English
A A A A A
×

ಕನ್ನಡ ಬೈಬಲ್ (KNCL) 2016

ಕೀರ್ತನೆಗಳು ೧೦೬
ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II
ವರ್ಣಿಸಬಲ್ಲವನಾರು ಆತನ ಮಹತ್ಕಾರ್ಯಗಳನು? I ಯೋಗ್ಯರೀತಿಯಲಿ ಹೊಗಳಬಲ್ಲವರಾರು ಆತನನು? II
ನ್ಯಾಯದಂತೆ ನಡೆಯುವವರು ಧನ್ಯರು I ಅವಿರತವಾಗಿ ನೀತಿವಂತರು ಧನ್ಯರು II
ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ ದಯೆತೋರುವಾಗ I ನೆರವು ನೀಡೆನಗೆ ಸ್ವಾಮಿ, ನೀನಾ ಜನರನು ಉದ್ಧರಿಸುವಾಗ II
ನೀನಾರಿಸಿಕೊಂಡಿರುವ ಪ್ರಗತಿಯನು ನಾ ಕಾಣಮಾಡು I ನಿನ್ನ ಜನಾಂಗದವರ ಸಂತಸವನು ನಾ ಸವಿಯಮಾಡು I ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು ನೀಡು II
ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II
ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ I ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ I ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ II
ಆದರೂ ತನ್ನ ನಾಮಪ್ರಯುಕ್ತ ರಕ್ಷಿಸಿದನವರನು I ಪ್ರಕಟಿಸಿದನಾತ ಹೀಗೆ ತನ್ನ ಶಕ್ತಿಸಾಮರ್ಥ್ಯವನು II
ಒಣಗಿಹೋಯಿತಾ ಕೆಂಗಡಲು ಆತನ ಗದರಿಕೆಗೆ I ದಾಟಿಸಿದನಾ ಸಾಗರವನು ಅಡವಿಯೋ ಎಂಬ ಹಾಗೆ II
೧೦
ತಪ್ಪಿಸಿದನವರನು ವೈರಿಗಳ ಕೈಯಿಂದ I ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ II
೧೧
ಮುಳುಗಿಸಿತು ಜಲರಾಶಿ ಆ ಶತ್ರುಗಳನು I ಉಳಿಯಗೊಡಿಸಲಿಲ್ಲ ಅವರಲ್ಲೊಬ್ಬನನು II
೧೨
ಆಗ ನಂಬಿದರು ಪ್ರಭುವಿನಾ ಮಾತನು I ಮಾಡಿದರಾಗ ಆತನ ಗುಣಗಾನವನು II
೧೩
ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು I ಕಾಯದೆ ಹೋದರು ಆತನಾ ಸಂಕಲ್ಪ ಸಾದನೆಯನು II
೧೪
ಆಶಾಪಾಶಗಳಿಗೆ ಈಡಾದರು ಅಡವಿಯೊಳು I ದೇವನನೇ ಪರಿಶೋಧಿಸಿದರು ಅರಣ್ಯದೊಳು II
೧೫
ಪೂರೈಸಿದನಾತ ಅವರ ಕೋರಿಕೆಯನು I ಕಳುಹಿಸಿದನಾದರೆ ಭೀಕರ ರೋಗವನು II
೧೬
ಅಸೂಯೆಗೊಂಡರು ಪಾಳೆಯದೊಳು ಮೋಶೆಯ ಮೇಲೆ I ಪ್ರಭುವಿಗೆ ಪ್ರತಿಷ್ಠಿತನಾದ ಆ ಆರೋನನ ಮೇಲೆ II
೧೭
ಭೂಮಿ ಬಾಯ್ದೆರೆದು ನುಂಗಿತು ದಾತಾನನನು I ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು II
೧೮
ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು I ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು II
೧೯
ಹೋರೇಬಿನಲಿ ಮಾಡಿದರು ಬಸವನನು I ಆರಾಧಿಸಿದರು ಆ ಎರಕದ ಶಿಲೆಯನು II
೨೦
ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು I ಆರಿಸಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು II
೨೧
ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು I ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು II
೨೨
ಹಾಮನಾಡಿನಲಿ ಮಾಡಿದ ಅದ್ಭುತಗಳನು I ಕೆಂಗಡಲಬಳಿ ನಡೆದ ಘೋರ ಕೃತ್ಯಗಳನು II
೨೩
ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು I ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು I ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು II
