೧ |
ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ I ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ II |
೨ |
ಪ್ರಾತಃಕಾಲದಲೆ ನಿನ್ನ ಪ್ರೀತಿಯನು I ರಾತ್ರಿಕಾಲದಲೆ ನಿನ್ನ ಸತ್ಯತೆಯನು II |
೩ |
ವರ್ಣಿಸುವುದುಚಿತ ವೀಣಾ ಸ್ವರಮಂಡಲದಿಂದ I ಕೊಳಲ ದನಿಯಿಂದ, ಕಿನ್ನರಿಯ ನಾದಸ್ವರದಿಂದ II |
೪ |
ನಿನ್ನ ಕಾರ್ಯಗಳಿಂದ ಪ್ರಭು, ನನ್ನನ್ನು ಆನಂದಗೊಳಿಸಿರುವೆ I ನಿನ್ನಾ ಕಾರ್ಯಗಳ ನೋಡಿ, ನಾನು ಉಲ್ಲಾಸದಿಂದ ಹಾಡುವೆ II |
೫ |
ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ I ನಿನ್ನಾಲೋಚನೆಗಳು ಎನಿತೋ ಅಶೋಧ್ಯ II |
೬ |
ಇದನರಿಯನು ಪಶುಪ್ರಾಯನು I ಇದ ತಿಳಿಯನು ಬುದ್ಧಿಹೀನನು II |
೭ |
ದುರುಳರು ಚಿಗುರಬಹುದು ಹುಲ್ಲಿನಂತೆ I ಕೆಡುಕರು ಅರಳಬಹುದು ಹೂವಿನಂತೆ I ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ II |
೮ |
ನೀನಾದರೊ ಪ್ರಭು, ಸರ್ವದಾ ಇರುವೆ I ಮಹೋನ್ನತದೊಳು ವಿರಾಜಿಸುತ್ತಿರುವೆ II |
೯ |
ಕಾಡುಕೋಣದ ಕೊಂಬಿನ ಬಲವನು ನನಗಿತ್ತಿರುವೆ I ಚೈತನ್ಯದ ತೈಲದಿಂದ ನನ್ನನು ಅಭ್ಯಂಜಿಸಿರುವೆ II |
೧೦ |
ನಿನ್ನ ಶತ್ರುಗಳ ವಿನಾಶ ನಿಶ್ಚಿತ I ಕೆಡುಕರೆಲ್ಲ ಚದರಿ ಪೋಪುದು ಖಚಿತ II |
೧೧ |
ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ ದುರ್ಗತಿಯನು I ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ ವಿಪತ್ತನು II |
೧೨ |
ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ I ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ II |
೧೩ |
ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II |
೧೪ |
*** |
೧೫ |
ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ I ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ II
|
Kannada Bible (KNCL) 2016 |
No Data |