A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೨೩“ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುಷ್ಟರ ಸಹಾಯಕ್ಕಾಗಿ ನ್ಯಾಯ ವಿರುದ್ಧವಾದ ಸಾಕ್ಷಿಯನ್ನು ನುಡಿಯಬಾರದು.
ಕೆಟ್ಟ ಕಾರ್ಯವನ್ನು ಮಾಡುವವರು ಬಹು ಮಂದಿ ಇದ್ದಾರೆ. ಆದರೂ ನೀವು ಅವರ ಜೊತೆ ಸೇರಬಾರದು. ಬಹು ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು.
ಅಲ್ಲದೆ ಬಡವನ ಮೇಲಿನ ಕರುಣೆಯಿಂದ ಪಕ್ಷಪಾತದ ತೀರ್ಮಾನವನ್ನು ಮಾಡಬಾರದು.
“ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ತಿರುಗಾಡುವಾಗ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೊಡೆದುಕೊಂಡು ಹೋಗಿ ಒಪ್ಪಿಸಬೇಕು.
ನಿನ್ನ ಹಗೆಯವನ ಕತ್ತೆ ಹೊರೆಯನ್ನು ತಾಳದೆ ಕೆಳಗೆ ಬಿದ್ದಿರುವುದನ್ನು ಕಂಡರೆ ಅದನ್ನು ಎಬ್ಬಿಸುವುದಕ್ಕೆ ನಿನಗೆ ಮನಸ್ಸಿಲ್ಲದಿದ್ದರೂ ಅವನಿಗೆ ಸಹಾಯ ಮಾಡಿ ಅದನ್ನು ಎಬ್ಬಿಸಲೇ ಬೇಕು.
“ನಿಮ್ಮಲ್ಲಿರುವ ಬಡವರು ನ್ಯಾಯಕೋರಿ ಬರುವಾಗ ಅವರಿಗೆ ನೀವು ನ್ಯಾಯ ತಪ್ಪಿಸಬಾರದು. ಮೋಸದ ಕಾರ್ಯದಿಂದ ದೂರವಿರಬೇಕು;
ನಿರಪರಾಧಿಯೂ ನೀತಿವಂತನೂ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಲೇಕೂಡದು; ಅಂಥ ದುಷ್ಕೃತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.
ಲಂಚವನ್ನು ತೆಗೆದುಕೊಳ್ಳಬಾರದು. ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿಸುತ್ತದೆ; ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ಕೆಡಿಸುತ್ತದೆ.
“ಪರದೇಶೀಯರನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರಲ್ಲವೆ? ಅಂಥವರ ಮನೋವ್ಯಥೆ ನಿಮಗೆ ಗೊತ್ತೇ ಇದೆ.
೧೦
“ಆರು ವರ್ಷ ನಿಮ್ಮ ಹೊಲಗದ್ದೆಗಳಲ್ಲಿ ಬಿತ್ತನೆಮಾಡಿ ಬೆಳೆತೆಗೆದುಕೊಳ್ಳಿ.
೧೧
“ಆದರೆ ಏಳನೆಯ ವರ್ಷ ಆ ಭೂಮಿಯನ್ನು ಬೀಳುಬಿಡಿ. ನಿಮ್ಮ ನಾಡಿನ ಬಡವರು ಅದರಲ್ಲಿ ತಾನಾಗಿ ಬೆಳೆಯುವುದನ್ನು ತಿನ್ನಲಿ. ಮಿಕ್ಕದ್ದನ್ನು ಕಾಡುಮೃಗಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳಲ್ಲಿ ಹಾಗೂ ಎಣ್ಣೇ ಮರ ತೋಪುಗಳ ವಿಷಯದಲ್ಲೂ ಅದೇ ರೀತಿಯಾಗಿ ಮಾಡಿ.
೧೨
ವಾರದಲ್ಲಿ ನೀವು ಆರು ದಿವಸ ಕೆಲಸಮಾಡಿ. ಏಳನೆಯ ದಿವಸ ಯಾವ ಕೆಲಸವನ್ನೂ ಮಾಡದಿರಿ. ಆ ದಿನ ನಿಮ್ಮ ಎತ್ತುಗಳು, ಕತ್ತೆಗಳು, ದಾಸದಾಸಿಯರು ಹಾಗೂ ಪರದೇಶೀಯರು ವಿಶ್ರಮಿಸಿಕೊಳ್ಳಲಿ.
