A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೬ಅದಕ್ಕೆ ಉತ್ತರವಾಗಿ ಯೋಬನು ಹೀಗೆಂದನು:
“ನನ್ನ ವಿಪತ್ತನು ತೂಕಮಾಡಿ ನೋಡಿದರೆ ಒಳಿತು ನನ್ನ ದುಃಖಗಳನು ತಕ್ಕಡಿಗೆ ಹಾಕಿದರೆ ಲೇಸು.
ಆಗ ತಿಳಿಯುವುದು ನನ್ನ ವಿಪತ್ತು ಕಡಲ ತೀರದ ಮರಳಿಗಿಂತ ಭಾರವೆಂದು. ಎಂತಲೇ ನಾನಾಡಿದ ಮಾತು ದುಡುಕಿನಿಂದ ಆಡಿದ ಮಾತುಗಳೆಂದು.
ನನ್ನ ಮನದೊಳು ಸರ್ವಶಕ್ತನ ಬಾಣಗಳು ನಾಟಿವೆ ನನ್ನ ಅಂತರಂಗದೊಳು ಅವುಗಳ ವಿಷ ಹೀರಲಾಗುತ್ತಿದೆ ದೇವರಿಂದ ಬಂದ ಆತಂಕಗಳು ನನ್ನನು ಸುತ್ತುವರೆದಿವೆ.
ಹುಲ್ಲಿರಲು ಕಾಡುಕತ್ತೆ ಅರಚೀತೆ? ಮೇವಿರಲು ಗೂಳಿ ಎತ್ತು ಗುಟುರೀತೆ?
ಉಪ್ಪಿಲ್ಲದ ಸಪ್ಪೆಯನು ತಿನ್ನುತ್ತೇವೆಯೆ? ಮೊಟ್ಟೆಯೊಳಗಿನ ಲೋಳೆಯಲಿ ರುಚಿಯಿದೆಯೆ?
ಮುಟ್ಟಲು ಕೂಡ ಅಸಹ್ಯವಾದುವು ಕಾಯಿಲೆಯಲ್ಲಿ ನನಗೆ ಆಹಾರವಾದವು.
ಅಯ್ಯೋ, ನನ್ನ ವಿಜ್ಞಾಪನೆ ನೆರವೇರುವುದಿಲ್ಲವೇಕೆ? ದೇವರು ನನ್ನ ಕೋರಿಕೆಯನ್ನು ಈಡೇರಿಸುವುದಿಲ್ಲವೇಕೆ?
ದೇವರು ನನ್ನನ್ನು ನಸುಕಿಬಿಡಬಾರದೆ? ತನ್ನ ಕೈಯನ್ನು ಚಾಚಿ ಸಂಹರಿಸಿಬಿಡಬಾರದೆ?
೧೦
ಆಗ ನಾನು ಸಾಂತ್ವನ ಪಡೆಯುತ್ತಿದ್ದೆ ಮಿತಿಯಿಲ್ಲದ ಯಾತನೆಯಲ್ಲೂ ಆದರ ಹೊಂದುತ್ತಿದ್ದೆ. ಪರಮಪಾವನನ ಮಾತನು ಬಿಡದೆ ಅನುಸರಿಸಿದೆನಲ್ಲವೆ?
೧೧
ನಾನು ನಿರೀಕ್ಷೆಯಿಂದಿರಲು ನನಗಾಧಾರವೇನು? ನಾನು ತಾಳ್ಮೆಯಿಂದಿರಲು ನನ್ನ ಅಂತ್ಯಸ್ಥಿತಿಯೇನು?
೧೨
ನನ್ನ ಬಲವು ಕಲ್ಲಿನ ಬಲವೊ? ನನ್ನ ದೇಹ ಕಂಚಿನ ದೇಹವೊ?
೧೩
ನನಗೆ ಯಾವ ಸಹಾಯವೂ ಇಲ್ಲವಲ್ಲ! ನನ್ನ ತ್ರಾಣ ತೊಲಗಿಹೋಗಿದೆಯಲ್ಲಾ!
೧೪
ಸಂಕಟದಲ್ಲಿ ಆಗದಾ ನೆಂಟನಿಗೆ ಸರ್ವಶಕ್ತನಲ್ಲಿ ಭಯಭಕ್ತಿ ಇರುವುದುಂಟೆ?
೧೫
ಹರಿದು ಓಡುವ ತೊರೆಯಂತೆ ಉಕ್ಕಿ ಹರಿಯುವ ಪ್ರವಾಹದಂತೆ ದ್ರೋಹವೆಸಗಿದ್ದಾರೆ ಸೋದರರು ನನಗೆ.
೧೬
ಕಪ್ಪಾಗಿದೆ ಆ ತೊರೆಗಳ ನೀರು ಮಂಜುಗಡ್ಡೆಯಿಂದ ಕದಡಿಹೋಗಿವೆ ಹಿಮಗಡ್ಡೆಯಿಂದ.
