A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೫“ಕೂಗಿ ನೋಡು, ಯಾರಿದ್ದಾರೆ ಉತ್ತರಕೊಡುವವರು ನಿನಗೆ? ಈಗ ಯಾರ ಕಡೆಗೆ, ಯಾವ ದೇವದೂತರ ಕಡೆಗೆ ತಿರುಗುವೆ?
ಮೂರ್ಖನಿಗೆ ನಾಶ ಕೋಪದಿಂದ ಮೂಢನಿಗೆ ಮರಣ ರೋಷದಿಂದ.
ಮೂರ್ಖನು ಬೇರೂರುವುದನು ನೋಡಿದೆ ಕೂಡಲೆ ಅವನ ನಿವಾಸ ಶಾಪಕ್ಕೀಡಾಗುವುದನು ಕಂಡೆ.
ಆಶ್ರಯ ಎಂಬುದು ಅವನ ಮಕ್ಕಳಿಗಿಲ್ಲ ನ್ಯಾಯಸ್ಥಾನದಲ್ಲಿ ಗೆಲುವು ಅವರಿಗಿಲ್ಲ ಅವರನ್ನು ಬಿಡಿಸತಕ್ಕವರಾರೂ ಇಲ್ಲ.
ಹಸಿದವರು ಅವನ ಬೆಳೆಯನು ತಿಂದುಬಿಡುವರು ಮುಳ್ಳುಬೇಲಿ ಹಾಕಿದ್ದರೂ ಅದನು ತಿಂದುಬಿಡುವರು ಅವನ ಸೊತ್ತನು ನುಂಗಲು ಬಾಯ್ದೆರೆದು ಕಾದಿರುವರು.
ಕೇಡುಹುಟ್ಟುವುದು ಮಣ್ಣಿನಿಂದಲ್ಲ ದುಃಖ ಮೊಳೆವುದು ಭೂಮಿಯಿಂದಲ್ಲ.
ಜ್ವಾಲೆಗಳು ಏರುವುದು ಮೇಲಕೆ ಜನರು ಹುಟ್ಟಿರುವುದು ದುಃಖಕೆ.
ನಾನು ನೀನಾಗಿದ್ದರೆ ದೇವರಿಗೆ ಮೊರೆಯಿಡುತ್ತಿದ್ದೆ ನನ್ನ ವಿಷಯವನು ಆತನ ಕೈಗೆ ಬಿಡುತ್ತಿದ್ದೆ.
ದೇವರೆಸಗುತ್ತಾನೆ ಅಸಾಧ್ಯ ಅತಿಶಯಗಳನು ಅಸಂಖ್ಯವಾದ ಅದ್ಭುತಕಾರ್ಯಗಳನು.
೧೦
ಮಳೆಗರೆಯುತ್ತಾನೆ ಭೂಮಿಯ ಮೇಲೆ ನೀರೊದಗಿಸುತ್ತಾನೆ ಹೊಲಗದ್ದೆಗಳಿಗೆ.
೧೧
ಉನ್ನತಿಗೇರಿಸುತ್ತಾನೆ ದೀನದಲಿತರನು ಸುರಕ್ಷತೆಗೊಯ್ಯುತ್ತಾನೆ ದುಃಖಿತರನು.
೧೨
ಭಂಗಪಡಿಸುತ್ತಾನೆ ವಂಚಕರ ಉಪಾಯಗಳನು ಕೈಗೂಡಗೊಳಿಸನು ಅವರ ಪ್ರಯತ್ನಗಳನು.
೧೩
ನಿರರ್ಥಕಗೊಳಿಸುತ್ತಾನೆ ವಕ್ರಿಗಳ ತಂತ್ರೋಪಾಯಗಳನು ಸಿಕ್ಕಿಸಿಬಿಡುತ್ತಾನೆ ಅವರವರ ಯೋಜನೆಗಳಲ್ಲೆ ಜ್ಞಾನಿಗಳನು.
೧೪
ಕತ್ತಲು ಅಂಥವರನು ಸುತ್ತುವರೆದಿರುತ್ತದೆ ಹಾಡುಹಗಲಲ್ಲೆ ರಾತ್ರಿಯಲ್ಲೋ ಎಂಬಂತೆ ತಡಕಾಡುತ್ತಾರೆ ಅವರು ನಡುಹಗಲಲ್ಲೇ.
