A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೬೯ಒಡನೆ ಕೈ ನೀಡಿ ಕಾಪಾಡು ದೇವಾ I ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ II
ಮುಳುಗುತಿಹೆನು ಕಳ್ಳುಸುಬಿನಲಿ; ಕಾಲೂರಲೆನಗೆ ನೆಲವಿಲ್ಲ I ಸಿಕ್ಕಿಹೆನು ಆಳ ಮಡುವಿನಲ್ಲಿ, ಹುಚ್ಚುಹೊಳೆ ಕೊಚ್ಚುತ್ತಿದೆಯಲ್ಲಾ II
ಕಾಯ್ದು ಕಾಯ್ದು ಕಣ್ಣು ಗುಳಿಬಿದ್ದಿದೆ ದೇವಾ, ನಿನಗಾಗಿ I ಗಂಟಲು ಒಣಗಿದೆ, ಜೀವ ಸೊರಗಿದೆ, ನಿನ್ನ ಕೂಗಿ ಕೂಗಿ II
ತಲೆ ಕೂದಲಿಗಿಂತ ಮಿಗಿಲಿಹರು ನಿಷ್ಕಾರಣ ದ್ವೇಷಿಗಳು I ಬಲಿಷ್ಟರಿಹರು ನನ್ನ ಕೊಲೆಗಡುಕರು, ನಿರ್ನಿಮಿತ್ತ ಶತ್ರುಗಳು I ಕಳ್ಳನಾನಲ್ಲನಾದರೂ ದಂಡಕೋರುತಿಹರು ವೈರಿಗಳು II
ನನ್ನ ಮೂರ್ಖತನವನು ದೇವಾ, ನೀ ಬಲ್ಲೆಯಯ್ಯಾ I ನನ್ನಪರಾಧಗಳು ನಿನಗೆ ಮರೆಯಾಗಿಲ್ಲವಯ್ಯಾ II
ಪ್ರಭು ಸೇನಾಧೀಶ್ವರಾ, I ನನ್ನಿಂದ ನಿರಾಶೆಯಾಗದಿರಲಿ, ನಿನ್ನ ನಂಬಿದವರಿಗೆ II ಇಸ್ರಯೇಲರ ದೇವಾ I ನನ್ನಿಂದ ನಿಂದೆಯಾಗದಿರಲಿ ನಿನ್ನ ದರ್ಶನಾರ್ಥಿಗಳಿಗೆ II
ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II
ನನ್ನವರಿಗೇ ನಾನನ್ಯನಾದೆನಯ್ಯಾ I ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ II
ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II
೧೦
ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ I ಚುಚ್ಚುಮಾತಿಗೆ ಕಾರಣವಾಯಿತಲ್ಲಾ II
೧೧
ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ I ಅಣಕ ಅವಹೇಳನಕೆ ಗುರಿಯಾದೆನಯ್ಯಾ II
೧೨
ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ I ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ II
೧೩
ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ I ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ II
೧೪
ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ I ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ II
೧೫
ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ I ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ I ಪಾತಾಳವೆನ್ನನು ನುಂಗದಿರಲಯ್ಯಾ II
೧೬
ಆಲಿಸೆನ್ನ ಪ್ರಭು, ನಿನ್ನ ಪ್ರೀತಿ ಸುಮಧುರ I ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ II
೧೭
ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ I ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ II
೧೮
ಹತ್ತಿರ ಬಂದೆನ್ನ ಉದ್ಧರಿಸಯ್ಯಾ I ಶತ್ರುಗಳ ಕೈಯಿಂದ ರಕ್ಷಿಸಯ್ಯಾ II
೧೯
ನನಗಾದ ನಿಂದೆ, ಅಪಮಾನ, ಲಜ್ಜೆ ನಿನಗೆ ತಿಳಿದಿದೆಯಯ್ಯಾ I ನನ್ನ ವೈರಿ ವಿರೋಧಿಗಳು ನಿನಗೆ ಮರೆಯಾಗಿಲ್ಲವಯ್ಯಾ II
೨೦
ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II
೨೧
ಹಸಿದ ನನಗೆ ವಿಷಬೆರೆತ ಆಹಾರವಿತ್ತರಯ್ಯಾ I ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ II
೨೨
ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ I ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ II
೨೩
ಅವರ ಕಣ್ಣು ಮಬ್ಬಾಗಿ ಕಾಣದೆಹೋಗಲಿ I ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ II
೨೪
ನಿನ್ನ ರೌದ್ರ ಅವರ ಮೇಲೆರಗಲಿ I ನಿನ್ನ ಕೋಪಾಗ್ನಿ ಅವರನು ದಹಿಸಲಿ II
೨೫
ಅವರ ಪಾಳೆಯ ಹಾಳು ಬೀಳಲಿ I ಅವರ ಗುಡಾರ ಬಿಕೋ ಎನಿಸಲಿ II
೨೬
ನೀ ಗಾಯಪಡಿಸಿದವರನು ಪೀಡಿಸುತಿಹರು I ಗಾಯದ ಮೇಲೆ ಬರೆಯೆಳೆಯುತಿಹರು II
೨೭
ದಂಡನೆ ಮೇಲೆ ದಂಡನೆಯನು ಅವರಿಗೆ ವಿಧಿಸು I ಅವರು ನಿರಪರಾಧಿಗಳೆಂಬುದನು ತಪ್ಪಿಸು II
೨೮
ಉಳಿಸಬೇಡವರನು ಜೀವಬಾಧ್ಯರ ಪಟ್ಟಿಯಲಿ I ಸೇರಿಸಬೇಡವರನು ಸಜ್ಜನರ ಸಂಖ್ಯೆಯಲಿ II
೨೯
ದೇವಾ, ನಾ ನೊಂದುಬೆಂದಿಹೆನಯ್ಯಾ I ಉದ್ಧರಿಸಿ ನನ್ನನು ಕಾಪಾಡಯ್ಯಾ II
೩೦
ಸಂಕೀರ್ತಿಸುವೆನು ದೇವರ ಶ್ರೀನಾಮವನು I ಕೃತಜ್ಞತೆಯಿಂದಾತನನು ಕೊಂಡಾಡುವೆನು II
೩೧
ಸ್ವಾಮಿ ದೇವನಿಗಿದುವೇ ಸುಪ್ರೀತಿ I ಕೊಂಬುಗೊರಸುಳ್ಳ ಗೂಳಿಬಲಿಗಿಂತ II
೩೨
ಇದನರಿತು ದೀನದಲಿತರು ಆನಂದಗೊಳ್ಳಲಿ I ದೇವನನು ಅರಸುವವರು ಪುನಶ್ಚೇತನಗೊಳ್ಳಲಿ II
೩೩
ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು I ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು II
೩೪
ಭೂಮ್ಯಾಕಾಶಗಳು ಆತನನು ಕೊಂಡಾಡಲಿ I ಸಾಗರಗಳು, ಜಲಚರಗಳು ಆತನನು ಭಜಿಸಲಿ II
೩೫
ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು I ಕಟ್ಟಿಸುವನು ಯೆಹೂದ ನಾಡಿನ ನಗರಗಳನು I ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು II
೩೬
ಅವರ ವಂಶಜರೇ ಬಾಧ್ಯಸ್ಥರಾಗುವರದಕೆ I ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ II