೧ |
ಸರ್ವೇಶ್ವರ ಸ್ವಾಮಿ ಮೋಶೆಗೆ, “ನೀನು, ಆರೋನ, ನಾದಾಬ್ ಹಾಗೂ ಅಬೀಹೂ ಮತ್ತು ಇಸ್ರಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಸರ್ವೇಶ್ವರನಾದ ನನ್ನ ಬಳಿಗೆ ಬಂದು ದೂರದಲ್ಲೆ ನಿಂತು ಅಡ್ಡಬೀಳಬೇಕು. |
೨ |
ಮೋಶೆ ಒಬ್ಬನೇ ಹೊರತು ಅವನ ಜೊತೆಯವರಲ್ಲಿ ಯಾರೂ ನನ್ನ ಸಮೀಪಕ್ಕೆ ಬರಬಾರದು. ಮಿಕ್ಕ ಜನರು ಬೆಟ್ಟವನ್ನು ಹತ್ತಲೇಬಾರದು,” ಎಂದು ಹೇಳಿದರು. |
೩ |
ಮೋಶೆ ಜನರ ಬಳಿಗೆ ಬಂದು ಸರ್ವೇಶ್ವರನ ಎಲ್ಲ ಆಜ್ಞೆಗಳನ್ನೂ, ವಿಧಿವಿಧಾನಗಳನ್ನೂ ವಿವರಿಸಿದನು. ಜನರೆಲ್ಲರು, “ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ” ಎಂದು ಒಕ್ಕೊರಳಿನಿಂದ ಉತ್ತರ ಕೊಟ್ಟರು. |
೪ |
ಮೋಶೆ ಸರ್ವೇಶ್ವರನ ಆಜ್ಞೆಗಳನ್ನೆಲ್ಲ ಬರೆದಿಟ್ಟನು. ಬೆಳಿಗ್ಗೆ ಎದ್ದು ಆ ಬೆಟ್ಟದಡಿಯಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಇಸ್ರಯೇಲರ ಹನ್ನೆರಡು ಕುಲಗಳಿಗೆ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆ ಮಾಡಿಸಿದನು. |
೫ |
ಇಸ್ರಯೇಲರ ಯೌವನಸ್ಥರು ಸರ್ವೇಶ್ವರ ಸ್ವಾಮಿಗೆ ದಹನಬಲಿಗಳನ್ನು ಅರ್ಪಿಸುವಂತೆಯೂ ಸಮಾಧಾನದ ಬಲಿಗಾಗಿ ಹೋರಿಗಳನ್ನು ಅರ್ಪಿಸುವಂತೆಯೂ ಅಪ್ಪಣೆಕೊಟ್ಟನು. |
೬ |
ಆ ಬಲಿಪಶುಗಳ ರಕ್ತದಲ್ಲಿ ಅರ್ಧವನ್ನು ತೆಗೆದು ಬಟ್ಟಲುಗಳಲ್ಲಿ ತುಂಬಿದನು. ಮಿಕ್ಕ ಅರ್ಧವನ್ನು, ಬಲಿಪೀಠದ ಮೇಲೆ ಪ್ರೋಕ್ಷಿಸಿದನು. |
೭ |
ತರುವಾಯ, ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಅದನ್ನು ಕೇಳಿದ ಮೇಲೆ, “ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸುತ್ತೇವೆ; ಅವುಗಳಿಗೆ ವಿಧೇಯರಾಗಿರುತ್ತೇವೆ,” ಎಂದರು. |
೮ |
ಆಗ ಮೋಶೆ ಬಟ್ಟಲುಗಳಲ್ಲಿದ್ದ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲ ಆಜ್ಞೆಗಳ ಪ್ರಕಾರ ಸರ್ವೇಶ್ವರ ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತ ಇದೇ,” ಎಂದನು. |
೯ |