೧೫
ದಿಕ್ಕಿಲ್ಲದವರನು ರಕ್ಷಿಸುತ್ತಾನೆ ದೇವರು ಅಂಥವರ ಬಾಯಿಗತ್ತಿಯಿಂದ ಬಿಡಿಸುತ್ತಾನೆ ಅವರನ್ನು ಬಲಾಢ್ಯರ ಕೈಯಿಂದ.
೧೬
ಎಂತಲೇ ಬಡವನಿಗೆ ನಿರೀಕ್ಷೆ ಇರುತ್ತದೆ. ಅನ್ಯಾಯ ಆಡುವ ಬಾಯಿ ಮುಚ್ಚಿಕೊಳ್ಳುತ್ತದೆ.
೧೭
ದೇವರು ಯಾರನ್ನು ತಿದ್ದುತ್ತಾನೋ ಅವನು ಧನ್ಯನು ಅಲಕ್ಷ್ಯಮಾಡಬೇಡ ನೋಡು, ಸರ್ವಶಕ್ತನ ದಂಡನೆಯನು.
೧೮
ಗಾಯಮಾಡುವವನೂ ಗಾಯಕಟ್ಟುವವನೂ ದೇವರೇ ಹೊಡೆಯುವುದೂ, ಗುಣಪಡಿಸುವುದೂ ಆತನ ಕೈಯೇ.
೧೯
ಐದಾರು ಇಕ್ಕಟ್ಟುಗಳಿಂದ ನಿನ್ನನು ಬಿಡಿಸುವನು ಏಳನೆಯದು ಬಂದರೂ ನಿನ್ನನು ಕೇಡು ಮುಟ್ಟದು.
೨೦
ಬರಗಾಲದಲ್ಲಿ ಮರಣದಿಂದ ಕಾಪಾಡುವನು ಯುದ್ಧಕಾಲದಲ್ಲಿ ಕತ್ತಿಯಿಂದ ರಕ್ಷಿಸುವನು.
೨೧
ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ ಪರಿವಿನಾಶ ಬಂದರೂ ನೀನು ಹೆದರದಿರುವೆ.
೨೨
ಕ್ಷಾಮಡಾಮರದಲ್ಲೂ ನೀನು ನಗುತ್ತಿರುವೆ ಕಾಡುಮೃಗಗಳಿಗೂ ನೀನು ಅಂಜದಿರುವೆ.
೨೩
ಹೊಲದ ಕಲ್ಲುಬಂಡೆಗಳೊಡನೆ ಒಪ್ಪಂದಮಾಡಿಕೊಳ್ಳುವೆ ಆ ಕಾಡುಪ್ರಾಣಿಗಳೊಂದಿಗೆ ನೆಮ್ಮದಿಯಿಂದ ಬಾಳುವೆ.
೨೪
ನಿನ್ನ ಗುಡಾರಕ್ಕೆ ಗಂಡಾಂತರವಿಲ್ಲವೆಂಬ ನೆಮ್ಮದಿ ನಿನಗಿರುವುದು ನಿನ್ನ ಮಂದೆಯನು ನೀನು ನೋಡಬಂದಾಗ ಕೊರತೆ ಕಾಣಬರದು.
೨೫
ನಿನ್ನ ಸಂತತಿ ದೊಡ್ಡದೆಂಬುದನು ನೀನು ತಿಳಿಯುವೆ ಅದು ಇಳೆಯ ಹುಲ್ಲಿನಂತೆ ಹುಲುಸಾಗಿ ಬೆಳೆವುದನು ಕಾಣುವೆ.
೨೬
ಸುಗ್ಗಿಕಾಲದಲ್ಲಿ ಕಾಳುತೆನೆ ಕಣ ಸೇರುವಂತೆ ವೃದ್ಧಾಪ್ಯ ಕಳೆದ ಮೇಲೆ ನೀನು ಸಮಾಧಿ ಸೇರುವೆ.
೨೭
ಇದನು ನಾವು ಪರಿಶೋಧಿಸಿದ್ದೇವೆ, ಇದು ಯಥಾರ್ಥ ಇದನು ಕೇಳಿ ತಿಳಿದುಕೊ - ಇದು ನಿನಗೆ ಹಿತಕರ.”