A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ವಿಮೋಚನಾಕಾಂಡ ೧೨ಈಜಿಪ್ಟ್ ದೇಶದಲ್ಲಿ ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಹೀಗೆಂದರು:
“ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು.
ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆಯಿಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು.
ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ.
ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು.
ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು.
ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು.
ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟಮಾಡಬೇಕು.
ಅದನ್ನು ಹಸಿಯಾಗಿಯೋ ಅಥವಾ ನೀರಿನಲ್ಲಿ ಬೇಯಿಸಿಯೋ ತಿನ್ನಕೂಡದು. ಅದನ್ನೆಲ್ಲಾ, ತಲೆ, ಕಾಲು, ಒಳ ಭಾಗಗಳ ಸಹಿತವಾಗಿ, ಬೆಂಕಿಯಲ್ಲಿ ಸುಟ್ಟೇ ತಿನ್ನಬೇಕು.
10
ಮರುದಿನದ ಬೆಳಗಿನ ತನಕ ಅದರಲ್ಲಿ ಸ್ವಲ್ಪವನ್ನಾದರು ಮಿಗಿಸಕೂಡದು. ಬೆಳಗಿನವರೆಗೆ ಮಿಕ್ಕದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
11
ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ಬೇಗ ಬೇಗನೆ ಊಟಮಾಡಬೇಕು. ಏಕೆಂದರೆ ಅದು ಸರ್ವೇಶ್ವರ ಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ.
12
ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದುಹೋಗುವೆನು; ಮನುಷ್ಯರಾಗಲಿ, ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ!
13
ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.
14
ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು.
15
ಏಳು ದಿವಸ ನೀವು ಹುಳಿರಹಿತ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲೇ ಹುಳಿಹಿಟ್ಟನ್ನೆಲ್ಲಾ ನಿಮ್ಮ ಮನೆಗಳಿಂದ ತೆಗೆದುಬಿಡಬೇಕು. ಆ ಏಳು ದಿನಗಳಲ್ಲಿ ಯಾವನಾದರೂ ಹುಳಿಬೆರಸಿದ್ದನ್ನು ತಿಂದರೆ ಅವನನ್ನು ಇಸ್ರಯೇಲರಿಂದ ಬಹಿಷ್ಕರಿಸಬೇಕು.
16
ಮೊದಲನೆಯ ದಿನದಲ್ಲೇ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲೂ ದೇವಾರಾಧನೆಗಾಗಿ ಸಭೆಸೇರಬೇಕು. ಈ ಎರಡೂ ದಿವಸಗಳಲ್ಲಿ ಯಾವ ಕೆಲಸವನ್ನೂ ಮಾಡಕೂಡದು. ಊಟಕ್ಕೆ ಬೇಕಾದುದನ್ನು ಮಾತ್ರ ಮಾಡಬಹುದು.
17
ಹುಳಿರಹಿತ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ನೀವು ಆಚರಿಸಬೇಕು. ಏಕೆಂದರೆ ಆ ದಿನದಲ್ಲೇ ನಾನು ನಿಮ್ಮ ಪಾಳೆಯದವರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದದ್ದು. ನೀವೂ ನಿಮ್ಮ ಸಂತತಿಯವರೂ ಆ ದಿನವನ್ನು ಆಚರಣೆಗೆ ತರಬೇಕು.
18
ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಇಪ್ಪತ್ತೊಂದನೆಯ ದಿನದ ಸಂಜೆಯವರೆಗೂ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು.
19
ಏಳು ದಿನ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟೇ ಇರಕೂಡದು. ಹುಳಿ ಬೆರಸಿದ್ದನ್ನು ತಿನ್ನುವವನು ಪರದೇಶದವನಾಗಿರಲಿ, ಸ್ವದೇಶದವನಾಗಿರಲಿ ಇಸ್ರಯೇಲ್ ಜನರಿಂದ ಬಹಿಷ್ಕೃತನು.
