೧ |
ಎನ್ನ ಮನಕ್ಕೆ ಶಾಂತಿ ದೇವನಿಂದಲೆ I ನನ್ನ ಜೀವೋದ್ಧಾರ ಆತನಿಂದಲೆ II |
೨ |
ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II |
೩ |
ಎನಿತುಕಾಲ ದಾಳಿ ಮಾಡುವಿರಿ ಒಬ್ಬನ ಮೇಲೆ ನೀವೆಲ್ಲಾ? I ಕೆಡವಲು ಯತ್ನಿಸುವಿರಾ ಬಾಗಿದಾ ಗೋಡೆಯ, ಕುಸಿದಾ ಪೌಳಿಯ? II |
೪ |
ದಬ್ಬುವ ದುರಾಲೋಚನೆ ಅವರದು ಗಾದಿಯಿಂದ I ಅಬದ್ಧವಾಡುವುದೆಂದರೊ ಹಬ್ಬದಾನಂದ I ಹರಸುವರು ಅಧರದಿಂದ, ಶಪಿಸುವರು ಉದರದಿಂದ II |
೫ |
ಎನ್ನ ಮನಕೆ ಶಾಂತಿ ದೇವನಿಂದಲೆ I ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ II |
೬ |
ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II |
೭ |
ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I ಭದ್ರವಾದ ಬಂಡೆ, ನನಗಾಶ್ರಯ ಆತನೆ II |
೮ |
ಜನರೇ, ಸದಾ ಭರವಸೆ ಇಡಿ ದೇವನಲಿ I ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ II |
೯ |
ನರಮಾನವರೆಲ್ಲರು ಬರೇ ಉಸಿರು I ನರಾಧಿಪತಿಗಳು ತೀರಾ ಹುಸಿಯು I ತ್ರಾಸಿನಲಿ ತೂಗಲು ಅವರೆಲ್ಲರು I ಉಸಿರಿಗಿಂತಲೂ ಅತ್ಯಂತ ಹಗುರು II |
೧೦ |
ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ I ಸೂರೆಮಾಡಿ ಸೇರಿಕೊಂಡುದನು ಕೊಚ್ಚಬೇಡಿ I ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ II |
೧೧ |
ದೇವನೊಮ್ಮೆ ನುಡಿದೀಮಾತು ನನಗಿಮ್ಮಡಿ ಕೇಳಿಸಿತು I ಸರ್ವಾಧಿಕಾರವು ದೇವನಿಗೇ ಸೇರಿದ ಸೊತ್ತು II |
೧೨ |
ನಿನ್ನ ಪ್ರೀತಿ ಹೇ ಪ್ರಭು, ಅಚಲ ಹಿಮಾಚಲ I ಸರ್ವರಿಗು ನೀಡುವೆ ಕೃತ್ಯಕೆ ತಕ್ಕ ಫಲ II
|
Kannada Bible (KNCL) 2016 |
No Data |