೧ |
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I ನನ್ನ ಅಂತರಂಗವೇ, ಭಜಿಸು ಆತನನು I ನೆನೆ ಆತನ ಪರಮಪಾವನ ನಾಮವನು II |
೨ |
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I ಮರೆಯದಿರು ಆತನ ಉಪಕಾರಗಳೊಂದನು II |
೩ |
ಮನ್ನಿಸುವನಾತ ನನ್ನ ದೋಷಗಳನು I ವಾಸಿಮಾಡುವನು ನನ್ನ ರೋಗಗಳನು II |
೪ |
ಉಳಿಸುವನು ಪಾತಾಳದ ಕೂಪದಿಂದ ನನ್ನನು I ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು II |
೫ |
ಒಳ್ಳೆಯವುಗಳಿಂದ ತುಂಬಿಸುವನು ನನ್ನ ಜೀವಮಾನವನು I ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ ಯೌವನವನು II |
೬ |
ಸಾಧಿಸುವನು ಪ್ರಭು ನ್ಯಾಯನೀತಿಯನು I ದೊರಕಿಸುವನು ಶೋಷಿತರಿಗೆ ನ್ಯಾಯವನು II |
೭ |
ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ I ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ II |
೮ |
ಪ್ರಭು ದಯಾಳು, ಕೃಪಾಪೂರ್ಣನು I ಸಹನಶೀಲನು, ಪ್ರೀತಿಮಯನು II |
೯ |
ಆತನು ಸದಾ ತಪ್ಪು ಹುಡುಕುವವನಲ್ಲ I ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ II |
೧೦ |
ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ I ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ II |
೧೧ |
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II |
೧೨ |
ಪಡುವಣದಿಂದ ಮೂಡಣವೆಷ್ಟೋ ದೂರ I ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ II |
೧೩ |
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ I ಕನಿಕರಿಸುವನಾತ ತನಗೆ ಅಂಜುವವರಿಗೆ II |
೧೪ |
ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ I ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ II |
೧೫ |
ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ I ಹೊಲದ ಹೂವಿನಂತೆ ಅವನ ಬೆಡಗು ಬಿನ್ನಾಣ II |
೧೬ |
ಬಿದ್ದುಹೋಗುವುದಾ ಹೂವು ಗಾಳಿಯ ಬಡಿತಕ್ಕೆ I ಅದರ ಗುರುತೂ ಇರದಲ್ಲಿ ಮರಳಿ ನೋಡಲಿಕ್ಕೆ II |
೧೭ |
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು II |
೧೮ |
ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ I ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ II |
೧೯ |
ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು I ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು II |
೨೦ |
ಭಜಿಸಿರಿ ಪ್ರಭುವನು ದೇವದೂತರುಗಳೇ I ಆತನ ಆಣತಿ ಪಾಲಿಪ ಪರಾಕ್ರಮಿಗಳೇ I ಆತನ ನುಡಿಯಂತೆಯೇ ನಡೆಯುವ ಜನಾಂಗಗಳೇ II |
೨೧ |
ಪ್ರಭುವನು ಭಜಿಸಿರಿ ಆತನ ಸೇನೆಗಳೇ I ಭಜಿಸಿ ಪ್ರಭುವನು, ಓ ಎನ್ನಮನವೇ II |
೨೨ |
ಭಜಿಸಿರಿ ಪ್ರಭುವನು ಆತನ ಸೃಷ್ಟಿಗಳೇ I ಆತನ ಅಧಿಕಾರದಲ್ಲಿಹ ಸಕಲ ವಸ್ತುಗಳೇ I ಭಜಿಸು ಪ್ರಭುವನು, ಓ ಎನ್ನಮನವೇ II
|
Kannada Bible (KNCL) 2016 |
No Data |