A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೧೪ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು:
ಇಸ್ರಯೇಲರು ಹಿಂತಿರುಗಿ ಹೋಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ಮಿಗ್ದೋಲಿಗೂ ಕೆಂಪುಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಹೇಳು. ಅದರ ಎದುರಿಗೆ ಸಮುದ್ರದ ಬಳಿಯಲ್ಲೇ ಅವರು ಇಳಿದುಕೊಳ್ಳಬೇಕು.
ಫರೋಹನು ಅದನ್ನು ಕಂಡು, ‘ಇಸ್ರಯೇಲರಿಗೆ ದಾರಿತಪ್ಪಿತು, ಸುತ್ತಲೂ ಮರುಭೂಮಿ ಅವರನ್ನು ಆವರಿಸಿದೆ” ಎಂದುಕೊಳ್ಳುವನು.
ನಾನು ಫರೋಹನ ಹೃದಯವನ್ನು ಕಠಿಣವಾಗಿಸುವೆನು. ಆದುದರಿಂದ ಅವನು ಅವರನ್ನು ಬೆನ್ನಟ್ಟಿ ಬರುವನು. ಆಗ ಆ ಫರೋಹನನ್ನೂ ಅವನ ಸೈನ್ಯವನ್ನೂ ಗೆದ್ದು ನಾನು ಪ್ರಖ್ಯಾತಿ ಹೊಂದುವೆನು. ನಾನೇ ಸರ್ವೇಶ್ವರ ಎಂಬುದು ಈಜಿಪ್ಟಿನವರಿಗೆ ಗೊತ್ತಾಗುವುದು.” ಸರ್ವೇಶ್ವರನ ಆಜ್ಞೆಯಂತೆಯೇ ಇಸ್ರಯೇಲರು ನಡೆದುಕೊಂಡರು.
ಇತ್ತ ಫರೋಹನಿಗೆ ಇಸ್ರಯೇಲರು ಓಡಿಹೋದರೆಂಬ ಸುದ್ದಿ ಮುಟ್ಟಿತು. ಅವರ ಬಗ್ಗೆ ಅವನ ಹಾಗು ಅವನ ಪರಿವಾರದವರ ಮನಸ್ಸು ಮಾರ್ಪಟ್ಟಿತು. “ನಮಗೆ ಗುಲಾಮರಾಗಿದ್ದ ಇಸ್ರಯೇಲರನ್ನು ನಾವೇಕೆ ಹೋಗಗೊಟ್ಟೆವು?” ಎಂದು ನೊಂದುಕೊಂಡರು.
ಕೂಡಲೆ ಫರೋಹನು ತನ್ನ ರಥಬಲವನ್ನು ಸಜ್ಜುಗೊಳಿಸಿಕೊಂಡು ಸೈನ್ಯ ಸಮೇತನಾಗಿ ಹೊರಟನು.
ಈಜಿಪ್ಟಿನ ಎಲ್ಲ ರಥಗಳನ್ನೂ ಆರುನೂರು ಶ್ರೇಷ್ಠರಥಗಳನ್ನು ತೆಗೆದುಕೊಂಡು ಹೋದನು. ಈ ಎಲ್ಲ ರಥಗಳಲ್ಲಿ ಸೇನಾನಿಗಳಿದ್ದರು.
ಈಜಿಪ್ಟ್ ರಾಜ ಫರೋಹನ ಹೃದಯವನ್ನು ಸರ್ವೇಶ್ವರ ಕಠಿಣಪಡಿಸಿದ್ದರಿಂದ ಅವನು ಇಸ್ರಯೇಲರನ್ನು ಬೆನ್ನಟ್ಟಿಹೋದನು. ಇತ್ತ ಅಟ್ಟಹಾಸದಿಂದ ಹೊರಟಿದ್ದರು ಇಸ್ರಯೇಲರು.
ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು, ಸೈನ್ಯದವರೆಲ್ಲರು ಅವನ ಹಿಂದೆ ಹೊರಟು ಇಸ್ರಯೇಲರ ಸಮೀಪಕ್ಕೆ ಬಂದರು; ಪೀಹಹೀರೋತಿನ ಬಳಿ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುವಾಗಲೇ ಅವರ ಹತ್ತಿರಕ್ಕೆ ಬಂದರು.
೧೦
ಫರೋಹನು ಸಮೀಪಿಸುತ್ತಿರುವುದನ್ನು ಇಸ್ರಯೇಲರು ಕಣ್ಣೆತ್ತಿ ನೋಡಿದರು. ತಮ್ಮನ್ನು ಬೆನ್ನಟ್ಟಿ ಬಂದಿದ್ದ ಈಜಿಪ್ಟಿನವರನ್ನು ಕಂಡು ಬಹಳವಾಗಿ ಭಯಪಟ್ಟು ಸರ್ವೇಶ್ವರನಿಗೆ ಮೊರೆಯಿಟ್ಟರು.
