೧ |
ನನ್ನೊಡನೆ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯ ಮಾಡು I ನನ್ನೊಡನೆ ಕದನ ಮಾಡುವವರೊಡನೆ ಪ್ರಭು, ಕದನ ಮಾಡು |
೨ |
ಖಡ್ಗ ಗುರಾಣಿಗಳನು ಧರಿಸಿಕೊ I ನನಗೆ ರಕ್ಷಣೆಯಾಗಿ ನಿಂತುಕೊ II |
೩ |
ತಡೆ ನೀನು ಬಿಲ್ಲು ಬರ್ಜಿಯಿಂದ ಬೆನ್ನಟ್ಟಿಬರುವ ವೈರಿಯನು I ನೀಡೆನ್ನ ಮನಕೆ, ನೀನೆ ರಕ್ಷಕನೆಂಬ ಅಭಯವನು II |
೪ |
ನನ್ನ ಕೊಲೆಗೆ ಯತ್ನಿಸುವವನು ತಲೆ ತಗ್ಗಿಸಲಿ ನಿರಾಶೆಗೊಂಡು I ನನಗೆ ಕೇಡನು ಮಾಡುವವರು ಓಡಿಹೋಗಲಿ ಗಲಿಬಿಲಿಗೊಂಡು II |
೫ |
ಬಿರುಗಾಳಿಗೆ ತರಗೆಲೆಯಂತೆ ತೂರಿಹೋಗಲಿ I ಪ್ರಭುವಿನ ದೂತನವರನು ಬೆನ್ನಟ್ಟಿ ಹೋಗಲಿ II |
೬ |
ಇಳಿಜಾರು, ಕಾರಿರುಳು ಇರುವ ಹಾದಿಯಲಿ I ಪ್ರಭುವಿನ ದೂತನವರನು ಓಡಿಸಿಬಿಡಲಿ II |
೭ |
ನಿಷ್ಕಾರಣ ಕೊಲೆಮಾಡಲೆನ್ನ ಬಲೆಯೊಡ್ಡಿಹರು I ಆ ಕಾರಣ ಪ್ರಾಣ ತೆಗೆಯಲು ಗುಂಡಿ ತೋಡಿಹರು II |
೮ |
ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೆ ಸಿಕ್ಕಿಬೀಳಲಿ I ತೋಡಿದ ಗುಣಿಯಲಿ ತೋಡಿದವನೇ ತಟಕ್ಕನೆ ಬಿದ್ದುಹೋಗಲಿ II |
೯ |
ಆಗೆನ್ನ ಮನವು ಆನಂದಗೊಳ್ಳುವುದು ಪ್ರಭುವಿನಲಿ I ಆಹ್ಲಾದಗೊಳ್ಳುವುದು ಆತನಿತ್ತಾ ರಕ್ಷಣೆಯಲಿ II |
೧೦ |
“ಬಿಡಿಸಿದೆ ಬಡವನನು ದರೋಡೆಗಾರರಿಂದ I ರಕ್ಷಿಸಿದೆ ದುರ್ಬಲನನು ಬಲಾಢ್ಯರಿಂದ I ಹೇ ಪ್ರಭು, ನಿನಗೆ ಸಮಾನರಾರೆಂದು” I ಹೊಗಳುವುವು ನನ್ನೆಲುಬುಗಳೊಂದೊಂದು II |
೧೧ |
ಸುಳ್ಳುಸಾಕ್ಷಿಗಳೆದ್ದಿಹರು ನನಗೆ ವಿರುದ್ಧ I ಹೊರಿಸುತಿಹರು ನನಗೇ ತಿಳಿಯದ ಅಪರಾಧ II |
೧೨ |
ಎಸಗುತಿಹರು ಉಪಕಾರಕೆ ಅಪಕಾರ I ಮಾಡಿಹರೆನ್ನನು ನಿರ್ಗತಿಕ ಪಿಂಜಾರ II |
೧೩ |
ಅವರು ಅಸ್ವಸ್ಥರಾಗಿರಲು ಶೋಕವಸ್ತ್ರಧಾರಿಯಾದೆ I ತಲೆಬಾಗಿ ಜಪಿಸಿದೆ, ನಾ ಮನನೊಂದು ಉಪವಾಸವಿದ್ದೆ II |
೧೪ |
ಶೋಕತಪ್ತನಾದೆ ಗೆಳೆಯನಿಗೊ ಬಳಗದವನಿಗೊ ಎಂಬಂತೆ I ಅತ್ತು ಪ್ರಲಾಪಿಸಿದೆ ತಾಯನು ಕಳೆದುಕೊಂಡ ತಬ್ಬಲಿಯಂತೆ II |
೧೫ |
