A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೧೮ಇತ್ರೋ, ಮೋಶೆಯ ಮಾವ ಹಾಗೂ ಮಿದ್ಯಾನರ ಪೂಜಾರಿ. ದೇವರು ಮೋಶೆಗೂ ತಮ್ಮ ಜನರಾದ ಇಸ್ರಯೇಲರಿಗೂ ಮಾಡಿದ ಮಹಾತ್ಕಾರ್ಯಗಳನ್ನು ಕುರಿತು ಇವನು ಕೇಳಿದ್ದನು. ಸರ್ವೇಶ್ವರ ಸ್ವಾಮಿ ಹೇಗೆ ಇಸ್ರಯೇಲರನ್ನು ಈಜಿಪ್ಟಿನಿಂದ ಕರೆದುತಂದರೆಂಬ ವಿಷಯ ಇವನಿಗೆ ಮುಟ್ಟಿತ್ತು.
ಇವನು ತನ್ನ ಬಳಿಗೆ ಕಳಿಸಲಾಗಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನು ಮತ್ತು ಆಕೆಯ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಂದನು.
ಮೋಶೆ ತಾನು ಅನ್ಯದೇಶದ ಪ್ರವಾಸಿ ಎಂದು ಹೇಳಿ ತನ್ನ ಹಿರಿಯ ಮಗನಿಗೆ ‘ಗೇರ್ಷೋಮ್’ ಎಂದು ಹೆಸರಿಟ್ಟಿದ್ದನು.
ತನ್ನ ತಂದೆಯ ದೇವರು ನನಗೆ ಸಹಾಯಕರಾಗಿದ್ದು ನನ್ನನ್ನು ಫರೋಹನ ಕತ್ತಿಯಿಂದ ಕಾಪಾಡಿದರು ಎಂದು ಕಿರಿಯ ಮಗನಿಗೆ ‘ಎಲಿಯೇಜರ್’ ಎಂದು ಹೆಸರಿಟ್ಟಿದ್ದನು.
ಮೋಶೆಯ ಮಾವ ಇತ್ರೋ, ಮೋಶೆಯ ಮಕ್ಕಳನ್ನೂ ಹೆಂಡತಿಯನ್ನೂ ಕರೆದುಕೊಂಡು ಮರುಭೂಮಿಯಲ್ಲಿ ದೇವರ ಬೆಟ್ಟದ ಹತ್ತಿರ ಇಳಿದುಕೊಂಡಿದ್ದ ಮೋಶೆಯ ಬಳಿಗೆ ಬಂದನು.
“ನಿನ್ನ ಮಾವನಾದ ನಾನು, ನಿನ್ನ ಹೆಂಡತಿ ಹಾಗು ನಿನ್ನ ಇಬ್ಬರು ಮಕ್ಕಳು ಬಂದಿದ್ದೇವೆ” ಎಂದು ಮೋಶೆಗೆ ಹೇಳಿ ಕಳಿಸಿದನು.
ಮೋಶೆ ಹೊರಗೆ ಬಂದು ತನ್ನ ಮಾವನನ್ನು ಎದುರುಗೊಂಡು, ವಂದಿಸಿ, ಮುದ್ದಿಟ್ಟನು. ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಅವರು ಡೇರೆಯೊಳಕ್ಕೆ ಹೋದರು.
ಸರ್ವೇಶ್ವರ ಸ್ವಾಮಿ ಇಸ್ರಯೇಲರ ಪರವಾಗಿ ಫರೋಹನಿಗೂ ಈಜಿಪ್ಟಿನವರಿಗೂ ಮಾಡಿದ್ದೆಲ್ಲವನ್ನೂ ಮತ್ತು ದಾರಿಯಲ್ಲಿ ತಮಗುಂಟಾದ ಎಲ್ಲ ಕಷ್ಟದುಃಖಗಳನ್ನು ಹಾಗು ಸರ್ವೇಶ್ವರ ಹೇಗೆ ಅವುಗಳಿಂದ ಕಾಪಾಡಿದರೆಂಬುದನ್ನು ಮೋಶೆ ತನ್ನ ಮಾವನಿಗೆ ವಿವರಿಸಿದನು.
