ್ನು ದೇವದರ್ಶನದ ಗುಡಾರದ ಬಾಗಿಲೊಳಗೆ ಊಟಮಾಡಬೇಕು. |
೩೩ |
ಅವರನ್ನು ಯಾಜಕ ಪದವಿಗೆ ಸೇರಿಸುವುದಕ್ಕೂ ದೇವರ ಸೇವೆಗೆ ಪ್ರತಿಷ್ಠಿಸುವುದಕ್ಕೂ ಯಾವ ಪದಾರ್ಥಗಳನ್ನು ಪಾಪಪರಿಹಾರಕ್ಕಾಗಿ ಸಮರ್ಪಿಸಲಾದುವೋ ಅವುಗಳನ್ನು ಅವರೇ ಭೋಜನ ಮಾಡಬೇಕು. ಇತರರು ಅವುಗಳನ್ನು ತಿನ್ನಕೂಡದು. ಏಕೆಂದರೆ ಅವು ಮೀಸಲಾದುವು. |
೩೪ |
ಯಾಜಕಾಭಿಷೇಕಕ್ಕೆ ಸಂಬಂಧಪಟ್ಟ ಮಾಂಸದಲ್ಲಾಗಲಿ, ರೊಟ್ಟಿಯಲ್ಲಾಗಲಿ ಏನಾದರೂ ಮರುದಿನದ ಉದಯದವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು. ಅದು ದೇವರ ವಸ್ತುವಾದುದರಿಂದ ಯಾರೂ ತಿನ್ನಕೂಡದು. |
೩೫ |
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿವಸದ ಆಚರಣೆಯನ್ನು ನಡೆಸಿ ಆರೋನ ಮತ್ತು ಅವನ ಮಕ್ಕಳನ್ನು ಯಾಜಕ ಸೇವೆಗೆ ಅಭಿಷೇಕಿಸು. |
೩೬ |
ಪ್ರತಿದಿನದಲ್ಲೂ ಪಾಪಪರಿಹಾರಕ್ಕಾಗಿ ಒಂದು ಹೋರಿಯನ್ನು ಬಲಿದಾನ ಮಾಡು. ಅದೂ ಅಲ್ಲದೆ ಬಲಿಪೀಠವನ್ನು ಶುದ್ಧಮಾಡುವುದಕ್ಕಾಗಿ ಅದರ ಮೇಲೆ ಪಾಪಪರಿಹಾರಕ ಬಲಿಯನ್ನು ಸಮರ್ಪಿಸಿ, ಆ ಪೀಠವನ್ನು ದೇವರ ಸೇವೆಗೋಸ್ಕರ ಅಭಿಷೇಕಿಸು. |
೩೭ |
ಹೀಗೆ ಏಳು ದಿನಗಳವರೆಗೆ ಬಲಿಪೀಠದ ನಿಮಿತ್ತ ಪಾಪಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪ್ರತಿಷ್ಠಾಪಿಸು. ಬಲಿಪೀಠವು ಅತಿಶುದ್ಧವಾಗಿರಬೇಕು. ಅದನ್ನು ಸೋಕಿದ್ದೆಲ್ಲವು ಪರಿಶುದ್ಧವಾಗುವುದು. |
೩೮ |
ಬಲಿಪೀಠದ ಮೇಲೆ ಅನುದಿನವೂ ಸಮರ್ಪಿಸಬೇಕಾದುವುಗಳು ಇವು: ಒಂದು ವರ್ಷದ ಎರಡು ಕುರಿಗಳನ್ನು ದಿನಂಪ್ರತಿ ಬಲಿದಾನ ಮಾಡಬೇಕು. |
೩೯ |
ಅವುಗಳಲ್ಲಿ ಒಂದನ್ನು ಬೆಳಿಗ್ಗೆ ಮತ್ತೊಂದನ್ನು ಸಂಜೆ ಸಮರ್ಪಿಸಬೇಕು. |
೪೦ |
ಒಂದು ಲೀಟರು ಶ್ರೇಷ್ಠವಾದ ಓಲಿವ್ ಎಣ್ಣೆಯನ್ನು ಒಂದು ಕಿಲೋಗ್ರಾಂ ಗೋದಿಹಿಟ್ಟಿಗೆ ಬೆರೆಸಿ ಧಾನ್ಯಾರ್ಪಣೆಗಾಗಿ ಆ ಮೊದಲನೆಯ ಕುರಿಯ ಸಮೇತ ಹೋಮಮಾಡಬೇಕು. |
೪೧ |
ಸಂಜೆ ಎರಡನೆಯ ಕುರಿಯನ್ನು ಬಲಿದಾನ ಮಾಡುವಾಗ ಬೆಳಿಗ್ಗೆ ಮಾಡಿದಂತೆಯೇ ಅದರೊಂದಿಗೆ ಧಾನ್ಯವನ್ನೂ ಪಾನವನ್ನೂ ಸಮರ್ಪಿಸಬೇಕು. ಅದು ಸರ್ವೇಶ್ವರನಾದ ನನಗೆ ಪ್ರಿಯವಾದ ಸುಗಂಧ ದಹನಬಲಿಯಾಗಿರುವುದು. |
೪೨ |
ನೀವು ಮತ್ತು ನಿಮ್ಮ ಸಂತತಿಯವರು ಪ್ರತಿನಿತ್ಯವೂ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನ ಎದುರಿನಲ್ಲಿ ಈ ದಹನಬಲಿಯನ್ನು ಅರ್ಪಿಸಬೇಕು. |
೪೩ |
ಅಲ್ಲಿಯೇ ನಾನು ಇಸ್ರಯೇಲರಿಗೆ ದರ್ಶನವನ್ನು ಕೊಡುವೆನು. ಅಲ್ಲಿ ಕಾಣಿಸುವ ನನ್ನ ಪ್ರಭಾವದಿಂದ ಆ ಸ್ಥಳವು ಪರಿಶುದ್ಧವಾಗಿರುವುದು. |
೪೪ |
ನಾನು ದೇವದರ್ಶನದ ಗುಡಾರವನ್ನು ಮತ್ತು ಬಲಿಪೀಠವನ್ನು ಪರಿಶುದ್ಧ ಸ್ಥಳಗಳಾಗುವಂತೆ ಮಾಡುವೆನು. ಆರೋನನು ಮತ್ತು ಅವನ ಮಕ್ಕಳು ನನಗೆ ಯಾಜಕರಾಗುವಂತೆ ಪ್ರತಿಷ್ಠಿಸಿಕೊಳ್ಳುವೆನು. |
೪೫ |
ತಮ್ಮ ಮಧ್ಯೆ ವಾಸವಾಗುವುದಕ್ಕಾಗಿಯೇ ತಮ್ಮನ್ನು ಈಜಿಪ್ಟಿನಿಂದ ಹೊರಗೆ ಬರಮಾಡಿದ ತಮ್ಮ ದೇವರಾದ ಸರ್ವೇಶ್ವರನು ನಾನೇ ಎಂದು ಅವರು ಅರಿತುಕೊಳ್ಳುವರು. ಹೌದು, ನಾನೇ ಅವರ ದೇವರಾದ ಸರ್ವೇಶ್ವರ ಸ್ವಾಮಿ.
|
Kannada Bible (KNCL) 2016 |
No Data |