20
ನೀವು ನಿಮ್ಮ ಎಲ್ಲಾ ಮನೆಗಳಲ್ಲಿ ಹುಳಿರಹಿತ ರೊಟ್ಟಿಗಳನ್ನು ತಿನ್ನಬೇಕೇ ಹೊರತು ಹುಳಿಸಹಿತವಾದ ಯಾವುದನ್ನೂ ತಿನ್ನಕೂಡದು,” ಎಂದು ವಿಧಿಸಿದರು.
21
ಮೋಶೆ ಇಸ್ರಯೇಲರ ಹಿರಿಯರೆಲ್ಲರನ್ನು ಕರೆಯಿಸಿ ಅವರಿಗೆ, “ನೀವು ನಿಮ್ಮ ನಿಮ್ಮ ಕುಟುಂಬಗಳಿಗಾಗಿ ಹಿಂಡಿನಿಂದ ಮರಿಗಳನ್ನು ಆರಿಸಿಕೊಂಡು ಪಾಸ್ಕ ಹಬ್ಬಕ್ಕೆ ಕೊಯ್ಯಿರಿ.
22
ಹಿಸ್ಸೋಪ್ ಗಿಡದ ಕುಚ್ಚನ್ನು ಬಟ್ಟಲಿನಲ್ಲಿರುವ ಆ ರಕ್ತದಲ್ಲಿ ಅದ್ದಿ ಬಾಗಿಲಿನ ಪಟ್ಟಿಗೂ ಅದರ ನಿಲುವು ಕಂಬಗಳೆರಡಕ್ಕೂ ಹಚ್ಚಿರಿ. ಬಳಿಕ ನಿಮ್ಮಲ್ಲಿ ಒಬ್ಬರೂ ಸೂರ್ಯೋದಯದವರೆಗೆ ಬಾಗಿಲಿನಿಂದ ಹೊರಗೆ ಹೋಗಕೂಡದು.
23
ಸರ್ವೇಶ್ವರ ಈಜಿಪ್ಟಿನವರನ್ನು ವಧಿಸಲು ಆ ದೇಶದ ನಡುವೆ ಹಾದುಹೋಗುವಾಗ ನಿಮ್ಮ ನಿಮ್ಮ ಮನೆಬಾಗಲಿನ ಮೇಲ್ಪಟ್ಟಿಯಲ್ಲೂ ಹಾಗೂ ಎರಡು ನಿಲುವು ಕಂಬಗಳಲ್ಲೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿಹೋಗುವರು. ನಿಮ್ಮನ್ನು ವಧಿಸಲು ವಿನಾಶಕನನ್ನು ನಿಮ್ಮ ಮನೆಗಳಿಗೆ ಅವರು ಬರಗೊಡಿಸುವುದೇ ಇಲ್ಲ.
24
ನೀವು ಮತ್ತು ನಿಮ್ಮ ಸಂತತಿಯವರು ಈ ನಿಯಮಗಳನ್ನು ಶಾಶ್ವತವಾಗಿ ಆಚರಿಸಬೇಕು.
25
ಸರ್ವೇಶ್ವರ ತಮ್ಮ ವಾಗ್ದಾನದ ಮೇರೆಗೆ ನಿಮಗೆ ಕೊಡುವ ನಾಡಿಗೆ ನೀವು ಸೇರಿದಾಗ ಈ ವಿಧಿಯನ್ನು ಅನುಸರಿಸಬೇಕು.
26
ಮುಂದಕ್ಕೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ವಿಧಿಯ ಅರ್ಥವೇನು?’ ಎಂದು ಕೇಳಿದಾಗ ನೀವು ಅವರಿಗೆ,
27
‘ಸರ್ವೇಶ್ವರ ಸ್ವಾಮಿ ಈಜಿಪ್ಟಿನವರನ್ನು ಸಂಹರಿಸಿದಾಗ ಆ ದೇಶದಲ್ಲೇ ಇದ್ದ ಇಸ್ರಯೇಲರ ಮನೆಗಳನ್ನು ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದರು. ಆದ್ದರಿಂದ ಸರ್ವೇಶ್ವರ ಸ್ವಾಮಿಯ ಗೌರವಾರ್ಥ ಈ ಪಾಸ್ಕ ಬಲಿಯ ಆಚರಣೆಯನ್ನು ನಡೆಸುತ್ತಿದ್ದೇವೆ’ ಎಂದು ಉತ್ತರಕೊಡಿ,” ಎಂದು ಹೇಳಿದನು. ...
