೧ |
ಇಸ್ರಯೇಲರು ಸರ್ವೇಶ್ವರನ ಅಪ್ಪಣೆಯ ಪ್ರಕಾರ ಸೀನ್ ಎಂಬ ಮರುಭೂಮಿಯಿಂದ ಹೊರಟು ಮುಂದಕ್ಕೆ ಪ್ರಯಾಣ ಮಾಡಿ ರೆಫೀದೀಮಿನಲ್ಲಿ ಇಳಿದುಕೊಂಡರು. |
೨ |
ಅಲ್ಲಿ ಕುಡಿಯುವುದಕ್ಕೆ ನೀರಿರಲಿಲ್ಲ. ಜನರು ಮೋಶೆಯ ಸಂಗಡ ಜಗಳವಾಡುತ್ತಾ, “ನಮಗೆ ಕುಡಿಯುವುದಕ್ಕೆ ನೀರು ತೋರಿಸಬೇಕು,” ಎಂದು ಹೇಳಿದರು. ಆಗ ಮೋಶೆ, “ನೀವು ನನ್ನ ಸಂಗಡ ವಾದಿಸುವುದೇಕೆ? ಸರ್ವೇಶ್ವರನನ್ನು ಏಕೆ ಪರೀಕ್ಷಿಸುತ್ತೀರಿ?” ಎಂದನು. |
೩ |
ಅಲ್ಲಿ ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು. |
೪ |
ಆಗ ಮೋಶೆ ಸರ್ವೇಶ್ವರನಿಗೆ ಮೊರೆಯಿಟ್ಟನು, “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವಂತಿದ್ದಾರೆ” ಎಂದು ಪ್ರಾರ್ಥಿಸಿದನು. |
೫ |
ಅದಕ್ಕೆ ಸರ್ವೇಶ್ವರ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಇಸ್ರಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು, ನಾನು ತೋರಿಸುವ ಸ್ಥಳಕ್ಕೆ ಜನರ ಮುಂದೆ ಹೋಗು. |
೬ |
ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು. |
೭ |
ಸರ್ವೇಶ್ವರ ಸ್ವಾಮಿ ತಮ್ಮ ಮಧ್ಯೆ ಇದ್ದಾರೋ ಇಲ್ಲವೋ ಎಂದು ಇಸ್ರಯೇಲರು ಅಲ್ಲಿ ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ‘ಮಸ್ಸಾ’ ಎಂತಲೂ ಜನರು ತನ್ನೊಡನೆ ವಾಗ್ವಾದ ಮಾಡಿದ್ದರಿಂದ ‘ಮೆರೀಬಾ’ ಎಂತಲೂ ಹೆಸರಿಟ್ಟನು. |
೮ |
ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಯೇಲರ ಮೇಲೆ ಯುದ್ಧಮಾಡುವುದಕ್ಕೆ ಬಂದರು. |
೯ |
‘ಮೋಶೆ ಯೆಹೋಶುವನಿಗೆ, “ನೀನು ಯೋಧರನ್ನು ಆರಿಸಿಕೊಂಡು ನಾಳೆ ನಮ್ಮ ಪರವಾಗಿ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ದೇವದಂಡವನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು,” ಎಂದು ಹೇಳಿದನು. |
೧೦ |
ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರ ಸಂಗಡ ಯುದ್ಧಮಾಡಲು ಹೊರಟನು. ಮೋಶೆ, ಆರೋನ ಹಾಗು ಹೂರ ಈ ಮೂವರು ಗುಡ್ಡದ ತುದಿಗೆ ಏರಿದರು. |
೧೧ |
ಮೋಶೆ ತನ್ನ ಕೈಗಳನ್ನು ಮೇಲಕ್ಕೆ ಎತ್ತಿರುವಾಗಲೆಲ್ಲಾ ಇಸ್ರಯೇಲರು ಜಯಶೀಲರಾಗುತ್ತಿದ್ದರು, ಇಳಿಸುವಾಗಲೆಲ್ಲಾ ಅಮಾಲೇಕ್ಯರು ಜಯಶೀಲರಾಗುತ್ತಿದ್ದರು. |
೧೨ |
ಹೀಗಿರಲು ಮೋಶೆಯ ಕೈಗಳು ಆಯಾಸಗೊಳ್ಳುತ್ತಿದ್ದುದರಿಂದ ಆರೋನ ಮತ್ತು ಹೂರನು ಒಂದು ಕಲ್ಲನ್ನು ತಂದಿಟ್ಟು ಅದರ ಮೇಲೆ ಮೋಶೆಯನ್ನು ಕುಳ್ಳಿರಿಸಿದರು. ಅಲ್ಲದೆ ಬಲಗಡೆ ಒಬ್ಬನು ಎಡಗಡೆ ಒಬ್ಬನು ನಿಂತು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಾಗಿ ಅವನ ಕೈಗಳು ಹೊತ್ತು ಮುಳುಗುವ ತನಕ ಇಳಿಯದೆ ನಿಂತೇ ಇರುವಂತೆ ಮಾಡಿದರು. |
೧೩ |
ಹೀಗೆ ಯೆಹೋಶುವನು ಅಮಾಲೇಕ್ಯರ ಯೋಧರನ್ನು ಕತ್ತಿಗೆ ತುತ್ತಾಗಿಸಿ ಅವರನ್ನು ಸೋಲಿಸಿದನು. |
೧೪ |
ಆಗ ಸರ್ವೇಶ್ವರ, “ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಇಲ್ಲದಂತೆ ಮಾಡುವೆನು ಎಂಬ ಈ ಮಾತನ್ನು ಜ್ಞಾಪಕಾರ್ಥವಾಗಿ ಪುಸ್ತಕದಲ್ಲಿ ಬರೆ ಮತ್ತು ಯೆಹೋಶುವನಿಗೆ ಮನದಟ್ಟಾಗುವಂತೆ ಮಾಡು” ಎಂದು ಮೋಶೆಗೆ ಹೇಳಿದರು. |
೧೫ |
ಆ ಸ್ಥಳದಲ್ಲಿ ಮೋಶೆ ಒಂದು ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ‘ಯಾವ್ವೆನಿಸ್ಸಿ’ ಎಂದು ಹೆಸರಿಟ್ಟನು. |
೧೬ |
ಅಲ್ಲದೆ, “ಸರ್ವೇಶ್ವರನ ಪತಾಕೆಯನ್ನು ಎತ್ತಿಹಿಡಿಯಿರಿ. ಅಮಾಲೇಕ್ಯರ ಮೇಲೆ ಸರ್ವೇಶ್ವರನಿಗೆ ತಲತಲಾಂತರಕ್ಕೂ ಯುದ್ಧವಿರುವುದು,” ಎಂದು ಹೇಳಿದನು.
|
Kannada Bible (KNCL) 2016 |
No Data |