೧ |
ದೇವಾ, ಓ ಎನ್ನ ದೇವಾ, ಏಕೆನ್ನ ಕೈಬಿಟ್ಟೆ? I ಕಿವಿಗೊಡದೆ ಏಕೆ ದೂರವಾಗಿಬಿಟ್ಟೆ? II |
೨ |
ಹಗಲೆಲ್ಲ ಕೂಗಿಕೊಂಡರೂ ನೀ ಬರಲಿಲ್ಲವಲ್ಲಾ I ಇರುಳೆಲ್ಲಾ ಮೊರೆಯಿಟ್ಟರೂ ನೆಮ್ಮದಿಯಿಲ್ಲವಲ್ಲಾ II |
೩ |
ಆದರೂ ದೇವಾ, ನೀನಂತು ಪರಮಪೂಜ್ಯನು I ಇಸ್ರಯೇಲರ ಸ್ತುತ್ಯ ಸಿಂಹಾಸನದಲಿ ಆಸೀನನು II |
೪ |
ನಿನ್ನಲಿ ಭರವಸೆಯಿತ್ತರು ನಮ್ಮ ಪೂರ್ವಜರು I ಉದ್ಧಾರವಾದರು ನಿನ್ನ ನಂಬಿದವರೆಲ್ಲರು II |
೫ |
ನಿನಗೆ ಮೊರೆಯಿಟ್ಟವರು ವಿಮುಕ್ತರಾದರಯ್ಯಾ I ವಿಶ್ವಾಸವಿಟ್ಟು ಹತಾಶರಾಗಲಿಲ್ಲವಯ್ಯಾ II |
೬ |
ಮನುಜ ನಾನು, ಕ್ರಿಮಿಕೀಟಕೆ ಸಮಾನನು I ಅಲಕ್ಷಿತನು, ಪರರಿಂದ ತಿರಸ್ಕೃತನು II |
೭ |
ನೋಡುವವರೆಲ್ಲಾ ಎನ್ನನಣಕಿಸುತಿಹರು I ತುಟಿಯೋರೆ ಮಾಡಿ ತಲೆಯಾಡಿಸುತಿಹರು II |
೮ |
“ಇತ್ತನಿವನು ಭರವಸೆ, ಪ್ರಭುವೆ ತನ್ನುದ್ಧಾರಕನೆಂದು I ಆತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ” - ಇಂತೆಂದು II |
೯ |
ಮಾತೆಯುದರದಿಂದ ಎನ್ನನು ಹೊರಬರಿಸಿದವನು ನೀನು I ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಲಿ ಇರಿಸಿದವನು ನೀನು II |
೧೦ |
ಆಗರ್ಭದಿಂದಲೆ ನೀನೆನಗಧಾರ I ತಾಯಿ ಹೆತ್ತಂದಿನಿಂದಲೇ ಕರ್ತಾರ II |
೧೧ |
ದುರುಳರು ಅರುಗಲೇ ಇರೆ, ನೆರವಿಗಾರೂ ಇಲ್ಲ I ನನ್ನಿಂದ ನೀ ದೂರಸರಿವುದು ಸರಿಯಲ್ಲ II |
೧೨ |
ಸುತ್ತಿಕೊಂಡಿವೆಯೆನ್ನನು ಬಲವಂತ ಹೋರಿಗಳು I ಮುತ್ತಿಕೊಂಡಿವೆ ಬಾಷಾನಿನ ಹಲವು ಗೂಳಿಗಳು II |
೧೩ |
ಗರ್ಜಿಸುವ ಉಗ್ರಸಿಂಹಗಳಂತೆ ವೈರಿಗಳು I ಕಾದಿಹರು ಬಾಯಿ ತೆರೆದು ನನ್ನ ಕಬಳಿಸಲು II |
೧೪ |
ಕ್ಷಯಿಸುತ್ತಿರುವೆ ನಾ ಚೆಲ್ಲಿದ ನೀರಿನಂತೆ I ಎಲುಬುಗಳು ಅಲುಗಿವೆ, ಎದೆ ಕರಗಿದೆ ಮೇಣದಂತೆ II |
೧೫ |
ಎನ್ನ ಗೋಣು ಒಣಗಿಹೋಗಿದೆ ಒಡೆದ ಮಡಕೆಯಂತೆ I ಅಂಗುಳಕೆ ಜಿಹ್ವೆ ಅಂಟಿದೆ; ಮಣ್ಣಿಗೆನ್ನ ಸೇರಿಸಿದೆ II |
೧೬ |
ಮುತ್ತಿದೆ ದುರುಳರ ಹಿಂಡು; ಸುತ್ತಿವೆ ಕುನ್ನಿಗಳು I ಕುತ್ತಿವೆ ನನ್ನ ಕೈಗಳು ಮೇಣ್ ಕಾಲುಗಳು II |
