೧ |
ನಮಗಲ್ಲ ಹೇ ಪ್ರಭು, ನಮಗಲ್ಲ ಮಹಿಮೆ I ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ I ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ II |
೨ |
ಅನ್ಯಜನರು ನುಡಿಯುವುದೆಂತು: I “ಅವರ ದೇವರೆಲ್ಲಿ?” ಎಂದು II |
೩ |
ಪರದಲ್ಲಿಹನು ನಮ್ಮ ದೇವನು I ಗೈವನು ತನಗಿಷ್ಟ ಬಂದುದನು II |
೪ |
ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ I ಅವು ಮಾನವನ ಕೈ ಕೆಲಸಗಳು ಮಾತ್ರ II |
೫ |
ಬಾಯಿದ್ದರೂ ಅವು ಮಾತಾಡುವುದಿಲ್ಲ I ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ II |
೬ |
ಕಿವಿಯಿದ್ದರೂ ಅವು ಕೇಳುವುದಿಲ್ಲ I ಮೂಗಿದ್ದರೂ ಅವು ಮೂಸುವುದಿಲ್ಲ I ಗಂಟಲೊಳು ಅವಕೆ ಶಬ್ದವೇ ಇಲ್ಲ II |
೭ |
ಕೈಯಿದ್ದರೂ ಅವು ಮುಟ್ಟುವುದಿಲ್ಲ I ಕಾಲಿದ್ದರೂ ಅವು ನಡೆಯುವುದಿಲ್ಲ II |
೮ |
ಅವುಗಳಂತಾಗುವರು ಅವುಗಳನು ಮಾಡುವವರು I ಅವುಗಳಂತಾಗುವರು ಅವುಗಳನು ನಂಬುವವರು II |
೯ |
ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II |
೧೦ |
ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II |
೧೧ |
ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II |
೧೨ |
ಆಶೀರ್ವದಿಸುವನು ಪ್ರಭು ಮರೆಯದೆ ನಮ್ಮನು I ಇಸ್ರಯೇಲ್ ವಂಶವನು, ಆರೋನನ ಕುಲವನು II |
೧೩ |
ಆಶೀರ್ವದಿಸುವನು ಪ್ರಭು ತನ್ನಲಿ ಭಯಭಕ್ತಿಯುಳ್ಳವರನು I ಚಿಕ್ಕವರು ದೊಡ್ಡವರೆನ್ನದೆ ಭಯಭಕ್ತಿಯುಳ್ಳವರನು II |
೧೪ |
ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು I ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು II |
೧೫ |
ಇಹಪರಗಳನು ಉಂಟುಮಾಡಿದ ಪ್ರಭುವಿಂದ I ಲಭಿಸುವಂತಾಗಲಿ ನಿಮಗೆ ಆಶೀರ್ವಾದ II |
೧೬ |
ಪ್ರಭುವಿಗೆ ಸ್ವಂತವಾದುದು ಪರಲೋಕ I ನರರಿಗೆ ಕೊಟ್ಟಿಹನಾತನು ಭೂಲೋಕ II |
೧೭ |
ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು I ಕೀರ್ತಿಸರು ಪಾತಾಳಕ್ಕಿಳಿವವರು ಆತನನು II |
೧೮ |
ನಾವಾದರೋ ಪ್ರಭುವನು ಹೊಗಳಿ ಹಾಡುವೆವು I ಇಂದಿಗೂ ಎಂದೆಂದಿಗೂ ಹೊಗಳಿ ಹಾಡುವೆವು II ಅಲ್ಲೆಲೂಯ.
|
Kannada Bible (KNCL) 2016 |
No Data |