೧ |
ಜಿನುಗುಟ್ಟುತಿಹುದು ಪಾಪವು ದುಷ್ಟನ ಮನದಲಿ I ದೇವ ಭಯವೇ ಇಲ್ಲ ಅವನ ಕಣ್ಣೆದುರಿನಲಿ II |
೨ |
“ಬೈಲಿಗೆ ಬಾರದು ನಿನ್ನ ದೋಷವು, ನಿನಗದು ಕೇಡು ತರದು” I ಇಂತುಲಿದು ಆ ಪಾಪದ ಜಿನುಗು ಅವನನು ವಂಚಿಸುತಿಹುದು II |
೩ |
ಅವನ ಕೀಳು ಬಾಯಿಯ ತುಂಬ ಕೇಡು ಕಪಟ I ಸನ್ಮತಿ ಸತ್ಕಾರ್ಯಗಳನ್ನು ಬಿಟ್ಟೇಬಿಟ್ಟ II |
೪ |
ಆಲೋಚಿಸುತ್ತಿಹನು ಅಕ್ರಮವನು ಹಾಸಿಗೆಯಿಂದಲೆ I ಹೇಸನು ದುಷ್ಕೃತ್ಯಕ್ಕೆ, ಮುನ್ನುಗ್ಗುವನು ದುರ್ಮಾರ್ಗದಲೆ II |
೫ |
ನಿನ್ನ ಪ್ರೀತಿ ಪ್ರಭು, ಚುಂಬಿಸುತಿಹುದು ಗಗನವನು I ನಿನ್ನ ಸತ್ಯವು ಮುಟ್ಟುತಿಹುದು ಮೇಘಮಂಡಲವನು II |
೬ |
ನಿನ್ನ ನೀತಿ ಸುರಗಿರಿಯಂತೆ, ನಿನ್ನ ನ್ಯಾಯ ಮಹಾಸಾಗರದಂತೆ I ಮಾನವರನು, ಪಶುಪ್ರಾಣಿಗಳನು ಪ್ರಭು, ಸಲಹುವೆ ರಕ್ಷಕನಂತೆ II |
೭ |
ನಿನ್ನಚಲ ಪ್ರೀತಿ, ಹೇ ದೇವಾ, ಎಷ್ಟೋ ಅಮೂಲ್ಯ I ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿಗಾಶ್ರಯ II |
೮ |
ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ I ಅವರ ಪಾನೀಯ ನಿನ್ನ ಸಂಭ್ರಮ ಪ್ರವಾಹದಿಂದ II |
೯ |
ನಿನ್ನಲ್ಲಿದೆ ಜೀವದ ಬುಗ್ಗೆ I ನಿನ್ನ ಬೆಳಕಿನಿಂದ ಬೆಳಕೆಮಗೆ II |
೧೦ |
ನಿನ್ನನರಿತವರನು ಪ್ರೀತಿಸು ಮುಂದಕ್ಕೂ I ಒಳಿತನ್ನು ಮಾಡು ನೇರಮನಸ್ಕರಿಗೂ II |
೧೧ |
ಗರ್ವಿಗಳ ಕಾಲಿಗೆ ನಾ ಬೀಳುವುದು ಬೇಡ I ದುರುಳರ ಕೈ ನನ್ನ ಹೊರದೂಡುವುದು ಬೇಡ II |
೧೨ |
ಕೇಡು ಮಾಡಿದವರಿದೋ ಕೆಳಗೆ ಬಿದ್ದಿಹರು I ಮರಳಿ ಏಳಲಾಗದೆ ಮಡಿದು ಬಿದ್ದಿಹರು II
|
Kannada Bible (KNCL) 2016 |
No Data |