೧೭ |
ಎಣಿಸಬಹುದಿದೆ ನನ್ನೆಲುಬುಗಳೆಲ್ಲವನು I ಹಿಗ್ಗುತಿಹರು ದುರುಗುಟ್ಟಿ ನೋಡೆನ್ನನು II |
೧೮ |
ನನ್ನ ಉಡುಗೆಗಳನ್ನು ಹಂಚಿಕೊಂಡರು I ನನ್ನ ಅಂಗಿಗೋಸ್ಕರ ಚೀಟುಹಾಕಿದರು II |
೧೯ |
ನನ್ನಿಂದ ದೂರ ಸರಿಯಲುಬೇಡ, ಪ್ರಭು I ನೀನೆನ್ನ ಶಕ್ತಿ, ನೆರವಾಗಲು ತ್ವರೆಮಾಡು II |
೨೦ |
ಕತ್ತಿಗೆ ತುತ್ತಾಗದಂತೆ ತಪ್ಪಿಸು I ಕುಕ್ಕುರಗಳಿಂದ ಪ್ರಾಣವನುಳಿಸು II |
೨೧ |
ರಕ್ಷಿಸೆನ್ನನು ಸಿಂಹದ ಬಾಯಿಂದ I ಬಿಡಿಸು ಕಾಡುಕೋಣದ ಕೊಂಬಿನಿಂದ II |
೨೨ |
ಸೋದರರಿಗೆ, ಸಾರುವೆ ನಿನ್ನ ನಾಮ ಮಹಿಮೆಯನ್ನು I ತುಂಬಿದ ಸಭೆಯಲಿ ಮಾಡುವೆ, ನಿನ್ನ ಸ್ತುತಿಯನ್ನು II |
೨೩ |
ಮಣಿಯಿರಿ, ಪ್ರಭುವಿನಲಿ ಭಯಭಕುತಿಯುಳ್ಳವರೇ I ಭಜಿಸಿರಿ ಇಸ್ರಯೇಲರೇ, ಯಾಕೋಬ ಕುಲಜರೇ II |
೨೪ |
ತೃಣೀಕರಿಸನು, ತಿರಸ್ಕರಿಸನು ದಲಿತನನು I ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು II |
೨೫ |
ಪ್ರಭು, ನೀನೆ ಸ್ಪೂರ್ತಿ, ತುಂಬುಸಭೆಯಲಿ ನಾ ಮಾಳ್ಪ ಸ್ತುತಿಗೆ I ಭಕ್ತಜನರ ಮುಂದೆ ನಾ ಸಲ್ಲಿಸುವೆ, ನಿನಗೆ ಹೊತ್ತ ಹರಕೆ II |
೨೬ |
ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ I ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ II |
೨೭ |
ಎಚ್ಚೆತ್ತು ಅಭಿಮುಖವಾಗುವುದು ಜಗದಾದ್ಯಂತ ಪ್ರಭುಗೆ I ಸಾಷ್ಟಾಂಗವೆರಗುವುವು ಧರೆಯ ಸರ್ವಜನಾಂಗಗಳು ಆತನಿಗೆ II |
೨೮ |
ಪ್ರಭುವಿಗೆ ಸೇರಿದುದು ರಾಜ್ಯಭಾರವೆಲ್ಲವು I ಆತನದೆ ರಾಷ್ಟ್ರಗಳ ಒಡೆತನವೆಲ್ಲವು II |
೨೯ |
ತಲೆಬಾಗುವರಾತನಿಗೆ ಧರೆಯ ಗರ್ವಿಗಳೆಲ್ಲರು I ಅಡ್ಡಬೀಳುವರವನಿಗೆ ಮರ್ತ್ಯಮಾನವರೆಲ್ಲರು II |
೩೦ |
ವಂದಿಪುದು ಪ್ರಭುವನು ಮುಂದಿನ ಪೀಳಿಗೆ I ಸಾರುವುದಾತನ ವದಂತಿಯನು ಜನರಿಗೆ II |
೩೧ |
ಸಾರುವರು ಮುಂದಿನ ಜನತೆಗುದ್ಧಾರವನು I ಅರುಹುವರು ಆತನೆಸಗಿದ ಮಹತ್ಕಾರ್ಯವನು II
|
Kannada Bible (KNCL) 2016 |
No Data |