English
A A A A A
×

ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೧೦೭
ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು I ಆತನ ಪ್ರೀತಿ ಶಾಶ್ವತ, ಆತನು ಒಳ್ಳೆಯವನು II
ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು I ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು II
ಅಂತೆಯೇ ವಂದಿಸಲಿ ಬಂದವರು ಚತುರ್ದಿಕ್ಕುಗಳಿಂದ I ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ ದೇಶಗಳಿಂದ II
ಅಲೆದರು ಮರುಳುಗಾಡಿನಲಿ ದಾರಿಕಾಣದೆ I ಬಳಲಿದರು ಜನರಿರುವ ಊರು ಸಿಗದೆ II
ನರಳಿದರು ಹಸಿವೆ ಬಾಯಾರಿಕೆಯಿಂದ I ಸೊರಗಿದರು ಮನೋಯಾತನೆಯಿಂದ II
ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
ಸರಿಯಾದ ದಾರಿಯಲಿ ನಡೆಸಿದನವರನು I ಸೇರಮಾಡಿದನು ಜನವಾಸಿಸುವ ಊರನು II
ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗೆ ಆತನೆಸಗಿದ ಅತಿಶಯಗಳನು II
ಬಾಯಾರಿದವರ ಆಸೆಯನ್ನಾತ ಪೂರೈಸಿದನು I ಹಸಿದವರನು ಮೃಷ್ಟಾನ್ನದಿಂದ ತೃಪ್ತಿಪಡಿಸಿದನು II
೧೦
ದೇವರಾಜ್ಞೆಯನು ವಿರೋಧಿಸಿದ ಕಾರಣ I ಪರಾತ್ಪರನಾಜ್ಞೆಯನು ಹೀಗಳೆದ ಕಾರಣ II
೧೧
ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ I ನರಳುತ್ತಿದ್ದರು ಬಂಧಿತರಾಗಿ ಬೇಡಿಗಳಲಿ II
೧೨
ಕರಗಿತ್ತವರ ಹೃದಯ ಕಡುಕಷ್ಟದಿಂದ I ಎಡವಿ ಬಿದ್ದಿದ್ದರು ಅಸಹಾಯತೆಯಿಂದ II
೧೩
ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II
೧೪
ಕತ್ತಲು, ಕಗ್ಗತ್ತಲಿಂದವರನು ಹೊರತಂದನು I ಅವರ ಬೇಡಿಬಂಧನಗಳನು ಮುರಿದುಹಾಕಿದನು II
೧೫
ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
೧೬
ಚೂರುಚೂರುಗೈದನು ಕಂಚಿನ ಕದಗಳನು I ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು II
೧೭
ರೋಗಿಗಳಾದರವರು ಅನಾಚಾರದ ನಿಮಿತ್ತ I ಬಾಧೆಗೊಳಗಾದರವರು ಪಾಪಕಾರ್ಯಗಳ ನಿಮಿತ್ತ II
೧೮
ಅಸಹ್ಯಪಟ್ಟರು ಅನ್ನ ಆಹಾರಗಳಿಗೆ I ಹತ್ತಿರವಾದರವರು ಮೃತ್ಯುದ್ವಾರಕೆ II
೧೯
ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II
೨೦
ಗುಣಪಡಿಸಿದನವರನು ತನ್ನ ವಾಣಿಯಿಂದ I ತಪ್ಪಿಸಿದನು ಅವರನು ವಿನಾಶಕೂಪದಿಂದ II
೨೧
ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
