೧ |
ಹೇ ಪ್ರಭು, ನೀಡೆನಗೆ ಸದುತ್ತರವನು I ಕಿವಿಗೊಡು, ದೀನನು, ದಲಿತನು ನಾನು II |
೨ |
ಕಾಪಾಡು ಪ್ರಭು, ನಾ ನಿನ್ನ ಭಕ್ತನು I ಉದ್ಧರಿಸು ನಿನ್ನ ನಂಬಿದ ದಾಸನನು II |
೩ |
ನೀನೆನಗೆ ದೇವನು, ಕರುಣಿಸೆನ್ನನು I ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು II |
೪ |
ನಿನ್ನ ದಾಸನಿಗೆ ನೀಡು ಮನದಾನಂದವನು I ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು II |
೫ |
ಪ್ರಭು, ನೀನು ದಯಾವಂತನು, ಕ್ಷಮಿಸುವವನು I ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು II |
೬ |
ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I ನನ್ನ ವಿಜ್ಞಾಪನೆಗಳ ಕೋರಿಕೆಗೆ II |
೭ |
ಸಂಕಟಬಂದಾಗ ನಿನಗೆ ಮೊರೆಯಿಡುವೆ I ಸದುತ್ತರ ಪಾಲಿಸುವೆಯೆಂದು ನಂಬಿರುವೆ II |
೮ |
ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ I ನಿನ್ನ ಮಹತ್ಕಾರ್ಯಗಳಿಗೆ ಸಾಟಿಯೇ ಇಲ್ಲ II |
೯ |
ಬರುವುವು ನೀನುಂಟುಮಾಡಿದ ಸಕಲ ಜನಾಂಗಗಳು I ನಿನ್ನ ನಾಮವನು ಘನಪಡಿಸಲು, ನಿನಗೆ ಅಡ್ಡಬೀಳಲು II |
೧೦ |
ಪ್ರಭು, ನೀನೊಬ್ಬನೇ ದೇವನು I ಅದ್ಭುತಶಾಲಿ, ಮಹೋನ್ನತನು II |
೧೧ |
ನಿನ್ನ ಸತ್ಯಪಥದಲಿ ನಾ ನಡೆವಂತೆ I ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು II ನಿನ್ನ ನಾಮದಲಿ ಭಯಭಕ್ತಿಯಿರುವಂತೆ I ಅನುಗ್ರಹಿಸೆನಗೆ ನೀ ಏಕಾಗ್ರತೆಯನು II |
೧೨ |
ಮಾಡುವೆ ದೇವಾ, ನಿನ್ನ ಗುಣಗಾನವನು ಶ್ರದ್ಧೆಯಿಂದ I ಘನಪಡಿಸುವೆ ಸ್ವಾಮಿ, ನಿನ್ನ ಶ್ರೀನಾಮವನು ಅನವರತ II |
೧೩ |
ನೀನೆನಗೆ ತೋರಿಸಿರುವ ಕರುಣೆ ಮಹತ್ತರವಾದುದಯ್ಯಾ I ಪಾತಾಳದಿಂದ ನನ್ನ ಪ್ರಾಣವನು ಉಳಿಸಿದೆಯಯ್ಯಾ II |
೧೪ |
ಗರ್ವಿಗಳೆದ್ದಿಹರು ದೇವಾ, ನನ್ನ ವಿರುದ್ಧವಾಗಿ I ನನ್ನ ಪ್ರಾಣಕೆ ಕಾದಿಹರು ಕ್ರೂರಿಗಳು ಗುಂಪಾಗಿ I ಕಾಣುತ್ತಿಹರವರು ನಿನ್ನನು ಪ್ರಭು, ಅಲಕ್ಷ್ಯವಾಗಿ II |
೧೫ |
ಪ್ರಭು, ನೀ ದಯಾಳು, ದೇವಾ ನೀ ಕರುಣಾಮೂರ್ತಿ I ಸಹನಶೀಲನು, ಸತ್ಯಸ್ವರೂಪಿ, ಪ್ರೇಮಮೂರ್ತಿ II |
೧೬ |
ಕಟಾಕ್ಷವಿಟ್ಟು ಕರುಣಿಸೆನ್ನನು I ನೀಡು ನಿನ್ನ ದಾಸನಿಗೆ ಬಲವನು I ರಕ್ಷಿಸು ನಿನ್ನ ದಾಸಿಯ ಮಗನನು II |
೧೭ |
ನಿನ್ನ ನೆರವು, ಸಾಂತ್ವನ, ನನಗಿದೆಯೆಂದು I ನೀಡೊಂದು ಪ್ರಭು, ಶುಭಸೂಚನೆಯನು I ಅದನೋಡಿ ಶತ್ರು ಪಡಲಿ ಲಜ್ಜೆಯನು II
|
Kannada Bible (KNCL) 2016 |
No Data |