೧ |
ಎಚ್ಚರಗೊಳ್ಳಲಿ, ದೇವನೆಚ್ಚರಗೊಳ್ಳಲಿ I ಆತನ ಶತ್ರುಗಳೆಲ್ಲರು ಚದರಿಹೋಗಲಿ I ಆತನ ವಿರೋಧಿಗಳು ಪಲಾಯನ ಗೈಯಲಿ II |
೨ |
ಅವರನು ಊದಿಬಿಡು ದೇವಾ, ತೇಲಿಹೋಗಲಿ ಹೊಗೆಯಂತೆ I ಕರಗಿಹೋಗಲಿ ನಿನ್ನೆದುರಿಗೆ ಅಗ್ನಿಮುಟ್ಟಿದ ಮೇಣದಂತೆ II |
೩ |
ಸಜ್ಜನರಾದರೊ ಸಂತೋಷಿಸಲಿ I ದೇವರ ಮುಂದೆ ಆನಂದಿಸಲಿ I ಅತುಳ ಹರ್ಷಾನಂದಗೊಳ್ಳಲಿ II |
೪ |
ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು I ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು I “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು II |
೫ |
ದಿವ್ಯಧಾಮದಲ್ಲಿಹ ಆ ದೇವ I ತಬ್ಬಲಿಗೆ ತಂದೆ, ವಿಧವೆಗಾಶ್ರಯ II |
೬ |
ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ I ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ I ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ II |
೭ |
ದೇವಾ, ಪ್ರಜೆಗೆ ಮುಂದಾಳಾಗಿ ನೀ ಹೊರಟಾಗ I ಅರಣ್ಯ ಮಾರ್ಗವಾಗಿ ನೀ ಪ್ರಯಾಣಮಾಡಿದಾಗ II |
೮ |
ನಡುಗಿತು ಪೊಡವಿ, ಕಂಪಿಸಿತು ಸೀನಾಯಿ, ದೇವ ಪ್ರತ್ಯಕ್ಷನಾದನೆಂದು I ಮಳೆಗರೆಯಿತು ಮೋಡಗಿರಿ, ಇಸ್ರಯೇಲ್ ದೇವ ಪ್ರತ್ಯಕ್ಷನಾದನೆಂದು II |
೯ |
ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ I ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ II |
೧೦ |
ವಸತಿಯಾಯಿತದು ನಿನ್ನ ಜನಮಂದೆಗೆ I ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ II |
೧೧ |
ಹೊರಡಿಸಿದನು ಪ್ರಭು ಶುಭವಾರ್ತೆಯೊಂದನು I ಹರಡಿತು ಜನಸ್ತೋಮ ಆ ಸಂದೇಶವನು II |
೧೨ |
ಓಡಿದರು, ದಂಡೊಡನೆ ಓಡಿದರು ದೊರೆಗಳು I ದೋಚಿಕೊಂಡರು ಕೊಳ್ಳೆಯನು ಗೃಹಿಣಿಯರು II |
೧೩ |
ಪಾರಿವಾಳ ರೆಕ್ಕೆಗಳಂಥ ಕನಕದಾಕೃತಿಗಳಿದೋ I ಗರಿಗಳಂತೆ ಥಳಥಳಿಸುವ ಬಂಗಾರ ರೇಖೆಗಳಿದೋ I ನೀವಾದರೋ ಕುರಿದೊಡ್ಡಿಗಳಲ್ಲಿ ಬೆಚ್ಚನಿದ್ದಿರೋ? II |
೧೪ |
ಸರ್ವಶಕ್ತನು ಅರಸರನತ್ತ ಸದೆಬಡಿದಂತೆ I ಇತ್ತ ಬೀಳುತ್ತಿತ್ತು ಸಾಲ್ಮೋನ್ ಗಿರಿಮೇಲೆ ಹಿಮಗಡ್ಡೆ II |
೧೫ |
ಬಾಷಾನಿನ ಪರ್ವತವೇ, ನೀ ಮಹೋನ್ನತ I ಹಲವು ಶಿಖರಗಳಿಗಿಂತ ನೀ ಅಲಂಕೃತ II |
೧೬ |
ಆದರೂ ದೇವನಾರಿಸಿದ ಗಿರಿಯನು I ಆತ ಬಯಸಿದ ಆ ಚಿರ ನಿವಾಸವನು I ನೀ ಓರೆಗಣ್ಣಿಂದ ಕಾಣುವೆಯೇನು? I ಎಲೈ ಶಿಖರೋನ್ನತ ಪರ್ವತವೇ, ಪೇಳು II |
೧೭ |
ತನ್ನ ಸಹಸ್ರಾರು, ಲಕ್ಷಾಂತರ ರಥಗಳ ಸಮೇತ I ಸೀನಾಯಿಂದ ದೇಗುಲಕೆ ಪ್ರಭುವಿನ ಸಮಾಗಮನ II |
೧೮ |
ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ ಶಿಖರಕೆ I ಕರೆದೊಯ್ದೆ ಖೈದಿಗಳನೇಕರನು ನಿನ್ನ ನಿವಾಸಕೆ I ಸರಳರಿಂದಲೂ ದುರುಳರಿಂದಲೂ ಪಡೆದೆ ಕಪ್ಪಕಾಣಿಕೆ I ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ II |
೧೯ |
ಸ್ತುತಿಯಾಗಲಿ ನಮ್ಮನುದ್ಧರಿಸುವಾ ದೇವನಿಗೆ I ನಮ್ಮನನುದಿನ ಬಿಡದೆ ಸಹಿಸಿಕೊಳ್ಳುವಾ ಪ್ರಭುವಿಗೆ II |
೨೦ |
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು II |
೨೧ |
ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II |
೨೨ |
ಪ್ರಭುವಿನ ನುಡಿ: “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ತೊಳೆವಂತೆ I ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು ಸಿಗುವಂತೆ I ಬಾಷಾನಿನಿಂದವರನು ನಾ ಮರಳಿ ಬರಮಾಡುವೆ I ಸಮುದ್ರ ತಳದಿಂದವರನು ನಾ ಮತ್ತೆ ಮೇಲೆತ್ತುವೆ” II |
೨೩ |
*** |
೨೪ |
ಕಂಗೊಳಿಸುತಿದೆ ದೇವ, ನಿನ್ನ ಭವ್ಯ ಮೆರವಣಿಗೆ I ನನ್ನರಸ ದೇವನು ನಡೆವ ತನ್ನಾ ಗರ್ಭಗುಡಿಗೆ II |
೨೫ |
ಮುಂಗಡೆಯಲಿದೋ ಹಾಡುಗಾರರು I ಹಿಂಗಡೆಯಲಿದೋ ವಾದ್ಯಗಾರರು I ನಡುವೆ ದಮ್ಮಡಿ ಬಡಿವ ಮಹಿಳೆಯರು II |
೨೬ |
“ಇಸ್ರಯೇಲಿನ ವಂಶಜರೇ, ಸ್ತುತಿಸಿರಿ ಪ್ರಭುವನು” ಎನ್ನುತಿಹರು I “ಸಭೆ ಸಮ್ಮುಖದಲಿ ಕೊಂಡಾಡಿರಿ ದೇವರನು” ಎಂದು ಹಾಡುತಿಹರು I |
೨೭ |
ಮುನ್ನಡೆಯುತ್ತಿಹರಿದೋ ಕಿರಿಯ ಕುಲದ ಬೆನ್ಯಮೀನರು I ಗುಂಪಾಗಿ ಬರುತಿಹರು ಯೆಹೂದ್ಯ ಕುಲದ ಗುರುಹಿರಿಯರು I ಹಿಂಬಾಲಿಸುತಿಹರು ಜೆಬುಲೋನ್, ನಫ್ತಾಲಿ ಗೋತ್ರದವರು II |
೨೮ |
ನಿನ್ನ ಶಕ್ತಿಸಾಮರ್ಥ್ಯವನು ಹೇ ದೇವಾ, ಪ್ರದರ್ಶಿಸು I ನಮ್ಮ ಪರ ಪ್ರಯೋಗಿಸಿದ ಬಲವನು ಮರಳಿ ತೋರ್ಪಡಿಸು II |
೨೯ |
ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯುಕ್ತ I ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿಸೂಕ್ತ II |
೩೦ |
ದಂಡಿಸು ಜಂಡು ಕಾಡುಮೃಗದಂಥಾ ನಾಡನು I ಗದರಿಸು ಹೋರಿ ದನಕುರಿಗಳಂಥಾ ನಾಡುಗಳನು II ಚದರಿಸು ಕಲಹಕಾಳಗ ಪ್ರಿಯ ಜನಾಂಗಗಳನು I ಅಡ್ಡಬೀಳಿಸು ನಿನಗೆ ಬೆಳ್ಳಿಗಟ್ಟಿ ತಂದವರನು II |
೩೧ |
ರಾಯಭಾರಿಗಳಾಗಿ ಬರುವರು ಈಜಿಪ್ಟಿನ ಜನರು I ದೇವರಿಗೆ ಕೈ ಮುಗಿವರು ಇಥಿಯೋಪಿಯದವರು II |
೩೨ |
ಭೂರಾಜ್ಯಗಳೇ, ಸ್ತುತಿಸಿರಿ ದೇವರನು I ಸಂಕೀರ್ತಿಸಿರಿ ನೀವೆಲ್ಲರು ಪ್ರಭುವನು II |
೩೩ |
ಆದಿಮೊದಲು ಮೇಘಾರೂಢನಾಗಿರುವನು I ಕೊಂಡಾಡಿರಿ, ಗುಡುಗಿನಂತೆ ಗರ್ಜಿಸುವಾತನನು II |
೩೪ |
ಸಾರಿರಿ ದೇವರಾ ಶಕ್ತಿಸಾಮರ್ಥ್ಯವನು I ಇಸ್ರಯೇಲಿಗೆ ತೋರಿದಾ ಪ್ರಭಾವವನು I ಗಗನವನು ಆವರಿಸಿರುವಾ ಪ್ರತಿಭೆಯನು II |
೩೫ |
ಪರಮ ಪವಿತ್ರಾಲಯದಲ್ಲಿಹ ದೇವಭಯಭಕುತಿಗೆ ಪಾತ್ರ I ಪ್ರಜೆಗೆ ಪರಾಕ್ರಮವೀವ ಇಸ್ರಯೇಲ ದೇವನಿಗೆ ಸ್ತೋತ್ರ II
|
Kannada Bible (KNCL) 2016 |
No Data |