೧೧
ಮೋಶೆಗೆ ಅವರು, “ಈಜಿಪ್ಟಿನಲ್ಲಿ ಸಮಾಧಿಗಳಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿಯೆಂದು ನಮ್ಮನ್ನು ಇಲ್ಲಿಗೆ ಕರೆದುತಂದಿರೋ? ಈಜಿಪ್ಟಿನಿಂದ ಕರೆದುಕೊಂಡು ಬಂದು ನಮಗೆ ಹೀಗೆ ಮಾಡಿಬಿಟ್ಟಿದ್ದೇಕೆ?
೧೨
ನಾವು ಈಜಿಪ್ಟಿನಲ್ಲಿರುವಾಗಲೇ, ‘ನಮ್ಮ ಗೊಡವೆಗೆ ಬರಬೇಡಿ, ನಾವು ಈಜಿಪ್ಟಿನವರಿಗೆ ಗುಲಾಮರಾಗಿಯೇ ಇರುತ್ತೇವೆ,” ಎಂದು ನಿಮಗೆ ನಾವು ಹೇಳಲಿಲ್ಲವೆ? ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಗುಲಾಮರಾಗಿರುವುದೇ ಮೇಲಲ್ಲವೇ?” ಎಂದು ದೂರಿದರು.
೧೩
ಅದಕ್ಕೆ ಮೋಶೆ ಆ ಜನರಿಗೆ, “ಅಂಜಬೇಡಿ, ಸುಮ್ಮನಿರಿ, ಈ ದಿನ ಸರ್ವೇಶ್ವರ ನಿಮ್ಮನ್ನು ಹೇಗೆ ರಕ್ಷಿಸುತ್ತಾರೆಂದು ನೋಡಿ! ಈ ದಿನ ನೀವು ನೋಡುವ ಈಜಿಪ್ಟಿನವರನ್ನು ಇನ್ನೆಂದಿಗೂ ನೋಡುವುದಿಲ್ಲ.
೧೪
ಸರ್ವೇಶ್ವರ ಸ್ವಾಮಿಯೇ ನಿಮ್ಮ ಪರವಾಗಿ ಯುದ್ಧಮಾಡುವರು. ನೀವು ನೆಮ್ಮದಿಯಿಂದಿರಿ,” ಎಂದು ಹೇಳಿದನು.
೧೫
ಆಗ ಸರ್ವೇಶ್ವರ: “ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮುಂದಕ್ಕೆ ಹೊರಡಬೇಕೆಂದು ಇಸ್ರಯೇಲರಿಗೆ ಹೇಳು.
೧೬
ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು; ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದುಹೋಗುವರು.
೧೭
ನಾನು ಈಜಿಪ್ಟಿನವರ ಹೃದಯಗಳನ್ನು ಕಠಿಣಪಡಿಸುವೆನು, ಎಂದೇ ಅವರು ಇವರ ಹಿಂದೆ ಸಮುದ್ರದೊಳಕ್ಕೆ ಹೋಗುವರು. ಆಗ, ನಾನು ಫರೋಹನ್ನು ಅವನ ಸಮಸ್ತ ಸೈನ್ಯವನ್ನೂ, ರಥಗಳನ್ನೂ ಹಾಗು
೧೮
ರಾಹುತರನ್ನು ಸೋಲಿಸಿ ಪ್ರಖ್ಯಾತಿ ಹೊಂದಿದ ನಂತರ ನಾನೇ ಸರ್ವೇಶ್ವರ ಎಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು ಮೋಶೆಗೆ.
೧೯
ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
೨೦
ಆ ಮೇಘಸ್ತಂಭವು ಈಜಿಪ್ಟಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬಂದು ಈಜಿಪ್ಟಿನವರಿಗೆ ಕತ್ತಲೆಯನ್ನುಂಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. ಈ ಕಾರಣ ಆ ರಾತ್ರಿಯೆಲ್ಲಾ ಒಂದು ಪಡೆಯವರು ಇನ್ನೊಂದು ಪಡೆಯವರ ಬಳಿಗೆ ಬರಲಾಗಲಿಲ್ಲ.
೨೧
ಮೋಶೆ ಸಮುದ್ರದ ಮೇಲೆ ಕೈ ಚಾಚಿದಾಗ ಸರ್ವೇಶ್ವರ ಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದುಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು.
೨೨
ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು.
೨೩
ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು.
೨೪
ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿ ಮಾಡಿದರು.
೨೫
ಸರ್ವೇಶ್ವರ ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, “ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು. ಓಡಿಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾನೆ,” ಎಂದುಕೊಂಡರು.
೨೬
ಅಷ್ಟರಲ್ಲಿ ಸರ್ವೇಶ್ವರ, “ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು,” ಎಂದು ಮೋಶೆಗೆ ಹೇಳಿದರು.
೨೭
ಅಂತೆಯೇ ಮೋಶೆ ಸಮುದ್ರದ ಮೇಲೆ ಕೈ ಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು.
೨೮
ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗು ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.
೨೯
ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತ್ತು.
೩೦
ಆ ದಿನ ಸರ್ವೇಶ್ವರ ಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು.
೩೧
ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆಯಿಟ್ಟರು.