A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೯ಅದಕ್ಕೆ ಯೋಬನು ಉತ್ತರಿಸುತ್ತಾ ಹೀಗೆಂದನು:
“ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು?
ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು.
ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.
ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ.
ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ.
ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನು ಉದಯಿಸನು ಮುದ್ರೆ ಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು.
ಆಕಾಶಮಂಡಲವನ್ನು ಹರಡಿದವನು ದೇವರೇ ಕಡಲಿನ ತರಂಗಗಳನ್ನು ಮೆಟ್ಟಿದವನು ಆತನೊಬ್ಬನೇ.
ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿಮಂಡಲವನೂ ಮೃಗಶಿರವನೂ ಕೃತ್ತಿಕೆಯನೂ ನಿರ್ಮಿಸಿದವನು ಆತನೇ.
೧೦
ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು ಅಸಂಖ್ಯ ಅದ್ಭುತಕರ ಪವಾಡಗಳನ್ನು ಮಾಡಿರುವನು.
೧೧
ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ ಕಾಣಿಸನು ನನ್ನ ಮುಂದುಗಡೆಯೇ ಹಾದುಹೋದರೂ ತಿಳಿಯದು.
೧೨
ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?
೧೩
ರಹೆಬನ ಸಹಾಯಕರು ಕಾಲಿಗೆರಗಿದರೂ ದೇವರು ತನ್ನ ಸಿಟ್ಟು ಸಿಡುಕನು ಬಿಟ್ಟುಬಿಡನು.
೧೪
ದೇವರೊಂದಿಗೆ ವಾದಿಸಲು ನಾನು ಅಶಕ್ತನು ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು!
೧೫
ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.
೧೬
ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.
೧೭
ನನ್ನನ್ನು ಬಿರುಗಾಳಿಯಿಂದ ಬಡಿಯುತ್ತಾನೆ ಕಾರಣವಿಲ್ಲದೆ ಗಾಯದ ಮೇಲೆ ಗಾಯ ಮಾಡುತ್ತಾನೆ.
೧೮
ನನಗೆ ಉಸಿರಾಡಲೂ ಬಿಡದೆ ನನ್ನ ಹೊಟ್ಟೆಯನ್ನು ಕಹಿಯಾದವುಗಳಿಂದ ತುಂಬಿಸುತ್ತಾನೆ.
೧೯
ಶಕ್ತಿಪ್ರಯೋಗದ ಮಾತೆತ್ತಿದರೆ, ‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ. ನ್ಯಾಯವಿಚಾರಣೆ ಆಗಲಿಯೆಂದರೆ, ‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.
೨೦
ನಾನು ಸತ್ಯವಂತನಾಗಿದ್ದರೂ ಬಾಯೇ ನಾನು ಅಪರಾಧಿಯೆಂದು ಒಪ್ಪಿಕೊಳ್ಳುತ್ತದೆ. ನಾನು ನಿರ್ದೋಷಿಯಾಗಿದ್ದರೂ ‘ನಿನ್ನದು ವಕ್ರಬುದ್ಧಿ’ ಎನ್ನುತ್ತದೆ.
೨೧
ನಾನು ನಿರ್ದೋಷಿಯೇ ಹೌದು; ಅದರ ಬಗ್ಗೆ ನನಗಿಲ್ಲ ಚಿಂತೆ. ನನ್ನ ಪ್ರಾಣ ಕೂಡ ನನಗೆ ತೃಣವಾಗಿಬಿಟ್ಟಿದೆ.
೨೨
ಎಲ್ಲವೂ ಒಂದೇ ಆಗಿಬಿಟ್ಟಿದೆ. ಆದ್ದರಿಂದಲೇ ಇಂತೆನ್ನುತ್ತೇನೆ: ‘ದೋಷಿಯೋ ನಿರ್ದೋಷಿಯೋ’ ದೇವರು ಎಲ್ಲರನೂ ನಾಶಗೊಳಿಸುತ್ತಾನೆ.
೨೩
ಅಕಸ್ಮಾತ್ತಾಗಿ ಮಹಾವಿನಾಶ ಬಂದೊದಗಿದರೂ ನಿರ್ದೋಷಿಗಳ ಅವಸ್ಥೆ ಕಂಡು ಹಾಸ್ಯಮಾಡುತ್ತಾನೆ.
