೧ |
“ಮಾನವನ ಜೀವನ ಸೈನಿಕರ ಸೇವಾವಧಿಯಂತೆ ಅವನ ದಿನಗಳು ಕಳೆಯುತ್ತವೆ ಜೀತದಾಳಿನ ದಿನಗಳಂತೆ. |
೨ |
ನಾನಿರುವೆ ಸಂಜೆಯನು ಬಯಸುವ ದಾಸನಂತೆ ಕೂಲಿಯನು ನಿರೀಕ್ಷಿಸುವ ಕೂಲಿಯಾಳಿನಂತೆ. |
೩ |
ನನ್ನ ಪಾಲಿಗೆ ಬಂದಿವೆ ಬೇಸರಿಕೆಯ ಮಾಸಗಳು ನನಗೆ ನೇಮಕವಾಗಿವೆ ಆಯಾಸದ ರಾತ್ರಿಗಳು. |
೪ |
ಮಲಗಹೋಗುವಾಗ ‘ಯಾವಾಗ ಏಳುವೆನೋ” ಎನಿಸುತ್ತದೆ ಕಾಳ ರಾತ್ರಿ ಬೆಳೆಯುತ್ತಾ ಹೋಗುತ್ತಿರುತ್ತದೆ ಉದಯದವರೆಗೆ ಅತ್ತಿತ್ತ ಹೊರಳಿ ಸಾಕಾಗುತ್ತದೆ. |
೫ |
ನನ್ನ ಮಾಂಸ ಮುಸುಕಿದೆ ಹುಳುಹುಪ್ಪಟೆಗಳಿಂದ ನನ್ನ ಚರ್ಮ ಬಿರಿದಿದೆ ಕಜ್ಜಿಕಡಿತಗಳಿಂದ. |
೬ |
ನನ್ನ ದಿನಗಳು ಮಗ್ಗದ ಲಾಳಕ್ಕಿಂತ ತ್ವರಿತ ಅವುಗಳಿಗಿದೋ ನಿರೀಕ್ಷೆಯಿಲ್ಲದ ಮುಕ್ತಾಯ. |
೭ |
ನೆನೆಸಿಕೊಳ್ಳೋ ದೇವಾ, ನನ್ನ ಜೀವ ಕೇವಲ ಉಸಿರು ನನ್ನ ಕಣ್ಣುಗಳು ಇನ್ನು ಕಾಣವು ನಲಿವು. |
೮ |
ನನ್ನನು ನೋಡುವ ಕಣ್ಣಿಗೆ ನಾನಿನ್ನು ಕಾಣಿಸುವುದಿಲ್ಲ. ನಿನ್ನ ಕಣ್ಣು ನನ್ನ ಕಡೆಗೆ ತಿರುಗಿದ್ದರೂ ನಾನು ಬದುಕಿರುವುದಿಲ್ಲ. |
೯ |
ಮೋಡ ಕರಗಿ ಮಾಯವಾಗುವಂತೆ ಪಾತಾಳಕ್ಕಿಳಿದವನು ಬಾರನು ಮತ್ತೆ. |
೧೦ |
ತನ್ನ ಮನೆಗವನು ಹಿಂತಿರುಗುವುದಿಲ್ಲ ಅವನ ನಿವಾಸಕ್ಕೆ ಅವನ ಗುರುತೇ ಇಲ್ಲ. |
೧೧ |
ಬಾಯಿ ಮುಚ್ಚಿಡಲಾಗದು ನನ್ನಿಂದ ಮಾತಾಡುತ್ತೇನೆ ಆತ್ಮವೇದನೆಯಿಂದ ಪ್ರಲಾಪಿಸುತ್ತೇನೆ ಮನೋವ್ಯಥೆಯಿಂದ. |
೧೨ |
ನಾನೇನು ಕಡಲೋ? ಕಡಲಿನ ಘಟಸರ್ಪವೋ? ನೀವು ನನ್ನ ಮೇಲೆ ಕಾವಲಿಡುವುದು ಸರಿಯೋ? |
೧೩ |
‘ನನ್ನ ಹಾಸಿಗೆಯೆ ನನಗೆ ಸಾಂತ್ವನ’ ಎಂದೆ ‘ನನ್ನ ಮಂಚವೆ ಚಿಂತೆಗೆ ಶಮನ’ ಎಂದೆ. |
೧೪ |
ಆದರೂ ನೀನು ಬೆದರಿಸುತ್ತೀಯೆ ಸ್ವಪ್ನಗಳಿಂದ ಭಯಪಡಿಸುತ್ತೀಯೆ ನನ್ನನು ಕೆಟ್ಟ ಕನಸುಗಳಿಂದ. |
೧೫ |
ಎಂದೇ ಉಸಿರುಕಟ್ಟಿ ನಾನು ಪ್ರಾಣಬಿಡುವುದು ಲೇಸು ಮೂಳೆಮಾಂಸದ ಈ ತಡಿಕೆಬಾಳಿಗಿಂತ ಸಾವು ಲೇಸು. |
೧೬ |
ಬದುಕು ನನಗೆ ಬೇಸರ; ನಿರಂತರ ಬಾಳು ನನಗೆ ಅನಿಷ್ಟ ನನ್ನ ದಿನಗಳು ನಿರರ್ಥಕ, ನನ್ನ ಗೊಡವೆ ನಿನಗೆ ಬೇಕಿಲ್ಲ. |
೧೭ |
ಮನುಷ್ಯನಾದವನು ಎಷ್ಟರವನು ನೀನವನಿಗೆ ಘನತೆ ನೀಡಲು? ನೀನವನ ಮೇಲೆ ಗಮನ ಹರಿಸಲು? |
೧೮ |
ದಿನ ಬಿಡದೆ ಅವನನ್ನು ಸಂದರ್ಶಿಸಲು; ಕ್ಷಣಕ್ಷಣಕ್ಕೂ ಅವನನ್ನು ಪರೀಕ್ಷಿಸಲು? |
೧೯ |
ನಿನ್ನ ದೃಷ್ಟಿಯನು ನನ್ನ ಮೇಲೆ ಎಷ್ಟುಕಾಲ ಇಡುವೆ? ಗುಟುಕು ಉಗುಳನು ನುಂಗಲು ಬಿಡುವುದಿಲ್ಲವೆ? |
೨೦ |
ನರಮಾನವರ ಮೇಲೆ ಬೆಂಗಾವಲಿರುವವನೇ, ಭಾರವಾಗಿರುವೆನು ನನಗೆ ನಾನೇ. ನಾನು ಪಾಪಮಾಡಿದ್ದಾದರೂ ನಿನಗೇನು ಮಾಡಿದೆ? ನನ್ನನ್ನೇಕೆ ನಿನ್ನ ಹೊಡೆತಕ್ಕೆ ಗುರಿಪಡಿಸಿದೆ? |
೨೧ |
ನನ್ನ ಅಪರಾದವನ್ನು ನೀನು ಕ್ಷಮಿಸಬಾರದೆ? ನನ್ನ ದೋಷವನ್ನು ನೀನು ಪರಿಹರಿಸಬಾರದೆ? ಮಣ್ಣಿನೊಳಗೆ ಬಿದ್ದಿರುವೆ ನಾನು ಈಗ ನಾನು ಇಲ್ಲವಾಗಿರುವೆ ನೀ ಹುಡುಕುವಾಗ.
|
Kannada Bible (KNCL) 2016 |
No Data |