A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೨೧“ಇಸ್ರಯೇಲರಿಗೆ ಈ ಕಟ್ಟಳೆಗಳನ್ನು ಕೊಡು:
ನಿಮ್ಮಲ್ಲಿ ಯಾವನಾದರು ಒಬ್ಬ ಇಬ್ರಿಯನನ್ನು ಗುಲಾಮನನ್ನಾಗಿ ಕೊಂಡುಕೊಂಡರೆ ಆ ಇಬ್ರಿಯನು ಆರು ವರ್ಷ ಗುಲಾಮನಾಗಿ ದುಡಿದು ಏಳನೆಯ ವರ್ಷ ‘ಏನೂ ಕೊಡದೆ ಬಿಡುಗಡೆಯಾಗಿ ಹೋಗಬೇಕು.
ಅವನು ಮದುವೆಯಿಲ್ಲದವನಾಗಿ ಬಂದಿದ್ದರೆ ಒಂಟಿಗನಾಗಿಯೇ ಹೋಗಲಿ. ಹೆಂಡತಿಯುಳ್ಳವನಾಗಿ ಬಂದಿದ್ದರೆ ಹೆಂಡತಿಯೂ ಅವನ ಜೊತೆಯಲ್ಲಿ ಹೋಗಲಿ.
ಅವನ ಯಜಮಾನ ಅವನಿಗೆ ಮದುವೆ ಮಾಡಿಸಿ ಆ ಹೆಂಡತಿಗೆ ಗಂಡು ಇಲ್ಲವೆ ಹೆಣ್ಣು ಮಕ್ಕಳಾಗಿದ್ದರೆ ಆ ಹೆಂಡತಿ ಹಾಗು ಅವಳ ಮಕ್ಕಳು ಯಜಮಾನನ ಸೊತ್ತಾಗುವರು. ಆ ಗುಲಾಮನು ಒಂಟಿಯಾಗಿಯೇ ಹೊರಟು ಹೋಗಲಿ.
ಆದರೆ ಆ ಗುಲಾಮನು ತಾನು ತನ್ನ ಯಜಮಾನನನ್ನೂ ತನ್ನ ಮಡದಿ ಮಕ್ಕಳನ್ನೂ ಪ್ರೀತಿಸುತ್ತೇನೆ, ಈ ಕಾರಣ ಬಿಡುಗಡೆ ಹೊಂದಿ ಹೋಗಲು ಇಷ್ಟವಿಲ್ಲವೆಂದು ದೃಢವಾಗಿ ಹೇಳಬಹುದು.
ಆಗ ಅವನ ಯಜಮಾನ ಅವನನ್ನು ದೇವರ ಸನ್ನಿಧಿಗೆ ಕರೆದುಕೊಂಡು ಬಂದು ಕದದ ಹತ್ತಿರ ಅಥವಾ ಬಾಗಿಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ದಬ್ಬಳದಿಂದ ಅವನ ಕಿವಿಚುಚ್ಚಬೇಕು. ಅಂದಿನಿಂದ ಯಜಮಾನನಿಗೆ ಶಾಶ್ವತ ಗುಲಾಮನಾಗಿರುವನು.
“ಯಾರಾದರು ತನ್ನ ಮಗಳನ್ನು ದಾಸಿಯಾಗುವುದಕ್ಕೆ ಮಾರಿದರೆ ಗಂಡು ಗುಲಾಮರು ಬಿಡುಗಡೆಯಾಗಿ ಹೋಗುವಂತೆ ಅವಳು ಬಿಡುಗಡೆಯಾಗಿ ಹೋಗಕೂಡದು.