೨೨
ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು I ಹಾಡಿಹೊಗಳಲಿ ಆತನಾ ಮಹತ್ಕಾರ್ಯಗಳನು II
೨೩
ಹಡಗನು ಹತ್ತಿ ಕಡಲನು ದಾಟಿದರು I ಸಾಗರ ಹಾಯ್ದು‍ವ್ಯಾಪಾರ ಗೈದರು II
೨೪
ಕಂಡರು ಪ್ರಭುವಿನ ಪವಾಡಗಳನು I ಸಮುದ್ರದೊಳಾತನ ಅದ್ಭುತಗಳನು II
೨೫
ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I ತರಂಗಗಳು ಭೊರ್ಗರೆದವು ಅದರೊಂದಿಗೆ II
೨೬
ಗಗನಕ್ಕೇರಿದರು, ಅಗಾಧಕ್ಕಿಳಿದರು I ಗಂಡಾಂತರಕೆ ಸಿಲುಕಿ ಕರಗಿಹೋದರು II
೨೭
ಅಡ್ಡಾಡಿದರು, ಹೊಯ್ದಾಡಿದರು ಕುಡುಕರಂತೆ I ದಿಕ್ಕುತೋರದವರಾದರು ದಕ್ಷತೆ ಸಾಲದೆ II
೨೮
ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II
೨೯
ಆ ಬಿರುಗಾಳಿಯನಾತ ಶಾಂತಪಡಿಸಿದ I ನಿಂತುಹೋಯಿತಾ ಸಮುದ್ರದಲೆಗಳ ಮೊರೆತ II
೩೦
ತಂದಿತು ಪ್ರಶಾಂತತೆ ಸಂತಸವನವರಿಗೆ I ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ II
೩೧
ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II
೩೨
ಕೀರ್ತಿಸಲಿ ಆತನನು ನೆರೆದ ಸಭೆಯಲಿ I ಹಾಡಿಹೊಗಳಲಿ ಹಿರಿಯರಾ ಕೂಟದಲಿ II
೩೩
ನೀಚ ನಿವಾಸಿಗಳ ಕಾರಣದಿಂದ I ನದಿಗಳನೂ ಮರುಭೂಮಿಯಾಗಿಸಿದ II
೩೪
ಒಣನೆಲವಾಗಿಸಿದನಾತ ಬುಗ್ಗೆಗಳನು I ಉಪ್ಪುನೆಲವಾಗಿಸಿದ ಫಲಭೂಮಿಯನು II
೩೫
ಕೆರೆಯಾಗಿಸಿದಾ ಮರುಭೂಮಿಯನು I ಊಟೆಯಾಗಿಸಿದ ಆ ಒಣನೆಲವನು II
೩೬
ಹಸಿದವರನು ನೆಲೆಗೊಳಿಸಿದನಲ್ಲಿ I ವಾಸಿಸಲು ನಗರವನು ಕಟ್ಟಿದರಲ್ಲಿ II
೩೭
ಉತ್ತು ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು I ಕೂಡಿಸಿಕೊಂಡರು ಅಧಿಕವಾದ ಆದಾಯವನು II
೩೮
ಅಭಿವೃದ್ಧಿಯಾದರು ಆತನಾಶೀರ್ವಾದದಿಂದಲೆ I ಅವರಿಗಿರಲಿಲ್ಲ ದನಕರುಗಳಾವುದರ ಕೊರತೆ II
೩೯
ತದನಂತರ ಕುಗ್ಗಿತವರ ಅಂಕೆ ಸಂಖ್ಯೆ I ಕಷ್ಟಸಂಕಟ, ತಾಪತ್ರಯಗಳ ಮಧ್ಯೆ II
೪೦
ತೃಣೀಕರಿಸಿದನು ಪ್ರಭು ಅವರಧಿಪತಿಗಳನು I ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು II
೪೧
ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ I ಹೆಚ್ಚಿಸಿದನವರ ಸಂತತಿಯನು ಕುರಿಮಂದೆ ಹಾಗೆ II
೪೨
ಇದಕಂಡು ಹಿಗ್ಗುವರು ಸಜ್ಜನರೆಲ್ಲರು I ಬಾಯಿ ಮುಚ್ಚಿಕೊಳ್ಳುವರು ದುರ್ಜನರು II
೪೩
ಪರ್ಯಾಲೋಚಿಸಲಿವುಗಳನು ಬುದ್ಧಿವಂತರು I ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ ಜನರು II