೨೪
ಅವರೊ ಬೇಡವೆಂದರು ಆ ಚೆಲುವಿನ ನಾಡನು I ನಂಬದೆ ಹೋದರು ಅವನಿತ್ತಾ ವಾಗ್ದಾನವನು II
೨೫
ಗೊಣಗುಟ್ಟಿದರು ತಮ್ಮ ಗುಡಾರಗಳಲಿ I ನಂಬಿಕೆಯಿಡಲಿಲ್ಲ ಆತನ ಮಾತಿನಲಿ II
೨೬
ಈ ಕಾರಣ ಆಣೆಯಿಟ್ಟನು ಕೈಯೆತ್ತಿ: I “ಬೀಳಮಾಡುವೆನು ನಿಮ್ಮನು ಅಡವಿಯಲಿ, II
೨೭
ಚದರಿಸುವೆನು ನಿಮ್ಮ ಸಂತಾನವನು ಹೊರನಾಡುಗಳಲಿ I ಅಳಿದು ಹೋಗುವರವರು ಅನ್ಯಜನಾಂಗಗಳ ಮಧ್ಯೆಯಲಿ” I
೨೮
ಬಾಳ್‍ಪೆಗೋರ ದೇವತೆಯ ಊಳಿಗದವರಾದರು I ಸತ್ತವರಿಗರ್ಪಿಸಿದ ಬಲಿಯನು ಉಣ್ಣುವವರಾದರು II
೨೯
ಅವರಕ್ರಮ ನಡತೆ ಪ್ರಭುವನು ಕೆಣಕಿತು I ಭೀಕರ ವ್ಯಾಧಿ ಅವರ ಮಧ್ಯೆ ಹಬ್ಬಿತು II
೩೦
ಫಿನೆಹಾಸನೆದ್ದು ದಂಡಿಸಿದೊಡನೆ I ನಿಂತುಹೋಯಿತು ಆ ಘೋರ ಬೇನೆ II
೩೧
ಆತ ಮಾಡಿದಾ ನೈಪುಣ್ಯ I ಆಯಿತು ತಲಾಂತರಕು ಗಣ್ಯ II
೩೨
ಮೆರಿಬಾ ನದಿಯ ಬಳಿ ರೇಗಿಸಿದರಾತನನು I ಹೀಗೆ ಬರಮಾಡಿದರು ಮೋಶೆಗೂ ಹಾನಿಯನು II
೩೩
ನಿಂತರಾಗ ದೇವರಾತ್ಮನಿಗೆ ವಿರೋಧವಾಗಿ I ನುಡಿಯಬೇಕಾಯಿತು ಮೋಶೆಯು ಅವಿವೇಕವಾಗಿ II
೩೪
ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು I ಆತ ಸಂಹರಿಸಲಿಲ್ಲ ಶೋಧಿಸಿದಾ ಜನರನು II
೩೫
ಅನ್ಯಜನರೊಡನವರು ಕಲೆತು ಬೆರೆತುಹೋದರು I ಅವರ ದುರಾಚಾರಗಳನ್ನೂ ಕಲಿತುಕೊಂಡರು II
೩೬
ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ I ಉರುಲಾದವು ಆ ವಿಗ್ರಹಗಳೆ ಅವರಿಗೆ II
೩೭
ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು I ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು II
೩೮
ಸುರಿಸಿದರು ತಮ್ಮ ಮಕ್ಕಳ ನಿರ್ದೋಷ ರಕ್ತವನು I ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ ಅವರನು I ಹೊಲೆಮಾಡಿದರಂಥ ಕೊಲೆಗಳಿಂದ ದೇಶವನು II
೩೯
ಅಶುದ್ಧರಾದರವರು ತಮ್ಮ ದುಷ್ಕೃತ್ಯಗಳಿಂದ I ದೇವದ್ರೋಹಿಗಳಾದರು ದುರಾಚಾರಗಳಿಂದ II
೪೦
ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ I ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ II
೪೧
ಎಂತಲೆ ಒಪ್ಪಿಸಿದನವರನು ಅನ್ಯರಾಷ್ಟ್ರಗಳ ಕೈಗೆ I ಹಗೆಮಾಡುತ್ತಿದ್ದವರೇ ಅಧಿಕಾರಿಗಳಾದರವರಿಗೆ II
೪೨
ಗುರಿಯಾದರು ಶತ್ರುಶೋಷಣೆಗೆ I ಕುಗ್ಗಿಹೋದವರು ಅವರ ಕೈಕೆಳಗೆ II
೪೩
ಪ್ರಭು ಪದೇಪದೇ ವಿಮುಕ್ತಗೊಳಿಸಿದನಾದರೂ I ಪರ್ಯಾಲೋಚಿಸದೆ ಪ್ರತಿಭಟನೆ ಮಾಡಿದರವರು I ಈ ಪರಿಯ ಅಕ್ರಮದ ನಿಮಿತ್ತ ಅವನತಿಗಿಳಿದರು II
೪೪
ನೋಡಿದನಾತ ಅವರ ಕಷ್ಟಕಾರ್ಪಣ್ಯವನು I ಗಮನಿಸಿದನು ಅವರ ಆರ್ತನಾದವನು II
೪೫
ನೆನಪಿಗೆ ತಂದುಕೊಂಡನು ತನ್ನೊಡಂಬಡಿಕೆಯನು I ದಯಾಳುತನದಿಂದ ತೋರಿದನವರಿಗೆ ಕರುಣೆಯನು I ಬಂಧಿಸಿದವರಿಂದಲೂ ದಯೆಯನು ದೊರಕಿಸಿದನು II
೪೬
***
೪೭
ಹೇ ಪ್ರಭು, ನಮ್ಮ ದೇವಾ, ನಮ್ಮನ್ನುದ್ಧರಿಸು I ನಾಡುನಾಡುಗಳಿಂದ ನಮ್ಮನೊಂದುಗೂಡಿಸು I ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು I ನಿನ್ನ ಸ್ತುತಿ ಸ್ತೋತ್ರಗಳಲಿ ಹೆಚ್ಚಳ ಪಡುವೆವು II
೪೮
ಇಸ್ರಯೇಲಿನ ದೇವನಾದ ಪ್ರಭುವಿಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್’, ಪ್ರಭುವಿಗೆ ಸ್ತೋತ್ರ II