ಅವಳನ್ನು ತನಗಾಗಿ ಗೊತ್ತುಮಾಡಿಕೊಂಡ ಯಜಮಾನನಿಗೆ ಅವಳಲ್ಲಿ ಇಷ್ಟವಿಲ್ಲದೆ ಹೋದರೆ ಅವನಿಂದ ಬಿಡಿಸಿಕೊಳ್ಳಲು ಅವಳಿಗೆ ಅವಕಾಶಕೊಡಬೇಕು. ಅವನು ಕೊಟ್ಟ ಮಾತನ್ನು ತಪ್ಪಿದವನಾದುದರಿಂದ ಅನ್ಯಜನರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
ಅವನು ಅವಳನ್ನು ತನ್ನ ಮಗನಿಗೆ ಗೊತ್ತುಮಾಡಿಕೊಂಡರೆ ಅವಳನ್ನು ಸೊಸೆಯಂತೆ ಭಾವಿಸಬೇಕು.
೧೦
ಯಜಮಾನ ಇನ್ನೊಬ್ಬಳನ್ನು ಸೇರಿಸಿಕೊಂಡರೂ ಮೊದಲನೆಯವಳಿಗೆ ಅನ್ನ, ಬಟ್ಟೆ, ದಾಂಪತ್ಯದ ಹಕ್ಕುಗಳನ್ನು ಕಡಿಮೆ ಮಾಡಕೂಡದು.
೧೧
ಈ ಮೂವರಲ್ಲಿ ಯಾವುದನ್ನು ನಡೆಸದೆ ಹೋದರೆ ಅವಳು ಏನೂ ಕೊಡದೆ ಬಿಡುಗಡೆಯಾಗಿ ಹೋಗಬಹುದು.
೧೨
“ಮನುಷ್ಯನನ್ನು ಹೊಡೆದು ಕೊಂದವನಿಗೆ ಮರಣದಂಡನೆಯಾಗಬೇಕು.
೧೩
ಆದರೆ ಕೊಲ್ಲಬೇಕೆಂಬ ಯೋಚನೆಯಿಲ್ಲದೆ ಆಕಸ್ಮಿಕವಾಗಿ ಒಬ್ಬನ ಹತ್ಯ ಆಗಿದ್ದರೆ ಆ ಹತ್ಯೆಗೆ ಕಾರಣವಾದವನು ನಾನು ನೇಮಿಸುವ ಆಶ್ರಯ ಸ್ಥಳಕ್ಕೆ ಓಡಿಹೋಗಿ ಬದುಕಬಹುದು.
೧೪
ಕೊಲ್ಲಬೇಕೆಂಬ ಉದ್ದೇಶದಿಂದಲೆ ಮತ್ತೊಬ್ಬನನ್ನು ಮೋಸದಿಂದ ಕೊಂದವನನ್ನು ನನ್ನ ಬಲಿಪೀಠದ ಬಳಿಯಿದ್ದರೂ ಎಳೆದು ಅವನಿಗೆ ಮರಣ ದಂಡನೆ ಕೊಡಬೇಕು.”
೧೫
“ತಂದೆಯನ್ನಾಗಲಿ, ತಾಯಿಯನ್ನಾಗಲಿ ಹೊಡೆದವನಿಗೆ ಮರಣ ದಂಡನೆ ಆಗಬೇಕು.”
೧೬
“ಒಬ್ಬನು ಮತ್ತೊಬ್ಬನನ್ನು ಕದ್ದೊಯ್ದು ಅವನನ್ನು ಮಾರಿದ್ದರೂ ಅಥವಾ ತನ್ನಲ್ಲೇ ಖೈದಿಯಾಗಿಟ್ಟುಕೊಂಡಿದ್ದರೂ ಅಂಥವನಿಗೆ ಮರಣ ದಂಡನೆಯಾಗಬೇಕು.”
೧೭
“ತಂದೆಯನ್ನಾಗಲಿ, ತಾಯಿಯನ್ನಾಗಲಿ ಶಪಿಸುವವನಿಗೆ ಮರಣ ದಂಡನೆ ಆಗಬೇಕು.”