೧೩
“ನಾನು ನಿಮಗೆ ವಿಧಿಸಿದ್ದನ್ನೆಲ್ಲ ಜಾಗರೂಕತೆಯಿಂದ ಅನುಸರಿಸಿ ನಡೆಯಿರಿ. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಬೇಡಿ, ಉಚ್ಚರಿಸಲೂ ಬೇಡಿ.
೧೪
“ನೀವು ವರ್ಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡಬೇಕು.
೧೫
ಹುಳಿಯಿಲ್ಲದ ರೊಟ್ಟಿ ತಿನ್ನುವ ಹಬ್ಬ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರಮಾಸದ ನಿಗದಿಯಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಏಕೆಂದರೆ ಆ ಮಾಸದಲ್ಲೇ ನೀವು ಈಜಿಪ್ಟಿನಿಂದ ಹೊರಟುಬಂದದ್ದು. ನನ್ನ ಸನ್ನಿಧಿಗೆ ಬರುವ ಪ್ರತಿಯೊಬ್ಬನು ಕಾಣಿಕೆಯಿಲ್ಲದೆ ಬರೀ ಕೈಯಲ್ಲಿ ಬರಕೂಡದು.
೧೬
“ಅಲ್ಲದೆ ನೀವು ಬಿತ್ತನೆ ಮಾಡಿದ ಹೊಲಗದ್ದೆಗಳಲ್ಲಿ ಮೊದಲನೆಯ ಫಲ ದೊರೆತಾಗ ಸುಗ್ಗಿಯ ಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಅಂದರೆ ಹೊಲ ತೋಟಗಳಿಂದ ನೀವು ಬೆಳೆಯನ್ನು ಕೂಡಿಸುವಾಗ, ಸುಗ್ಗಿಯ (ಫಲಸಂಗ್ರಹದ) ಹಬ್ಬವನ್ನು ಆಚರಿಸಬೇಕು.
೧೭
ಹೀಗೆ ವರ್ಷಕ್ಕೆ ಮೂರು ಸಾರಿ ನಿಮ್ಮ ಗಂಡಸರೆಲ್ಲರು ಸರ್ವೇಶ್ವರನೂ ದೇವರೂ ಆದ ನನ್ನ ಸನ್ನಿಧಿಗೆ ಬರಬೇಕು.
೧೮
“ನನಗೆ ಬಲಿಯನ್ನು ಅರ್ಪಿಸುವಾಗ ಆ ಬಲಿ ಪ್ರಾಣಿಯ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಹಬ್ಬದಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪ್ರಾಣಿಯ ಕೊಬ್ಬನ್ನು ಮಾರನೆಯ ದಿನದವರೆಗೂ ಇಡಲೇಕೂಡದು.
೧೯
“ನಿಮ್ಮ ಬೆಳೆಯ ಪ್ರಥಮ ಫಲದಲ್ಲಿ ಅತಿಶ್ರೇಷ್ಠವಾದುದ್ದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು. \ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
೨೦
“ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೆ ಹಾಗು ನಾನು ಗೊತ್ತುಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆದುತರುವುದಕ್ಕೆ ಒಬ್ಬ ದೂತನನ್ನು ನಿಮ್ಮ ಮುಂದೆ ಕಳಿಸುತ್ತೇನೆ.
೨೧
ನೀವು ಆತನಲ್ಲಿ ಲಕ್ಷ್ಯವಿಟ್ಟು ಮಾತಿಗೆ ಕಿವಿಗೊಡಬೇಕು. ಆತನಿಗೆ ಅವಿಧೇಯರಾಗಿ ಇರಬಾರದು. ಏಕೆಂದರೆ ಆತ ಬರುವುದು ನನ್ನ ಹೆಸರಿನಲ್ಲಿ. ನೀವು ಅವಿಧೇಯರಾದರೆ ಆತ ನಿಮ್ಮನ್ನು ಕ್ಷಮಿಸಲಾರನು.
೨೨
ನೀವು ಆತನ ಮಾತನ್ನು ಶ್ರದ್ಧೆಯಿಂದ ಆಲಿಸಿ, ನನ್ನ ಆಶೆಗಳನ್ನೆಲ್ಲ ಪಾಲಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು.
೨೩
ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಹಾಗೂ ಯೆಬೂಸಿಯರು ಇರುವ ನಾಡಿಗೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲ ಮಾಡುವೆನು.
