೧ |
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ I ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ II |
೨ |
ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ I ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ II |
೩ |
ಹೇ ಪ್ರಭೂ, ಮನುಜನು ಎಷ್ಟರವನು, ನೀನವನನು ಲಕ್ಷಿಸಲು I ನರಮಾನವನು ಏತರವನು, ನೀನವನನು ಪರಾಮರಿಸಲು II |
೪ |
ಮಾನವನು ಕೇವಲ ಉಸಿರಿಗೆ ಸಮಾನ I ಮರೆಯಾಗುವ ನೆರಳು ಅವನ ಜೀವನ II |
೫ |
ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು I ಬೆಟ್ಟಗಳನು ನೀ ಮುಟ್ಟಲು, ಹೊಗೆ ಹೊರಹೊಮ್ಮುವುದು II |
೬ |
ಸಿಡಿಲಿನಿಂದ ಚೆದರಿಸಿಬಿಡು ಶತ್ರುಗಳನು I ನಿನ್ನಂಬುಗಳಿಂದ ಭ್ರಾಂತಗೊಳಿಸವರನು II |
೭ |
ನನ್ನ ಸೆಳೆದುಕೊ ಮಹಾಜಲರಾಶಿಯಿಂದ I ನಿನ್ನ ಕೈಚಾಚಿ ಮೇಲಣಲೋಕದಿಂದ I ನನ್ನನು ಬಿಡಿಸು ಅನ್ಯಜನರ ಕೈಯಿಂದ II |
೮ |
ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II |
೯ |
ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು I ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು II |
೧೦ |
ನೀನೇ ಅರಸುಗಳಿಗೆ ಜಯಪ್ರದನು I ದಾಸ ದಾವೀದನನು ಬಿಡಿಸಿದವನು II |
೧೧ |
ಕ್ರೂರ ವೈರಿಗಳಿಂದೆನ್ನ ಬಿಡಿಸಯ್ಯಾ I ಅವರ ಬಾಯಿಂದ ಬರುವ ಮಾತು ಅಸತ್ಯ I ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ II |
೧೨ |
ನಮ್ಮ ಗಂಡು ಮಕ್ಕಳಿರಲಿ I ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ ಗಿಡಗಳಂತೆ II ನಮ್ಮ ಹೆಣ್ಣುಮಕ್ಕಳಿರಲಿ I ಅರಮನೆಯಲ್ಲಿ ಕೆತ್ತಿದ ಸುಂದರ ಮೂಲೆಗಂಬಗಳಂತೆ II |
೧೩ |
ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ ಕಣಜಗಳು I ಈಯಲಿ ಸಾವಿರಾರು ಮರಿಗಳನು ನಮ್ಮ ಹೊಲದ ಕುರಿಗಳು II |
೧೪ |
ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ I ಮೈಯಿಳಿಯದೆ, ಲೋಪವಿಲ್ಲದೆಯೆ ಗರ್ಭಧರಿಸಲಿ I ನಮ್ಮ ಬೀದಿಗಳಲಿ ಗೋಳಾಟ ಕೇಳಿಬರದಿರಲಿ II |
೧೫ |
ಇಂತಹ ಸಮೃದ್ಧಿ ಪಡೆದಿರುವ ಜನರು ಭಾಗ್ಯವಂತರು I ಯಾರಿಗೆ ದೇವರು ಪ್ರಭುವಾಗಿಹನೋ ಅವರು ಧನ್ಯರು II
|
Kannada Bible (KNCL) 2016 |
No Data |