೧೮
“ಇಬ್ಬರು ಜಗಳವಾಡುತ್ತಿರಲು ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಲೋ ಮುಷ್ಟಿಯಿಂದಲೋ ಹೊಡೆದುದರಿಂದ ಅವನು ಸಾಯದೆ ಗಾಯಗೊಂಡು ‘ಕೆಲವು ಕಾಲ ಹಾಸಿಗೆ ಹಿಡಿದಿರಬಹುದು, ಅನಂತರ ಎದ್ದು ಕೋಲೂರಿ ತಿರುಗಾಡುತ್ತಿರಬಹುದು.
೧೯
ಇಂಥ ಸಂದರ್ಭಗಳಲ್ಲಿ ಹೊಡೆದವನಿಗೆ ಶಿಕ್ಷೆಯಾಗಬಾರದು. ಆದರೆ ಗಾಯಗೊಂಡವನು ಕೆಲಸ ಮಾಡಲಾರದೆ ಹೋದ ಕಾಲಕ್ಕೆ ತಕ್ಕಷ್ಟು ಹಣ ಕೊಡಬೇಕು. ಹಾಗು ಅವನು ಪೂರ್ಣ ಸ್ವಸ್ಥನಾಗುವ ವರೆಗೂ ನೋಡಿಕೊಳ್ಳಬೇಕು.
೨೦
“ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಅಲ್ಲೇ ಸಾಯುವಂತೆ ಮಾಡಿದ್ದರೆ ಅವನಿಗೆ ತಕ್ಕ ಶಿಕ್ಷೆಯಾಗಬೇಕು.
೨೧
ಆ ಆಳು ಒಂದೆರಡು ದಿನ ಜೀವದಿಂದ ಉಳಿದಿದ್ದರೆ ಯಜಮಾನನಿಗೆ ಶಿಕ್ಷೆ ವಿಧಿಸಬಾರದು. ಆ ದಾಸದಾಸಿಯರು ಅವನ ಸೊತ್ತು.
೨೨
“ಜನರು ಜಗಳವಾಡುವಾಗ ಗರ್ಭಿಣಿಯಾದ ಒಬ್ಬ ಹೆಂಗಸಿಗೆ ಏಟು ತಗಲಿ ಅವಳಿಗೆ ಗರ್ಭಸ್ರಾವ ಆಗಿ, ಬೇರೆ ಯಾವ ಹಾನಿಯೂ ಆಕೆಗೆ ಆಗದೆ ಇದ್ದಲ್ಲಿ, ಆ ಹೆಂಗಸಿನ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತುಮಾಡುತ್ತಾನೋ ಅಷ್ಟನ್ನು ಹೊಡೆದವನು ಕೊಡಬೇಕು.
೨೩
ಬೇರೆ ಹಾನಿಯಾದ ಪಕ್ಷಕ್ಕೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ,
೨೪
ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು,
೨೫
ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು ಈ ಮೇರೆಗೆ ಪ್ರತಿದಂಡನೆಯಾಗಬೇಕು.
೨೬
ಒಬ್ಬನು ತನ್ನ ದಾಸನ ಅಥವಾ ದಾಸಿಯ ಕಣ್ಣಿಗೆ ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೆ ಈಡಾಗಿ ಆ ದಾಸನನ್ನು ಬಿಡುಗಡೆ ಮಾಡಬೇಕು.
೨೭
ದಾಸನ ಅಥವಾ ದಾಸಿಯ ಹಲ್ಲನ್ನು ಹೊಡೆದು ಉದುರಿಸಿದರೆ ಅದಕ್ಕೆ ಈಡಾಗಿ ಆ ದಾಸನನ್ನು ಅಥವಾ ದಾಸಿಯನ್ನು ಬಿಡುಗಡೆಮಾಡಬೇಕು.
೨೮
“ಎತ್ತೊಂದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ತಿವಿದು ಕೊಂದರೆ ಆ ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಕೂಡದು. ಆ ಎತ್ತಿನ ಒಡೆಯನಾದರೋ ದೋಷಿಯಾಗಲಾರನು.