೨೪
ಅವರ ದೇವತೆಗಳನ್ನು ನೀವು ನಮಸ್ಕರಿಸಬಾರದು, ಪೂಜಿಸಬಾರದು ಮಾತ್ರವಲ್ಲ ಅವರ ಆಚರಣೆಗಳನ್ನು ಅನುಸರಿಸಲೇಬಾರದು. ಆ ಜನಗಳನ್ನು ನಿರ್ಮೂಲ ಮಾಡಿ ವಿಗ್ರಹಸ್ತಂಭಗಳನ್ನು ನಾಶಮಾಡಬೇಕು.
೨೫
ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನೊಬ್ಬನನ್ನೇ ಆರಾಧಿಸಬೇಕು. ಆಗ ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವೆನು. ನಿಮ್ಮೊಳಗೆ ಯಾವ ವ್ಯಾಧಿಯೂ ಇರದಂತೆ ಮಾಡುವೆನು.
೨೬
ನಿಮ್ಮ ನಾಡಿನಲ್ಲಿ ಗರ್ಭಸ್ರಾವವಾಗಲಿ ಬಂಜೆತನವಾಗಲಿ ಇರುವುದಿಲ್ಲ. ನಿಮಗೆ ಪೂರ್ಣವಾದ ಆಯುಸ್ಸನ್ನು ಕೊಡುವೆನು.
೨೭
ನೀವು ಹೋಗುವ ಎಲ್ಲ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ, ಕಳವಳವನ್ನು ಉಂಟುಮಾಡಿ, ನಿಮ್ಮನ್ನು ವಿರೋಧಿಸುವವರು ಓಡಿಹೋಗುವಂತೆ ಮಾಡುವೆನು.
೨೮
ನಿಮಗೆ ಮುಂಚಿತವಾಗಿ ಕಣಜದ ಹುಳುಗಳನ್ನು ಕಳಿಸುವೆನು. ಅವು, ಆ ಹಿವ್ವಿಯರು, ಕಾನಾನ್ಯರು ಹಾಗೂ ಹಿತ್ತಿಯರು ನಿಮ್ಮ ಮುಂದೆ ನಿಲ್ಲದಂತೆ ಓಡಿಸಿ ಬಿಡುವವು.
೨೯
ಆದರೆ ನಾನು ಒಂದೇ ವರ್ಷದೊಳಗೆ ಅವರೆಲ್ಲರನ್ನು ಅಲ್ಲಿಂದ ಹೊರಡಿಸುವುದಿಲ್ಲ. ಏಕೆಂದರೆ ಆ ನಾಡಿನಲ್ಲಿ ಜನರು ಕಡಿಮೆಯಾಗುವುದರಿಂದ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಗೆ ಕಾರಣವಾಗಬಹುದು.
೩೦
ನೀವು ಅಭಿವೃದ್ಧಿಯಾಗಿ ನಾಡಿನಲ್ಲೆಲ್ಲಾ ತುಂಬಿಕೊಳ್ಳುವ ತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರಡಿಸುತ್ತಿರುವೆನು.
೩೧
ಕೆಂಪು ಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಿರುವ ಸಮುದ್ರದವರೆಗೂ ಮತ್ತು ಈ ಮರುಭೂಮಿಯಿಂದ ಯೂಫ್ರೆಟೀಸ್ ಮಹಾ ನದಿಯವರೆಗೂ ಇರುವ ನಾಡನ್ನೆಲ್ಲಾ ನಿಮಗೆ ನೇಮಿಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು.
೩೨
ನೀವು ಅವರೊಡನೆಯಾಗಲಿ, ಅವರ ದೇವತೆಗಳೊಡನೆಯಾಗಲಿ ಯಾವ ವಿಧವಾದ ಒಪ್ಪಂದವನ್ನೂ ಮಾಡಿಕೊಳ್ಳಬಾರದು.
೩೩
ಅವರು ನಿಮ್ಮ ನಾಡಿನಲ್ಲಿ ವಾಸವಾಗಿರಬಾರದು. ವಾಸವಾಗಿದ್ದರೆ ನನಗೆ ವಿರೋಧವಾಗಿ ನಿಮ್ಮಲ್ಲಿ ದ್ರೋಹಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯೆ ನಿಮಗೆ ಉರುಲಾಗುವುದು.