A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೧೯ಇಸ್ರಯೇಲರು ಈಜಿಪ್ಟ್ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿವಸದಲ್ಲಿ ಸೀನಾಯಿ ಮರುಭೂಮಿಗೆ ಬಂದರು.
ಅವರು ರೆಫೀದೀಮನ್ನು ಬಿಟ್ಟು ಆ ಮರುಭೂಮಿಗೆ ಬಂದು ಅಲ್ಲಿನ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು.
ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಬಂದನು. ಸರ್ವೇಶ್ವರ ಸ್ವಾಮಿ ಬೆಟ್ಟದ ಮೇಲಿಂದ ಕೂಗಿ ಅವನಿಗೆ, “ನೀನು ಯಕೋಬನ ಮನೆತನದವರಾದ ಇಸ್ರಯೇಲರಿಗೆ ಈ ಮಾತುಗಳನ್ನು ಹೇಳು:
'ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದ್ದೀರಿ. ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತು ಈ ನನ್ನ ಸ್ಥಳಕ್ಕೆ ಸೇರಿಸಿದ್ದೇನೆ. ಇದೆಲ್ಲಾ ನಿಮಗೆ ಗೊತ್ತಿದೆ.
ಹೀಗಿರಲು, ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ನೀಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ, ಸಮಸ್ತ ಭೂಮಿ ನನ್ನದಾಗಿದ್ದರೂ ನೀವು ಎಲ್ಲ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗುವಿರಿ.
ಅಲ್ಲದೆ ನೀವು ನನಗೆ ಯಾಜಕ ರಾಜವಂಶ ಹಾಗು ಪರಿಶುದ್ಧ ಜನಾಂಗ ಆಗುವಿರಿ,’ ಇಸ್ರಯೇಲರಿಗೆ ನೀನು ತಿಳಿಸಬೇಕಾದ ವಿಷಯವಿದು,” ಎಂದರು.
ಮೋಶೆ ಇಳಿದುಬಂದು ಜನರ ಹಿರಿಯರನ್ನು ಕೂಡಿಸಿ, ಸರ್ವೇಶ್ವರ ಆಜ್ಞಾಪಿಸಿದ್ದ ಆ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು.
ಜನರೆಲ್ಲರು, “ಸರ್ವೇಶ್ವರ ಸ್ವಾಮಿ ಹೇಳಿದಂತೆಯೇ ನಾವು ಮಾಡುತ್ತೇವೆ,” ಎಂದು ಒಕ್ಕೊರಲಿನಿಂದ ಉತ್ತರಕೊಟ್ಟರು. ಮೋಶೆ ಸರ್ವೇಶ್ವರನ ಬಳಿಗೆ ಹೋಗಿ ಜನರ ಆ ಉತ್ತರವನ್ನು ಅರಿಕೆ ಮಾಡಿದನು.
ಸರ್ವೇಶ್ವರ ಮೋಶೆಗೆ, “ಇಗೋ, ನಾನು ನಿನ್ನ ಸಂಗಡ ಮಾತಾಡುವುದನ್ನು ಜನರು ಕೇಳುವಂತೆಯೂ ಎಂದಿಗೂ ನಿನ್ನನ್ನು ನಂಬುವಂತೆಯೂ ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬರುತ್ತೇನೆ,” ಎಂದು ಹೇಳಿದರು.
೧೦
ಮೋಶೆ ಜನರ ಮಾತುಗಳನ್ನು ಸರ್ವೇಶ್ವರನಿಗೆ ಅರಿಕೆಮಾಡಲು ಸರ್ವೇಶ್ವರ ಹೀಗೆಂದರು: “ನೀನು ಜನರ ಬಳಿಗೆ ಹೋಗಿ ಇಂದು ಮತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಳ್ಳಲಿ.
೧೧
ಮೂರನೆಯ ದಿನ ಸಿದ್ಧರಾಗಿರಲಿ. ಏಕೆಂದರೆ ಆ ಮೂರನೆಯ ದಿನ ಸರ್ವೇಶ್ವರನಾದ ನಾನು ಸಮಸ್ತ ಜನರಿಗೂ ಪ್ರತ್ಯಕ್ಷನಾಗಲು ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವೆನು.
೧೨
ಜನರು ಹತ್ತಿರಕ್ಕೆ ಬಾರದಂತೆ ನೀನು ಬೆಟ್ಟದ ಸುತ್ತಲೂ ಒಂದು ಮೇರೆಯನ್ನು ಏರ್ಪಡಿಸು. ಮತ್ತು ಜನರಿಗೆ ‘ಎಚ್ಚರಿಕೆ, ನೀವು ಈ ಬೆಟ್ಟವನ್ನು ಏರಕೂಡದು; ಅದರ ಅಂಚನ್ನೂ ಮುಟ್ಟಕೂಡದು. ಮುಟ್ಟಿದವನಿಗೆ ಮರಣ ಶಿಕ್ಷೆಯಾಗುವುದು ನಿಶ್ಚಯ.
೧೩
ಅಂಥವನನ್ನು ಯಾರೂ ಕೈಯಿಂದ ಮುಟ್ಟದೆ ಕಲ್ಲೆಸೆದು ಅಥವಾ ಬಾಣಬಿಟ್ಟು ಕೊಲ್ಲಬೇಕು. ಬೆಟ್ಟವನ್ನು ಮುಟ್ಟಿದವರು ಮನುಷ್ಯನಾಗಿರಲಿ, ಪಶುಪ್ರಾಣಿಯಾಗಲಿ ಉಳಿಯಬಾರದು.’ ಕೊಂಬಿನ ಧ್ವನಿ ಕೇಳಿಸಿದಾಗ ಬೆಟ್ಟವನ್ನೇರಿ ಬರಬೇಕೆಂದು ಹೇಳು.”