28
ಜನರು ತಲೆಬಾಗಿ ನಮಸ್ಕರಿಸಿದರು. ಇಸ್ರಯೇಲರು ಅಲ್ಲಿಂದ ಹೊರಟು ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ನಡೆದುಕೊಂಡರು.
29
ಅರ್ಧರಾತ್ರಿಯಲ್ಲಿ ಸರ್ವೇಶ್ವರ ಸ್ವಾಮಿ ಸಿಂಹಾಸನಾರೂಢನಾಗಬೇಕಾಗಿದ್ದ ಫರೋಹನ ಚೊಚ್ಚಲು ಮಗನು ಮೊದಲ್ಗೊಂಡು ಸೆರೆಯಲ್ಲಿದ್ದ ಖೈದಿಯ ಚೊಚ್ಚಲ ಮಗನವರೆಗೂ ಈಜಿಪ್ಟ್ ದೇಶದಲ್ಲಿದ್ದ ಎಲ್ಲ ಚೊಚ್ಚಲು ಮಕ್ಕಳನ್ನೂ ಪ್ರಾಣಿಗಳ ಚೊಚ್ಚಲ ಮರಿಗಳನ್ನೂ ಸಂಹಾರ ಮಾಡಿದರು.
30
ಆ ರಾತ್ರಿ ಫರೋಹನೂ ಅವನ ಪರಿವಾರದವರೂ ಈಜಿಪ್ಟಿನವರೆಲ್ಲರೂ ಎದ್ದು ನೋಡಿದಾಗ ಶವವಿಲ್ಲದ ಮನೆ ಒಂದೂ ಇರಲಿಲ್ಲ. ಆದ್ದರಿಂದ ಆ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಎದ್ದಿತು.
31
ಫರೋಹನು ಆ ರಾತ್ರಿಯಲ್ಲೆ ಮೋಶೆ ಮತ್ತು ಆರೋನರನ್ನು ಕರೆಯಿಸಿದನು. “ನೀವೂ ಹಾಗು ಇಸ್ರಯೇಲರೆಲ್ಲರೂ ನನ್ನ ಜನರನ್ನು ಬಿಟ್ಟು ಹೊರಟುಹೋಗಿ.
32
ನೀವು ಕೇಳಿಕೊಂಡಂತೆ ಸರ್ವೇಶ್ವರನನ್ನು ಆರಾಧಿಸಿ. ನಿಮ್ಮ ಕೋರಿಕೆಯಂತೆ ಕುರಿದನಗಳನ್ನೂ ತೆಗೆದುಕೊಂಡು ಹೋಗಬಹುದು. ನನ್ನ ಹಿತಕ್ಕಾಗಿಯೂ ಪ್ರಾರ್ಥನೆಮಾಡಿ,” ಎಂದನು.
33
ಈಜಿಪ್ಟಿನವರು, “ನಾವೆಲ್ಲರು ಸಾಯುತ್ತೇವೆ,” ಎಂದುಕೊಂಡು ತಮ್ಮ ದೇಶವನ್ನು ಬಿಟ್ಟು ಬೇಗನೆ ಹೋಗಬೇಕೆಂದು ಇಸ್ರಯೇಲರನ್ನು ಒತ್ತಾಯಪಡಿಸಿದರು.