೧೭
ಆ ತೊರೆಗಳು ಮಾಯವಾಗುತ್ತವೆ ಬೇಸಿಗೆ ಬಂದಾಗ ಬತ್ತಿಹೋಗುತ್ತವೆ ಸೆಕೆಯಾದಾಗ.
೧೮
ಪ್ರಯಾಣಮಾಡುವ ವರ್ತಕರು ಇಂಥ ತೊರೆಗಳ ಮಾರ್ಗವಾಗಿ ಮರಳುಗಾಡಿನಲ್ಲೆ ನಾಶವಾಗುವರು ಅಲೆದಲೆದು ನೀರಿಗಾಗಿ.
೧೯
ಅವುಗಳಿಗಾಗಿ ಹಂಬಲಿಸುತ್ತದೆ ಆ ತೇಮದ ಪ್ರಯಾಣಿಕರ ತಂಡ ಅವುಗಳಿಗಾಗಿ ಹಾತೊರೆಯುತ್ತದೆ ಶೆಬದ ವರ್ತಕರ ಪಂಗಡ.
೨೦
ಆಶಿಸಿದಷ್ಟೂ ಆಶಾಭಂಗಪಡುತ್ತಾರೆ ಆ ಪ್ರಯಾಣಿಕರು ನಂಬಿದಷ್ಟೂ ನಿರೀಕ್ಷೆಗೆಡುತ್ತಾರೆ ಆ ವರ್ತಕರು.
೨೧
ಅಂತೆಯೇ ನನ್ನ ವಿಷಯದಲ್ಲಿ ನೀವು ವರ್ತಿಸುತ್ತೀರಿ ನನ್ನ ಈ ವಿಪತ್ತನು ಕಂಡಕೂಡಲೇ ಹಿಂಜರಿಯುತ್ತೀರಿ.
೨೨
ದಾನ ನೀಡಿರೆಂದು ನಿಮ್ಮನು ಬಿನ್ನವಿಸಿದೆನೋ? ನಿಮ್ಮಾಸ್ತಿಯಿಂದ ಲಂಚವನು ಕೋರಿದೆನೋ?
೨೩
ವಿರೋಧಿಯ ಕೈಯಿಂದ ನನ್ನನು ಬಿಡಿಸಿರೆಂದು ಕೇಳಿಕೊಂಡೆನೋ? ಹಿಂಸಕರಿಂದ ನನ್ನನು ವಿಮೋಚಿಸಿರೆಂದು ಬೇಡಿಕೊಂಡೆನೋ?
೨೪
ನಾನು ಮಾಡಿದ ತಪ್ಪೇನೆಂಬುದನು ತಿಳಿಸಿರಿ ನನಗೆ ನಾನು ಮೌನದಿಂದಿರುವೆನು, ಉಪದೇಶಮಾಡಿರಿ ನನಗೆ.
೨೫
ನ್ಯಾಯವಾದ ಮಾತು ಎಷ್ಟೋ ಶಕ್ತಿಯುತ ನಿಮ್ಮ ತರ್ಕವಾದರೋ ನಿರರ್ಥಕ.
೨೬
ಕೇವಲ ಮಾತುಗಳಿಂದ ಖಂಡಿಸಬೇಕೆಂದಿರುವಿರೊ? ದೆಸೆಗೆಟ್ಟವನ ಮಾತು ಗಾಳಿಪಾಲಾಗತಕ್ಕದಲ್ಲವೊ?
೨೭
ಅನಾಥನನ್ನು ಕೊಂಡುಕೊಳ್ಳಲು ಚೀಟುಹಾಕುತ್ತೀರಿ ಆಪ್ತನನ್ನು ಮಾರಿಬಿಡಲು ವ್ಯಾಪಾರಮಾಡುತ್ತೀರಿ.
೨೮
ಈಗ ದಯವಿಟ್ಟು ನೋಡಿ ನನ್ನ ಕಡೆಗೆ ಸುಳ್ಳಾಡೆನು ನಿಮ್ಮ ಮುಖದೆದುರಿಗೆ.
೨೯
ದಯಮಾಡಿ ಮತ್ತೆ ಆಲೋಚಿಸಿರಿ ಅನ್ಯಾಯವಾಗದಂತೆ ಮರಳಿ ವಿಮರ್ಶಿಸಿರಿ ನನ್ನ ಸತ್ಯತೆ ತಿಳಿಯುವಂತೆ.
೩೦
ರುಚಿ ವಿಷಯದಲ್ಲಿ ನಾಲಿಗೆ ತಪ್ಪುಮಾಡುತ್ತದೆಯೇ? ಸತ್ಯಾಸತ್ಯಗಳ ವಿವೇಚನೆ ನನಗಿಲ್ಲವೇ?’