೧೪
ಅಂತೆಯೇ ಮೋಶೆ ಬೆಟ್ಟದಿಂದ ಇಳಿದು ಬಂದು ಜನರನ್ನು ಪರಿಶುದ್ಧಗೊಳಿಸಿದನು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡರು.
೧೫
ಆಗ ಮೋಶೆ ಜನರಿಗೆ, “ಮೂರನೆಯ ದಿನಕ್ಕಾಗಿ ಸಿದ್ಧರಾಗಿರಿ; ಯಾವ ಪುರುಷನು ಸ್ತ್ರೀಸಂಗ ಮಾಡಬಾರದು,” ಎಂದು ಹೇಳಿದನು.
೧೬
ಮೂರನೆಯ ದಿನ ಸೂರ್ಯೋದಯ ಆಗುವಾಗ ಆ ಬೆಟ್ಟದ ಮೇಲೆ ಗುಡುಗು, ಮಿಂಚು, ಕಾರ್ಮುಗಿಲು ಹಾಗು ತುತೂರಿಯ ಮಹಾಧ್ವನಿ ಉಂಟಾಯಿತು. ಪಾಳೆಯದಲ್ಲಿದ್ದ ಜನರೆಲ್ಲರು ನಡುಗಿದರು.
೧೭
ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಬರಮಾಡಿದನು. ಅವರು ಬಂದು ಬೆಟ್ಟದ ಬುಡದಲ್ಲಿ ನಿಂತರು.
೧೮
ಸೀನಾಯಿ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತ್ತು. ಏಕೆಂದರೆ ಸರ್ವೇಶ್ವರ ಸ್ವಾಮಿ ಬೆಂಕಿಯ ರೂಪದಲ್ಲಿ ಆ ಬೆಟ್ಟದ ಮೇಲೆ ಇಳಿದುಬಂದಿದ್ದರು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದೂ ಅಲ್ಲದೆ ಬೆಟ್ಟವೆಲ್ಲ ಬಹಳವಾಗಿ ಕಂಪಿಸಿತು.
೧೯
ತುತೂರಿಯ ಧ್ವನಿ ಹೆಚ್ಚು ಹೆಚ್ಚಾಗುತ್ತಾ ಬಂದಿತು. ಮೋಶೆ ಮಾತಾಡಿದಾಗ ದೇವರು ಮೇಘಗರ್ಜನೆಯಿಂದ ಉತ್ತರಕೊಟ್ಟರು.
೨೦
ಸರ್ವೇಶ್ವರ ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದರು. ಅವರು, “ಬೆಟ್ಟದ ತುದಿಗೆ ಬಾ,” ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.
೨೧
ಆಗ ಸರ್ವೇಶ್ವರ ಮೋಶೆಗೆ, “ನೀನಿಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ನೋಡಬೇಕೆಂಬ ಆಶೆಯಿಂದ ಸರ್ವೇಶ್ವರನಾದ ನನ್ನ ಹತ್ತಿರಕ್ಕೆ ಮೇರೆಯನ್ನು ದಾಟಿ ಬಂದಾರು; ಹಾಗೆ ಬಂದರೆ ಬಹುಜನ ನಾಶವಾಗುವರು.
೨೨
ನನ್ನ ಸನ್ನಿಧಿಗೆ ಬರುವ ಯಾಜಕರು ಕೂಡ ತಮ್ಮನ್ನೇ ಶುದ್ಧಪಡಿಸಿಕೊಳ್ಳಬೇಕು. ಇಲ್ಲವಾದರೆ ಅವರನ್ನೂ ನಾನು ತಟ್ಟನೆ ನಾಶಮಾಡುವೆನು,” ಎಂದು ಹೇಳಿದರು.
೨೩
ಅದಕ್ಕೆ ಮೋಶೆ, “ಸೀನಾಯಿ ಬೆಟ್ಟವನ್ನೇರುವುದಕ್ಕೆ ಜನರಿಂದಾಗದು. ನೀವು ಆಜ್ಞಾಪಿಸಿದಂತೆ ನಿಮಗಾಗಿ ಪ್ರತ್ಯೇಕಿಸಿಡಲು ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿಸಿದ್ದೇನೆ,” ಎಂದನು.
೨೪
ಸರ್ವೇಶ್ವರ ಅವನಿಗೆ, “ನೀನು ಇಳಿದು ಹೋಗಿ ಆರೋನನನ್ನು ಕರೆದುಕೊಂಡು ಮೇಲಕ್ಕೆ ಬಾ; ಆದರೆ ಯಾಜಕರು ಹಾಗು ಜನರು ಆ ಮೇರೆಯನ್ನು ದಾಟಿ ನನ್ನ ಹತ್ತಿರ ಬರಕೂಡದು; ದಾಟಿ ಬಂದರೆ ಅವರನ್ನು ತಟ್ಟನೆ ನಾಶಮಾಡಬಹುದು ಎಂದು ಹೇಳು,” ಎಂದರು.
೨೫
ಮೋಶೆ ಇಳಿದು ಹೋಗಿ ಹಾಗೆಯೇ ಜನರಿಗೆ ತಿಳಿಸಿದನು.