೧ |
ಹೇ ದೇವಾ, ನಮ್ಮ ನೀಪರಿ ವರ್ಜಿಸಿಬಿಟ್ಟೆ ಏಕೆ? I ನೀ ಪಾಲಿಪ ಮಂದೆಯ ಮೇಲೀಗ ಉರಿಗೋಪವೇಕೆ? II |
೨ |
ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ ಸಭೆಯನು I ಸ್ಮರಿಸಿಕೊ ಸೊತ್ತಾಗಿ ನೀ ರಕ್ಷಿಸಿಕೊಂಡ ಗೋತ್ರವನು I ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್ ಶಿಖರವನು II |
೩ |
ಬಿಜಯಮಾಡು ಪಾಳುಬಿದ್ದಿರುವ ಹಳೆಯ ಆಲಯಕೆ I ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ ಕೆಳಕೆ II |
೪ |
ವೈರಿಗಳಾರ್ಭಟ ನಿನ್ನ ದರ್ಶನಾಲಯದ ಮಧ್ಯೆಯಲಿ I ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ ಪ್ರತಿಯಾಗಿ II |
೫ |
ಕಾಡಿನಲೋ ಎಂಬಂತೆ ಕೊಡಲಿಯನೆತ್ತಿ ಹಿಡಿದು I ದೇಗುಲದಲಿ ಕೈಗೊಡಲಿ, ಚಮಟಿಗಳ ಪಿಡಿದು I ನಾಶಮಾಡುತಿಹರು ನೋಡು ಕೆತ್ತನೆಗಳ ಕಡಿದು II |
೬ |
*** |
೭ |
ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ ಮಂದಿರವನು I ಹೊಲಸುಮಾಡಿ, ನೆಲಸಮಮಾಡಿಹರಿದೊ ನಿನ್ನ ದೇಗುಲವನು II |
೮ |
‘ನಾಶ ಮಾಡೋಣ ಈ ಜನರನು’ ಎಂದಾಡಿಕೊಂಡಿಹರು I ದೇಶದ ಸಭಾಮಂದಿರಗಳನ್ನೆಲ್ಲ ಭಸ್ಮಮಾಡಿಹರು II |
೯ |
ಆರಾಧನಾ ಚಿಹ್ನೆಗಳಿಲ್ಲ, ಪ್ರವಾದಿಗಳು ನಮಗಿಲ್ಲ I ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ ಇಲ್ಲ II |
೧೦ |
ಎಲ್ಲಿಯತನಕ ದೇವಾ, ಶತ್ರುನಿಂದೆಗೆ ನೀ ಗುರಿಯಾಗುವೇ? I ಅನವರತ ನಿನ್ನ ನಾಮವನು ಧಿಕ್ಕರಿಸುವುದು ಸರಿಯೇ? II |
೧೧ |
ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ I ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ II |
೧೨ |
ಆದಿಯಿಂದ ದೇವಾ, ನೀನೇ ನನಗೆ ಅರಸನು I ಸಾಧಿಸುತ್ತಿರುವೆ ಜಗದೊಳುದ್ಧಾರವನು II |
೧೩ |
ಸ್ವಶಕ್ತಿಯಿಂದ ಸಮುದ್ರವನೆ ಭೇದಿಸಿದೆ ನೀನು I ಜಲರಾಶಿಯ ಭುಜಂಗಗಳ ತಲೆ ಜಜ್ಜಿದಾತ ನೀನು II |
೧೪ |
ಲೆವಿಯಾತಾನನ ಶಿರಗಳ ಖಂಡನ ಮಾಡಿದವ ನೀನು I ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು II |
೧೫ |
ಒರತೆ ಊಟೆಗಳ ಉಕ್ಕಿಸಿದಾತ ನೀನು I ಹರಿವ ನದಿಗಳ ಬತ್ತಿಸಿಬಿಟ್ಟವ ನೀನು II |
೧೬ |
ಹಗಲಿರುಳುಗಳಿಗೆ ನಿಯಾಮಕ ನೀನು I ರವಿತಾರೆಗಳ ನಿರ್ಮಾಪಕ ನೀನು II |
೧೭ |
ಜಗದೆಲ್ಲೆ ಮೇರೆಗಳನು ನಿಗದಿ ಮಾಡಿದೆ ನೀನು I ಶೀತೋಷ್ಣಕಾಲಗಳನು ನೇಮಿಸಿದವನು ನೀನು II |
೧೮ |
ನೆನಪಿರಲಿ ಪ್ರಭು, ಶತ್ರು ನಿನಗೆ ಮಾಡಿದಪಮಾನ I ನಿನ್ನ ಪೂಜ್ಯ ನಾಮಕೆ ದುರುಳರು ಕಕ್ಕಿದ ದೂಷಣ II |
೧೯ |
ಕೊಡಬೇಡ ನಿನ್ನ ಬೆಳವಕ್ಕಿಯ ಪ್ರಾಣವ ಕಾಡುಮೃಗಕೆ I ನೀ ಮರೆತುಬಿಡಬೇಡ ನಿನ್ನ ದೀನದಲಿತರನು ಒಮ್ಮೆಗೆ II |
೨೦ |
ನಿನ್ನೊಡಂಬಡಿಕೆಯನು ಗಮನವಿಟ್ಟು ಮಾನ್ಯಮಾಡು I ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು II |
೨೧ |
ಕುಗ್ಗಿದವರು ಹಿಂದಿರುಗದಿರಲಿ ಅವಮಾನದಿಂದ I ಬಡವರು ಕೀರ್ತಿಸಲಿ ನಿನ್ನ ನಾಮವನು ಭಕ್ತಿಯಿಂದ II |
೨೨ |
ಎಚ್ಚೆತ್ತು, ದೇವಾ, ನಡೆಸು ನಿನ್ನ ನ್ಯಾಯವನು I ಗಮನಿಸು, ಅನುದಿನ ದುರ್ಮತಿ ನಿನ್ನ ನಿಂದಿಪುದನು II |
೨೩ |
ಮರೆಯದಿರು ನಿನ್ನಾ ವಿರೋಧಿಗಳ ಗದ್ದಲವನು I ವೈರಿಯೆಬ್ಬಿಸುತ್ತಿರುವ ನಿರಂತರ ದೊಂಬಿಯನು II
|
Kannada Bible (KNCL) 2016 |
No Data |