34
ಆದುದರಿಂದ ಇಸ್ರಯೇಲರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮುಂಚೆಯೇ ನಾದುವ ಹರಿವಾಣಗಳಲ್ಲಿದ್ದ ಕಣಕದ ಮುದ್ದೆಯನ್ನು ಹಾಗೆಯೇ ಗಂಟುಕಟ್ಟಿ ತಮ್ಮ ಹೆಗಲಿನ ಮೇಲೆ ಹಾಕಿಕೊಂಡು ಹೊರಟೇಬಿಟ್ಟರು.
35
ಮೋಶೆ ಹೇಳಿಕೊಟ್ಟ ಹಾಗೆ ಈಜಿಪ್ಟಿನವರಿಂದ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ಬಟ್ಟೆಗಳನ್ನು ಕೇಳಿಕೊಂಡರು.
36
ಇಸ್ರಯೇಲರ ಮೇಲೆ ಈಜಿಪ್ಟಿನವರಿಗೆ ದಯೆ ಹುಟ್ಟುವಂತೆ ಮಾಡಿದ್ದರು ಸರ್ವೇಶ್ವರ. ಆದ್ದರಿಂದ ಅವರು ಕೇಳಿಕೊಂಡದ್ದನ್ನು ಈಜಿಪ್ಟಿನವರು ಕೊಟ್ಟುಬಿಟ್ಟರು. ಹೀಗೆ ಇಸ್ರಯೇಲರು ಈಜಿಪ್ಟಿನವರ ಸೊತ್ತನ್ನು ಸುಲಿಗೆ ಮಾಡಿಕೊಂಡರು.
37
ಇಸ್ರಯೇಲರು ರಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಅವರಲ್ಲಿ ಮಹಿಳೆಯರನ್ನೂ ಮಕ್ಕಳನ್ನೂ ಬಿಟ್ಟು ಗಂಡಸರ ಸಂಖ್ಯೆಯೇ ಸುಮಾರು ಆರು ಲಕ್ಷವಿತ್ತು.
38
ಅವರೊಂದಿಗೆ ಬಹುಮಂದಿ ಅನ್ಯದೇಶೀಯರೂ ಹೊರಟು ಬಂದಿದ್ದರು. ಕುರಿ, ದನ ಮುಂತಾದ ಪಶುಪ್ರಾಣಿಗಳು ಬಹಳವಿದ್ದವು.
39
ಈಜಿಪ್ಟ್ ದೇಶದಿಂದ ಅವರು ತಂದಿದ್ದ ಕಣಕದ ಮುದ್ದೆಯಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಸುಟ್ಟರು. ಅಲ್ಲಿಂದ ಅವರನ್ನು ಹೊರಡಿಸಿದಾಗ ಸ್ವಲ್ಪವೂ ಸಮಯ ಸಿಕ್ಕದೆ ಕಣಕದಲ್ಲಿ ಹುಳಿಯನ್ನು ಕಲಸಲಿಕ್ಕೂ ಆಗಲಿಲ್ಲ ಹಾಗು ಬೇರೆ ಆಹಾರವನ್ನು ಸಿದ್ಧಪಡಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ.
40
ಇಸ್ರಯೇಲರು ಈಜಿಪ್ಟ್ ದೇಶದಲ್ಲಿ ನಾನೂರಮೂವತ್ತು ವರ್ಷಗಳ ಕಾಲ ವಾಸವಾಗಿದ್ದರು.
41
ಈ ನಾನೂರ ಮೂವತ್ತು ವರ್ಷಗಳು ಕಳೆದ ನಂತರ ಅದೇ ದಿವಸದಲ್ಲಿ ಸರ್ವೇಶ್ವರನ ಪಡೆಗಳೆಲ್ಲವೂ ಈಜಿಪ್ಟ್ ದೇಶವನ್ನು ಬಿಟ್ಟು ಹೊರಟುಬಂದವು.