ಈಜಿಪ್ಟಿನವರ ಕೈಯಿಂದ ಇಸ್ರಯೇಲರನ್ನು ಬಿಡಿಸಿ ಸರ್ವೇಶ್ವರ ಅವರಿಗೆ ಇಷ್ಟೆಲ್ಲಾ ಉಪಕಾರ ಮಾಡಿದ್ದಕ್ಕಾಗಿ ಇತ್ರೋ ಸಂತೋಷಪಟ್ಟನು.
೧೦
“ಈಜಿಪ್ಟಿನವರ ಕೈಯಿಂದಲೂ ಫರೋಹನ ಕೈಯಿಂದಲೂ ನಿಮ್ಮನ್ನು ಬಿಡುಗಡೆಮಾಡಿದ ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಲಿ.
೧೧
ಆತ ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ, ಆ ಈಜಿಪ್ಟಿನವರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ ಆ ವಿಷಯದಲ್ಲೇ ಅವರನ್ನು ತಗ್ಗಿಸಿದ್ದಾನೆ. ಆದ್ದರಿಂದ ಸರ್ವೇಶ್ವರ ಸ್ವಾಮಿಯೇ ಎಲ್ಲ ದೇವರುಗಳಿಗಿಂತ ದೊಡ್ಡವರೆಂದು ಈಗ ತಿಳಿದುಕೊಂಡಿದ್ದೇನೆ,” ಎಂದು ಹೇಳಿದನು.
೧೨
ಅದೂ ಅಲ್ಲದೆ ಮೋಶೆಯ ಮಾವ ಇತ್ರೋ ದೇವರಿಗೆ ದಹನ ಬಲಿಯನ್ನು ಹಾಗು ಇತರ ಬಲಿಗಳನ್ನು ಸಮರ್ಪಿಸಿದನು. ಆರೋನನು ಹಾಗು ಇಸ್ರಯೇಲರ ಹಿರಿಯರೆಲ್ಲರು ಬಂದು ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನ ಮಾಡಿದರು.
೧೩
ಮಾರನೆಯ ದಿನ ಮೋಶೆ ಜನರಿಗೆ ನ್ಯಾಯ ತೀರಿಸಲು ಕುಳಿತಿದ್ದನು. ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು ಅವನ ಸುತ್ತಲು ನಿಂತಿದ್ದರು.
೧೪
ಮೋಶೆ ಜನರಿಗಾಗಿ ಮಾಡುತ್ತಿದ್ದುದ್ದೆಲ್ಲವನ್ನು ಅವನ ಮಾವ ನೋಡಿ, “ಜನರಿಗೋಸ್ಕರ ಇಷ್ಟು ಪ್ರಯಾಸಪಡುತ್ತಿರುವೆ ಏಕೆ? ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು ನಿನ್ನ ಸುತ್ತಲೂ ನಿಂತುಕೊಂಡಿದ್ದಾರೆ; ನೀನೊಬ್ಬನೇ ನ್ಯಾಯ ತೀರಿಸಲು ಕುಳಿತುಕೊಳ್ಳಬೇಕೆ?” ಎಂದು ಕೇಳಿದನು.
೧೫
ಅದಕ್ಕೆ ಮೋಶೆ, “ದೇವರ ತೀರ್ಪನ್ನು ತಿಳಿದುಕೊಳ್ಳುವುದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ;
೧೬
ಅವರಲ್ಲಿ ವ್ಯಾಜ್ಯವೇನಾದರು ಉಂಟಾದರೆ ನನ್ನ ಬಳಿಗೆ ಬರುತ್ತಾರೆ. ನಾನು ವಿಚಾರಣೆ ಮಾಡಿ, ಅವರಿಗೆ ನ್ಯಾಯ ತೀರಿಸಿ, ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ,” ಎಂದು ಉತ್ತರಿಸಿದನು.
೧೭
ಇದನ್ನು ಕೇಳಿದ ಇತ್ರೋನನು ಮೋಶೆಗೆ: “ನೀನು ಮಾಡುತ್ತಿರುವುದು ಸರಿಯಲ್ಲ.