೨೯
ಆದರೆ ಆ ಎತ್ತು ಹಿಂದಿನಿಂದಲೂ ತಿವಿಯುವ ಸ್ವಭಾವದ್ದೆಂದು ಒಡೆಯನಿಗೆ ಎಚ್ಚರಿಕೆ ನೀಡಿದ್ದರೂ ಅವನು ಅದನ್ನು ಕಟ್ಟಿಹಾಕದೆ ಹೋದ ಕಾರಣ ಅದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಸಾಯಿಸಿದರೆ ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು, ಮಾತ್ರವಲ್ಲ ಆ ಒಡೆಯನು ಕೂಡ ಮರಣದಂಡನೆಗೆ ಗುರಿ ಆಗುವನು.
೩೦
ಆದರೆ ಆ ಒಡೆಯ ತನ್ನ ಪ್ರಾಣವನ್ನು ಬಿಡಿಸಿಕೊಳ್ಳುವುದಕ್ಕೆ ಹಣವನ್ನು ಈಡಾಗಿ ಕೊಡಬಹುದೆಂದು ತೀರ್ಮಾನವಾದರೆ ನೇಮಕವಾದ ಹಣವನ್ನು ಕೊಟ್ಟು ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದು.
೩೧
ಆ ಎತ್ತಿನಿಂದ ತಿವಿಸಿಕೊಂಡು ಸತ್ತವನು ಹುಡುಗನಾಗಿದ್ದರೂ ಹುಡುಗಿಯಾಗಿದ್ದರೂ ಇದೇ ನಿಯಮಕ್ಕನುಸಾರ ತೀರ್ಮಾನಿಸಬೇಕು.
೩೨
ತಿವಿಸಿಕೊಂಡು ಸತ್ತವರು ದಾಸದಾಸಿಯರಾಗಿದ್ದರೆ ಅವರ ಯಜಮಾನನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ಈಡುಕೊಡಿಸಬೇಕು ಮತ್ತು ಆ ಎತ್ತನ್ನು ಕಲ್ಲೆಸೆದು ಕೊಲ್ಲಿಸಬೇಕು.
೩೩
“ಒಬ್ಬನು ಗುಣಿ ತೆಗೆದುದರಿಂದ, ಇಲ್ಲವೆ ಗುಣಿ ಅಗೆದು ಮುಚ್ಚದೆ ಹೋದುದರಿಂದ, ಮತ್ತೊಬ್ಬನ ಎತ್ತಾಗಲಿ ಕತ್ತೆಯಾಗಲಿ ಅದರಲ್ಲಿ ಬಿದ್ದು ಸತ್ತರೆ
೩೪
ಆ ಗುಣಿ ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡುಕೊಡಬೇಕು. ಆ ಪ್ರಾಣಿಯ ಒಡೆಯನಿಗೆ ಅದರ ಕ್ರಯವನ್ನು ಕೊಡಬೇಕು. ಸತ್ತ ಪ್ರಾಣಿಯನ್ನು ತಾನೇ ತೆಗೆದುಕೊಳ್ಳಬಹುದು.
೩೫
ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ತಿವಿದುಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಸಮವಾಗಿ ಹಂಚಬೇಕು.
೩೬
ಆದರೆ ಅದಕ್ಕೆ ಮುಂಚಿತವಾಗಿಯೇ ಆ ಎತ್ತು ತಿವಿಯುವಂಥದ್ದೇ ಎಂದು ತಿಳಿದಿದ್ದರೂ ಅದರ ಒಡೆಯ ಅದನ್ನು ಕಟ್ಟಿಹಾಕದೆ ಹೋದದ್ದಾದರೆ ಅವನು ಎತ್ತಿಗೆ ಪ್ರತಿಯಾಗಿ ಎತ್ತನ್ನು ಕೊಡಬೇಕು; ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.