೨೪
ದೇಶವು ದುರುಳರ ಕೈವಶವಾಗಿದ್ದರೂ ನ್ಯಾಯಾಧೀಶರ ಮುಖಕ್ಕೆ ಮುಸುಕುಹಾಕುತ್ತಾನೆ. ಇದನ್ನು ಮಾಡುವವರು ದೇವರಲ್ಲದೆ ಮತ್ತೆ ಯಾರು?
೨೫
ನನ್ನ ದಿನಗಳು ಓಟಗಾರನಿಗಿಂತ ವೇಗ ಅವು ಓಡುತ್ತವೆ ಕಾಣದೆ ಯಾವುದೊಂದು ಸುಖ.
೨೬
ಬೆಂಡಿನ ಹರಗಲು ದೌಡಾಯಿಸುವಂತೆ ಬೇಟೆಯ ಮೇಲೆ ಗರುಡವೆರಗುವಂತೆ ಕಳೆದುಹೋಗುತ್ತವೆ ಶೀಘ್ರಗತಿಯಲ್ಲೆ.
೨೭
ನನ್ನ ಪ್ರಲಾಪವನ್ನು ನಾನು ಮರೆತುಬಿಟ್ಟರೆ ಬಾಡಿದ ಮುಖವನ್ನು ಮಾರ್ಪಡಿಸಿಕೊಂಡರೆ ಹರ್ಷಿಸುವೆನೆಂದು ನಾನು ಮನಸ್ಸುಮಾಡಿದರೆ.
೨೮
ಸಮಸ್ತ ದುಃಖದುಗುಡಗಳ ನೆನಪು ನನಗೆ ತರುತ್ತವೆ ದಿಗಿಲು ನನಗೆ ಗೊತ್ತು, ನೀ ನನ್ನನು ನಿರಪರಾಧಿ ಎಂದೆಣಿಸಲಾರೆಯೆಂದು.
೨೯
ಅಪರಾಧಿಯೆಂದೇ ನನಗೆ ನಿರ್ಣಯವಾಗಬೇಕಿದ್ದಲ್ಲಿ ನಾನೇಕೆ ಪ್ರಯಾಸಪಡಬೇಕು ವ್ಯರ್ಥವಾಗಿ?
೩೦
ಹಿಮದಿಂದ ನಾನು ಸ್ನಾನಮಾಡಿದರೂ ಚೌಳಿನಿಂದ ನಾನು ಕೈತೊಳೆದರೂ
೩೧
ಮುಳುಗಿಸಿಬಿಡುವೆ ನನ್ನನ್ನು ತಿಪ್ಪೆಗುಂಡಿಯಲ್ಲಿ ನನ್ನ ಉಡಿಗೆ ತೊಡಿಗೆಗಳೂ ಅಸಹ್ಯಪಡುವುವು ನನ್ನನು ನೋಡಿ.
೩೨
ದೇವರು ನನ್ನಂಥ ನರನಲ್ಲ, ನಾನಾತನಿಗೆ ಉತ್ತರಿಸಲು ನಾವಿಬ್ಬರೂ ನ್ಯಾಯಾಲಯದಲ್ಲಿ ಕೂಡಿ ವಾದಿಸಲು.
೩೩
ನಮ್ಮಿಬ್ಬರ ನಡುವೆ ನಿರ್ಣಯಿಸತಕ್ಕವನು ಇಲ್ಲ ಮಧ್ಯಸ್ಥನಾಗಬಲ್ಲ ನ್ಯಾಯಾಧಿಪತಿ ಇಲ್ಲ.
೩೪
ನನ್ನ ಮೇಲೆತ್ತಿರುವ ಕೋಲನ್ನು ಬಿಸಾಡಲಿ ಆತನ ಭಯಭೀತಿ ನನ್ನನು ಹೆದರಿಸದಿರಲಿ.
೩೫
ಆಗ ಭಯಪಡದೆ ಮಾತನಾಡುವೆನು ಅಂಜಿಕೆಗೆ ನನ್ನಲ್ಲಿ ಆಸ್ಪದ ಇರದು.