೧೮
ಈ ಕೆಲಸ ಬಹು ಕಷ್ಟಕರವಾದುದು; ನಿನ್ನೊಬ್ಬನಿಂದಲೇ ಅದನ್ನು ನಡೆಸಲಾಗದು. ನೀನೂ ನಿನ್ನ ಈ ಜನರೂ ಖಂಡಿತವಾಗಿ ಬಳಲಿಹೋಗುವಿರಿ.
೧೯
ಆದ್ದರಿಂದ ನನ್ನ ಮಾತನ್ನು ಕೇಳು; ನಾನು ಕೊಡುವ ಸಲಹೆಯನ್ನು ಗಮನಿಸು, ದೇವರು ನಿನ್ನೊಡನೆ ಇರುವರು. ನೀನು ಜನರಿಗೂ ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಮುಂದೆ ತರುವುದೇನೋ ಸರಿ.
೨೦
ಅಂತೆಯೇ ದೇವರ ಆಜ್ಞಾವಿಧಿಗಳನ್ನು ಜನರಿಗೆ ಬೋಧಿಸಿ ಅವರು ನಡೆಯಬೇಕಾದ ಮಾರ್ಗವನ್ನು ಹಾಗು ಕೈಗೊಳ್ಳಬೇಕಾದ ಕಾರ್ಯಗಳನ್ನು ತಿಳಿಯಪಡಿಸಲೇಬೇಕು.
೨೧
ಆದರೆ ನೀನು ಈ ಜನರಲ್ಲೆಲ್ಲಾ ಸಮರ್ಥರು, ದೇವಭಕ್ತರು, ನಂಬಿಗಸ್ಥರು ಹಾಗು ಲಂಚ ಮುಟ್ಟದವರು ಆಗಿರುವ ವ್ಯಕ್ತಿಗಳನ್ನು ಆರಿಸಿಕೊ. ಅಂಥವರನ್ನು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಅಧಿಪತಿಗಳನ್ನಾಗಿ ನೇಮಿಸು.
೨೨
ಅವರೇ ಸದಾ ಜನರಿಗೆ ನ್ಯಾಯ ತೀರಿಸಲಿ; ದೊಡ್ಡ ವ್ಯಾಜ್ಯಗಳನ್ನು ನಿನ್ನ ಮುಂದೆ ತರಲಿ. ಆಗ ಅವರೂ ಈ ಹೊಣೆಯನ್ನು ಹೊರುವುದರಿಂದ ನಿನ್ನ ಹೊರೆ ಹಗುರವಾಗುವುದು.
೨೩
ಹೀಗೆ ಮಾಡಲು ದೇವರು ನಿನಗೆ ಅಪ್ಪಣೆ ಕೊಡಲಿ; ಮಾಡಿದರೆ ಈ ಹೊಣೆಯನ್ನು ನಿರ್ವಹಿಸಲು ಶಕ್ತನಾಗುವೆ; ಈ ಜನರೂ ಕೂಡ ಸಂತುಷ್ಟರಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವರು,” ಎಂದನು.
೨೪
ಮೋಶೆ ತನ್ನ ಮಾವನ ಸಲಹೆಯನ್ನು ಒಪ್ಪಿಕೊಂಡನು. ಅವನು ಹೇಳಿದಂತೆಯೇ ಮಾಡಿದನು.
೨೫
ಇಸ್ರಯೇಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಮೇಲೆ ಅಧಿಪತಿಗಳನ್ನು ನೇಮಿಸಿದನು.
೨೬
ಇವರು ಸದಾ ಜನರಿಗೆ ನ್ಯಾಯತೀರಿಸುವವರಾದರು. ಜಟಿಲವಾದ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸುಲಭವಾದುವುಗಳನ್ನು ಅವರೇ ತೀರಿಸುತ್ತಾ ಬಂದರು.
೨೭
ಬಳಿಕ ಮೋಶೆ ತನ್ನ ಮಾವನನ್ನು ಬೀಳ್ಕೊಟ್ಟನು. ಅವನು ತನ್ನ ನಾಡಿಗೆ ಹಿಂತಿರುಗಿ ಹೋದನು.