ಮೋಶೆ, ಆರೋನ್, ನಾದಾಬ್ ಹಾಗೂ ಅಬೀಹು ಮತ್ತು ಇಸ್ರಯೇಲರಲ್ಲಿ ಎಪ್ಪತ್ತು ಮಂದಿ ಬೆಟ್ಟವನ್ನು ಹತ್ತಿದರು. |
೧೦ |
ಅವರಿಗೆ ಇಸ್ರಯೇಲರ ದೇವರ ದರ್ಶನವಾಯಿತು. ಆಕಾಶ ಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟು ಅವರ ಪಾದಪೀಠವಾಗಿತ್ತು. |
೧೧ |
ಅವರು ಇಸ್ರಯೇಲರ ಮುಖಂಡರಿಗೆ ಯಾವ ಹಾನಿಯನ್ನೂ ಮಾಡಲಿಲ್ಲ. ಆ ಮುಖಂಡರು ದೇವರನ್ನು ಸಂದರ್ಶಿಸಿದರು; ಬಳಿಕ ಅನ್ನಪಾನಗಳನ್ನು ತೆಗೆದುಕೊಂಡರು. |
೧೨ |
ಸರ್ವೇಶ್ವರ “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಹತ್ತಿರದಲ್ಲೇ ಇರು. ಆ ಧರ್ಮಶಾಸ್ತ್ರವನ್ನು ಹಾಗು ಆಜ್ಞೆಗಳನ್ನು ನೀನು ಜನರಿಗೆ ಬೋಧಿಸುವಂತೆ ಅವುಗಳನ್ನು ಬರೆದಿರುವ ಶಿಲಾಶಾಸನಗಳನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಮೋಶೆಗೆ ಹೇಳಿದರು. |
೧೩ |
ಮೋಶೆ ತನ್ನ ಶಿಷ್ಯನಾದ ಯೆಹೋಶುವನ ಸಮೇತ ಎದ್ದು ದೇವರ ಬೆಟ್ಟದ ಮೇಲಕ್ಕೆ ಹೋದನು. |
೧೪ |
ಇದಕ್ಕೆ ಮೊದಲು ಅವನು ಹಿರಿಯರಿಗೆ, “ನಾನು ತಿರುಗಿ ನಿಮ್ಮ ಬಳಿಗೆ ಬರುವ ತನಕ ನೀವು ಇಲ್ಲೆ ಕಾದುಕೊಂಡಿರಿ, ಆರೋನನು ಮತ್ತು ಹೂರನು ನಿಮ್ಮ ಬಳಿಯಲ್ಲೆ ಇರುವರು. ಇತ್ಯರ್ಥವಾಗಬೇಕಾದ ವಿಷಯವೇನಾದರೂ ಇದ್ದರೆ ಅವರ ಬಳಿ ಹೋಗಿ,” ಎಂದು ಹೇಳಿದನು. |
೧೫ |
ಬಳಿಕ ಮೋಶೆ ಬೆಟ್ಟವನ್ನು ಹತ್ತಿದನು. ಮೇಘವೊಂದು ಅದನ್ನು ಮುಚ್ಚಿಕೊಂಡಿತು. |
೧೬ |
ಸರ್ವೇಶ್ವರ ತೇಜಸ್ಸು ಸೀನಾಯಿ ಬೆಟ್ಟದ ಮೇಲೆ ನಿಂತಿತು. ಆ ಮೇಘವು ಆರು ದಿನಗಳವರೆಗೂ ಬೆಟ್ಟವನ್ನು ಆವರಿಸಿತ್ತು. ಏಳನೆಯ ದಿನ ಸರ್ವೇಶ್ವರ ಮೇಘ ಮಧ್ಯೆಯಿಂದ ಮೋಶೆಯನ್ನು ಕೂಗಿ ಕರೆದರು. |
೧೭ |
ಸರ್ವೇಶ್ವರನ ತೇಜಸ್ಸು ಬೆಟ್ಟದ ಶಿಖರದ ಮೇಲೆ ಪ್ರಜ್ವಲಿಸುವ ಬೆಂಕಿಯೋಪಾದಿಯಲ್ಲಿ ಇಸ್ರಯೇಲರಿಗೆ ಕಾಣಿಸಿತು. |
೧೮ |
ಮೋಶೆ ಆ ಮೇಘದೊಳಗೆ ಪ್ರವೇಶಿಸಿ ಬೆಟ್ಟವನ್ನೇರಿದನು. ಅವನು ಆ ಬೆಟ್ಟದಲ್ಲಿ ನಾಲ್ವತ್ತು ದಿವಸ ಹಗಲಿರುಳು ತಂಗಿದ್ದನು.
|
Kannada Bible (KNCL) 2016 |
No Data |