ನನಗೆ ಆಪತ್ತೊದಗಲದೊ ಸಂತೋಷಿಸಿದರು ಸಭೆಗೂಡಿ I ಸೂರೆಮಾಡಿದರು ತಿರುತಿರುಗಿ ಆ ಭ್ರಷ್ಟರೊಟ್ಟುಗೂಡಿ II |
೧೬ |
ಅಣಕಿಸಿ ಹಾಸ್ಯಮಾಡಿದರು ಕೀಟಲೆಗಾರರಂತೆ I ಕಟಕಟನೆ ಹಲ್ಲುಕಡಿದರು ಕಡುಕೋಪಿಗಳಂತೆ II |
೧೭ |
ಇನ್ನೆಷ್ಟರವರೆಗೆ ಪ್ರಭು, ನೀ ಸುಮ್ಮನಿರುವೆ ನೋಡುತ? I ಬಿಡಿಸೆನ್ನ ಹಾವಳಿಯಿಂದ, ಸಿಂಹಗಳ ಬಾಯಿಂದ II |
೧೮ |
ಮಹಾಸಭೆಯಲ್ಲಾಗ ನಿನ್ನನು ಕೊಂಡಾಡುವೆ I ಬಹುಜನರ ಮುಂದೆ ನಿನ್ನ ಗುಣಗಾನ ಮಾಡುವೆ II |
೧೯ |
ಕಳ್ಳ ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ I ಈ ಕಾರಣ ಶತ್ರುಗಳು ಕಣ್ಣು ಮಿಟುಕಿಸುವುದು ಬೇಡ II |
೨೦ |
ಸಮಾಧಾನಕರವಲ್ಲ ಅವರಾಡುವ ನುಡಿಗಳು I ಮುಗ್ಧನಾಡಿಗರನು ಮೋಸಗೊಳಿಸುವಾ ಮಾತುಗಳು II |
೨೧ |
ಎನ್ನೀ ಪರಿಸ್ಥಿತಿಯನು ಕಂಡು ಅವರು ಬಾಯಿ ಕಿಸಿದು I ನುಡಿದರು, “ಆಹಾ! ಕಣ್ಣಾರೆ ಕಂಡೆವಲ್ಲಾ” ಎಂದು II |
೨೨ |
ನೀನೇ ನೋಡಿರುವೆ ಪ್ರಭು, ಇನ್ನು ಸುಮ್ಮನಿರಬೇಡ I ನನ್ನೊಡೆಯಾ, ನನಗಿನ್ನಾದರು ದೂರವಾಗಿರಬೇಡ II |
೨೩ |
ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು I ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು II |
೨೪ |
ಹೇ, ದೇವಾ, ನಿನ್ನ ನೀತಿಗನುಸಾರ ತೀರ್ಪುಕೊಡು I ಶತ್ರುಗಳೆನ್ನ ವಿಷಯದಲ್ಲಿ ಹರ್ಷಗೊಳ್ಳದಂತೆ ಮಾಡು II |
೨೫ |
ತಮ್ಮಾಸೆ ಕೈಗೂಡಿತೆನಲು ಅವರಿಗಿರಬಾರದು ಅವಕಾಶ I ಅವನನು ಕಬಳಿಸಿಬಿಟ್ಟೆವು ಎಂದು ಕೊಚ್ಚಿಕೊಳ್ಳುವ ಸಂತೋಷ II |
೨೬ |
ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು I ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು II |
೨೭ |
ನನಗೆ ನ್ಯಾಯ ಬಯಸುವವರು ನಲಿದು ಮಾಡಲಿ ಜಯಕಾರ I “ದಾಸನ ಹಿತೈಷಿ ಪ್ರಭುಗೆ, ಜೈ” ಎಂಬ ನಿರಂತರ ಪ್ರಚಾರ II |
೨೮ |
ಆಗೆನ್ನ ಜಿಹ್ವೆ ಸಾರುವುದು ನಿನ್ನ ನೀತಿಯನು I ದಿನವೆಲ್ಲಾ ವರ್ಣಿಸುವುದು ನಿನ್ನ ಕೀರ್ತಿಯನು II
|
Kannada Bible (KNCL) 2016 |
No Data |