A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೨೦ದೇವರು ಕೊಟ್ಟ ಆಜ್ಞೆಗಳು ಇವು:
“ನಾನೇ ನಿನ್ನ ದೇವರಾದ ಸರ್ವೇಶ್ವರ; ಗುಲಾಮತನದಲ್ಲಿದ್ದ ನಿನ್ನನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದವನು.
ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಕೂಡದು.
ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ, ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ.
ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಾಧಿಸಬೇಡ. ಏಕೆಂದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬರಿಗೆ ಸಲ್ಲಗೊಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದಂಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ.
ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುತ್ತೇನೆ.
ನಿನ್ನ ದೇವರಾದ ಸರ್ವೇಶ್ವರನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬೇಡ. ಏಕೆಂದರೆ ಸರ್ವೇಶ್ವರನಾದ ನಾನು ನನ್ನ ಹೆಸರನ್ನು ದುರುಪಯೋಗ ಪಡಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
ಸಬ್ಬತ್ ದಿನವನ್ನು ದೇವರ ದಿನವೆಂದು ತಿಳಿದು ಪವಿತ್ರವಾಗಿ ಆಚರಿಸು.
ಆರು ದಿನಗಳು ದುಡಿದು ನಿನ್ನ ಕೆಲಸವನ್ನೆಲ್ಲ ಮಾಡು.
೧೦
ಏಳನೆಯ ದಿನ ನಿನ್ನ ದೇವರಾದ ಸರ್ವೇಶ್ವರನಿಗೆ ಮೀಸಲಾದ ವಿಶ್ರಾಂತಿ ದಿನ. ಅಂದು ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡು ಹೆಣ್ಣು ಮಕ್ಕಳು, ನಿನ್ನ ಗಂಡು ಹೆಣ್ಣು ಆಳುಗಳು, ಪಶುಪ್ರಾಣಿಗಳು ಹಾಗು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು.
೧೧
ಸರ್ವೇಶ್ವರನಾದ ನಾನು ಆರು ದಿನಗಳಲ್ಲಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡೆನು. ಆದುದರಿಂದ ಅದನ್ನು ಸರ್ವೇಶ್ವರನ ವಿಶ್ರಾಂತಿ ದಿನವನ್ನಾಗಿ ಆಶೀರ್ವದಿಸಿ ಪವಿತ್ರಗೊಳಿಸಿದೆನು.
೧೨
ನಿನ್ನ ತಂದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ.
೧೩
ಕೊಲೆಮಾಡಬೇಡ.
೧೪
ವ್ಯಭಿಚಾರಮಾಡಬೇಡ.
೧೫
ಕದಿಯಬೇಡ.
೧೬
ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ.
೧೭
ನೆರೆಯವನ ಮನೆಯನ್ನು ಬಯಸಬೇಡ; ಅವನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬೇಡ.
೧೮
ಆ ಗುಡುಗು ಮಿಂಚನ್ನು, ತುತೂರಿ ಧ್ವನಿಯನ್ನು ಹಾಗು ಬೆಟ್ಟದಿಂದ ಹೊರಡುತ್ತಿದ್ದ ಹೊಗೆಯನ್ನು ಜನರೆಲ್ಲರು ನೋಡಿದರು. ನೋಡಿ ನಡುಗುತ್ತಾ ದೂರದಲ್ಲೇ ನಿಂತುಕೊಂಡರು.
೧೯
ಅವರು ಮೋಶೆಗೆ, “ನೀನೇ ನಮ್ಮೊಡನೆ ಮಾತಾಡು, ನಾವು ಕೇಳುತ್ತೇವೆ. ದೇವರು ನಮ್ಮೊಡನೆ ಮಾತಾಡಿದರೆ ನಾವು ಸತ್ತು ಹೋಗುತ್ತೇವೆ,” ಎಂದು ಹೇಳಿದರು.
೨೦
ಅದಕ್ಕೆ ಮೋಶೆ, “ಭಯಪಡಬೇಡಿ; ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಬಂದಿದ್ದಾರೆ; ಹೀಗೆ ದೈವಭೀತಿ ನಿಮ್ಮ ಕಣ್ಮುಂದಿದ್ದು ನೀವು ಪಾಪಮಾಡದೆ ಇರುವಿರಿ,” ಎಂದನು.
೨೧
ಮೋಶೆಯೊಬ್ಬನೇ ದೇವರಿದ್ದ ಕಾರ್ಮುಗಿಲನ್ನು ಸಮೀಪಿಸಿದ್ದನು. ಜನರು ದೂರದಲ್ಲೇ ನಿಂತಿದ್ದರು.
೨೨
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆ ಹೇಳಿದರು: “ಇಸ್ರಯೇಲರಿಗೆ ಹೀಗೆಂದು ತಿಳಿಸು - ‘ನಾನು ಆಕಾಶದಿಂದ ನಿಮ್ಮೊಡನೆ ಮಾತಾಡಿದ್ದೇನೆಂದು ನಿಮಗೆ ಗೊತ್ತಿದೆ.
೨೩
ಆದ್ದರಿಂದ ನೀವು ನನಗೆ ಪ್ರತಿಯಾಗಿ ಬೆಳ್ಳಿಬಂಗಾರಗಳಿಂದ ದೇವರುಗಳನ್ನು ಮಾಡಿಕೊಳ್ಳಬಾರದು,
೨೪
ನನಗಾಗಿ ನೀವು ಮಣ್ಣಿನಿಂದ ಒಂದು ಬಲಿಪೀಠವನ್ನು ಮಾಡಬೇಕು. ಅದರ ಮೇಲೆ ನಿಮ್ಮ ದನಕುರಿಗಳನ್ನು ದಹನ ಬಲಿಯನ್ನಾಗಿಯೂ ಸಮಾಧಾನ ಬಲಿಯನ್ನಾಗಿಯೂ ಸಮರ್ಪಿಸಬೇಕು.
೨೫
ನನ್ನ ಹೆಸರನ್ನು ನಿಮ್ಮ ನೆನಪಿಗೆ ಬರಮಾಡುವ ಎಲ್ಲ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
೨೬
ನೀವು ನನಗಾಗಿ ಕಲ್ಲಿನಿಂದ ಬಲಿಪೀಠವನ್ನು ಕಟ್ಟಬೇಕಾದರೆ ಕೆತ್ತಿರುವ ಕಲ್ಲುಗಳಿಂದ ಕಟ್ಟಕೂಡದು. ಏಕೆಂದರೆ ಉಳಿ ಮುಂತಾದುದನ್ನು ಉಪಯೋಗಿಸಿದರೆ ಅದು ಅಪವಿತ್ರವಾಗುವುದು.
೨೭
ಅದೂ ಅಲ್ಲದೆ ನಿಮ್ಮ ನಗ್ನತೆ ನನ್ನ ಪೀಠದ ಮೇಲೆ ಕಾಣಿಸಿಕೊಳ್ಳದಂತೆ ಮೆಟ್ಟಲುಗಳ ಮೂಲಕ ಅದರ ಮೇಲೆ ಹತ್ತಬೇಡಿ.