೧ |
ಎತ್ತಿರುವೆ ಪ್ರಭೂ, ಹೃನ್ಮನಗಳನು ನಿನ್ನತ್ತ I ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ II |
೨ |
ಶತ್ರುಗಾಗದಿರಲಿ ಸಡಗರ I ನನಗೊದಗದಿರಲಿ ಮುಜುಗರ II |
೩ |
ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ I ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ II |
೪ |
ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು I ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು II |
೫ |
ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II |
೬ |
ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I ಆದಿಯಿಂದ ನೀ ತೋರಿದಚಲ ಪ್ರೀತಿಯನು II |
೭ |
ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II |
೮ |
ಸತ್ಯಸ್ವರೂಪನು, ದಯಾವಂತನು ಪ್ರಭು I ದಾರಿತಪ್ಪಿದವರಿಗೆ ಬೋಧಕನು ವಿಭು II |
೯ |
ದೀನರನು ನಡೆಸುವನು ತನ್ನ ವಿಧಿಗನುಸಾರ I ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ II |
೧೦ |
ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ I ಆತನ ವಿಧಿ ನಿಬಂಧನೆಗಳ ಪರಿಪಾಲಕರಿಗೆ ಅವುಗಳು ಸುಪ್ರೀತ II |
೧೧ |
ನಿನ್ನ ನಾಮದ ನಿಮಿತ್ತ ನನ್ನನು ಈಕ್ಷಿಸು I ಎನ್ನ ಘೋರ ಪಾಪವನು ಪ್ರಭು ಕ್ಷಮಿಸು II |
೧೨ |
ಪ್ರಭುವಿನ ಭಯಭಕುತಿಯುಳ್ಳವನಿಗೆ I ಲಭಿಪುದು ಖಚಿತ ಋಜುಮಾರ್ಗದ ಕಲಿಕೆ II |
೧೩ |
ಬಾಳುವನಂಥವನು ಸುಖಸೌಭಾಗ್ಯದಿಂದ I ಬದುಕುವುದವನ ಸಂತತಿ ನಾಡಿನೊಡೆತನದಿಂದ II |
೧೪ |
ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ I ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ II |
೧೫ |
ತಿರುಗಿದೆ ಎನ್ನ ನಯನ ಪ್ರಭುವಿನತ್ತ I ಉರುಲಿಂದ ಕಾಲನು ಕಳಚಿದನಾತ II |
೧೬ |
ಒಬ್ಬೊಂಟಿಗನಾದೆ, ಸಿಕ್ಕಿಕೊಂಡೆ ಸಂಕಟಕೆ I ಕಟಾಕ್ಷಿಸೋ ಪ್ರಭು, ಕರುಣೆತೋರೋ ತಬ್ಬಲಿಗೆ II |
೧೭ |
ನಿವಾರಿಸೆನ್ನ ಮನಕ್ಲೇಶವನು I ಪರಿಹರಿಸೆನ್ನ ದುಃಖದುಗುಡವನು II |
೧೮ |
ನೋಡೆನ್ನ ಬಾಧೆ ಬವಣೆಗಳನು I ತೊಡೆದು ಹಾಕೆನ್ನ ಪಾಪಗಳನು II |
೧೯ |
ಶತ್ರುಗಳಿಹರು ನೋಡು ಸಹಸ್ರಾರು I ಕ್ರೋಧದಿಂದೆನ್ನ ಹಗೆ ಮಾಡುತಿಹರು II |
೨೦ |
ಕಾಪಾಡು ಪ್ರಭು, ರಕ್ಷಿಸೆನ್ನ ಪ್ರಾಣವನು I ನಿರಾಶೆಗೊಳಿಸಬೇಡ, ಶರಣಾಗತನು ನಾನು II |
೨೧ |
ನಿರ್ದೋಷ, ನಿಷ್ಕಪಟ ನಡತೆ ನನಗೆ ರಕ್ಷೆ I ನೀನೆ ಪ್ರಭು ನನಗಿರುವ ದೃಢ ನಿರೀಕ್ಷೆ II |
೨೨ |
ಉದ್ಧರಿಸು ದೇವಾ, ಇಸ್ರಯೇಲರನು I ಸಮಸ್ತ ಬೇನೆ ಬವಣೆಗಳಿಂದವರನು II
|
Kannada Bible (KNCL) 2016 |
No Data |