42
ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡಲು ಜಾಗರೂಕರಾಗಿದ್ದದ್ದು ಆ ರಾತ್ರಿಯೇ. ಆದುದರಿಂದಲೆ ಇಸ್ರಯೇಲರೆಲ್ಲರು ತಲತಲಾಂತರಕ್ಕೂ ಸರ್ವೇಶ್ವರನ ಗೌರವಾರ್ಥ ಈ ರಾತ್ರಿಯಲ್ಲೇ ಜಾಗರಣೆಯನ್ನು ಅನುಸರಿಸಬೇಕು.
43
ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರಿಗೆ ಹೀಗೆಂದರು: “ಪಾಸ್ಕಹಬ್ಬ ಆಚರಣೆಯ ಕ್ರಮ ಇದು - ವಿದೇಶೀಯನಾರೂ ಆ ಭೋಜನದಲ್ಲಿ ಪಾಲ್ಗೊಳ್ಳಬಾರದು.
44
ನೀವು ಕ್ರಯಕ್ಕೆ ಕೊಂಡ ಜೀತಗಾರನು ಸುನ್ನತಿ ಮಾಡಿಸಿಕೊಂಡವನಾದರೆ ಅಂಥವನು ಅದರಲ್ಲಿ ಭಾಗವಹಿಸಬಹುದು.
45
ತಾತ್ಕಾಲಿಕವಾಗಿ ತಂಗಿರುವವನಾಗಲಿ ಕೂಲಿಯಾಳಾಗಲಿ ಅದರಲ್ಲಿ ಭಾಗವಹಿಸಬಾರದು.
46
ಅಡಿಗೆ ಮಾಡಿದ ಮನೆಯಲ್ಲೆ ಅದನ್ನು ಊಟಮಾಡಬೇಕು. ಅದರಲ್ಲಿ ಕಿಂಚಿತ್ತನ್ನೂ ಆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ಬಲಿಪ್ರಾಣಿಯ ಎಲುಬೊಂದನ್ನಾದರೂ ಮುರಿಯಕೂಡದು.
47
ಇಸ್ರಯೇಲರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು.
48
ನಿಮ್ಮ ಬಳಿ ವಾಸವಾಗಿರುವ ವಿದೇಶೀಯನೊಬ್ಬನು ಸರ್ವೇಶ್ವರನಿಗೆ ಈ ಪಾಸ್ಕಹಬ್ಬವನ್ನು ಕೊಂಡಾಡಬೇಕೆಂಬ ಆಸೆಯಿದ್ದರೆ ಅವನೂ ಅವನ ಕುಟುಂಬಕ್ಕೆ ಸೇರಿದ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು. ಬಳಿಕ ಅವನು ಬಂದು ಈ ಹಬ್ಬವನ್ನು ಆಚರಿಸಬಹುದು. ಅಂಥವನು ಸ್ವದೇಶದವನಂತೆ ಆಗುತ್ತಾನೆ. ಆದರೆ ಸುನ್ನತಿ ಮಾಡಿಸಿಕೊಳ್ಳದ ಯಾವನೂ ಆ ಭೋಜನದಲ್ಲಿ ಭಾಗಿ ಆಗಕೂಡದು.
49
ಸ್ವದೇಶಿಗೂ ನಿಮ್ಮೊಡನೆ ವಾಸವಾಗಿರುವ ವಿದೇಶಿಗೂ ಅನ್ವಯಿಸುವ ವಿಧಿ ಒಂದೇ ಆಗಿರುತ್ತದೆ,”
50
ಮೋಶೆ ಮತ್ತು ಆರೋನರಿಗೆ ಸರ್ವೇಶ್ವರ ಆಜ್ಞಾಪಿಸಿದ ಮೇರೆಗೆ ಇಸ್ರಯೇಲರೆಲ್ಲರೂ ನಡೆದುಕೊಂಡರು.
51
ಆ ದಿನ ಸರ್ವೇಶ್ವರ ಇಸ್ರಯೇಲರನ್ನು ಪಡೆಪಡೆಯಾಗಿ ಈಜಿಪ್ಟ್ ದೇಶದಿಂದ ಹೊರಗೆ ಕರೆದೊಯ್ದರು.