A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೯೯



ವಹಿಸಿಹನು ಪ್ರಭು ರಾಜ್ಯಾಧಿಕಾರವನು: ನಡುಗುತಿಹುದು ಜನಾಂಗವು I ಕೆರೂಬಿಯರ ಮಧ್ಯೆ ಆಸೀನನಾಗಿಹನು: ಕಂಪಿಸುತಿಹುದು ಜಗವು II
ಸಿಯೋನಿನಲಿ ಪ್ರಭು ಶ್ರೇಷ್ಠನು I ರಾಷ್ಟ್ರಗಳಲ್ಲೆಲ್ಲಾ ಉತ್ಕೃಷ್ಠನು II
ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು I ಆತ ಘನಗಂಭೀರನು, ಸ್ತುತಿಸಲಿ ಆತನ ಶ್ರೀನಾಮವನು II
ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ I ನ್ಯಾಯನೀತಿ, ಯಥಾರ್ಥತೆಗೆ ಸ್ಥಾಪಕ ನೀನೆ I ಇಸ್ರಯೇಲ ವಂಶಕ್ಕಿದನು ಮನದಟ್ಟಾಗಿಸಿದವ ನೀನೆ II
ಪರಮ ಪಾವನನು ನಮ್ಮೀ ಸ್ವಾಮಿ ದೇವನು I ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು II
ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು I ಸಮುವೇಲನು ಸಹ ಆತನ ಶರಣರಲಿ ಒಬ್ಬನು I ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು II
ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು I ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು II
ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ I ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ II
ಘನಪಡಿಸಿರೆಮ್ಮ ಸ್ವಾಮಿ ದೇವನನು I ಶ್ರೀಪರ್ವತದಲಿ ವಂದಿಸಿ ಆತನನು I ಪರಮಪವಿತ್ರನು ಆ ನಮ್ಮ ದೇವನು II