೧ |
ಎಲೀಹುವನು ಮತ್ತೆ ಹೀಗೆಂದು ಹೇಳಿದನು: |
೨ |
“’ಸಜ್ಜನನಾಗಿ ಬಾಳಿ ನನಗಾದ ಪ್ರಯೋಜನವೇನು? ಪಾಪರಹಿತನಾಗಿ ಜೀವಿಸಿ ನನಗೆ ಬಂದ ಲಾಭವೇನು’ |
೩ |
ಈ ರೀತಿ ನೀನು ನುಡಿಯುವುದು ನ್ಯಾಯವೆಂದು ಊಹಿಸುತ್ತೀಯೋ? ನಿನ್ನ ನೀತಿ ದೇವರ ನೀತಿಗಿಂತ ಮಿಗಿಲಾದುದೆನ್ನುತ್ತೀಯೋ? |
೪ |
ನಾನು ನಿನಗೆ ಉತ್ತರಕೊಡುತ್ತೇನೆ ನಿನ್ನ ಮಿತ್ರರಿಗೂ ಪ್ರತ್ಯುತ್ತರ ನೀಡುತ್ತೇನೆ. |
೫ |
ಗಗನ ಮಂಡಲವನು ಕಣ್ಣೆತ್ತಿ ನೋಡು ನಿನಗೂ ಎಷ್ಟೋ ಎತ್ತರವಾದ ಮೇಘ ಮಾರ್ಗವನು ದಿಟ್ಟಿಸಿ ನೋಡು. |
೬ |
ನೀನು ಪಾಪಮಾಡದಿದ್ದರೆ ದೇವರಿಗೇನು ಮಾಡಿದಂತಾಯಿತು? ನಿನ್ನ ದ್ರೋಹಗಳು ಹೆಚ್ಚಿದರೆ ಅವರಿಗಾದ ನಷ್ಟವೇನು? |
೭ |
ನೀನು ಸಜ್ಜನನಾಗಿದ್ದರೆ ಅವರಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಅವರಿಗೆ ದೊರಕಿದ ಲಾಭ ಯಾವುದು? |
೮ |
ನಿನ್ನ ನೀಚತನದಿಂದ ನಿನ್ನಂಥವನಿಗೇ ನಷ್ಟ ನಿನ್ನ ಸಜ್ಜನಿಕೆಯಿಂದ ನರಜನ್ಮದವನಿಗೇ ಲಾಭ. |
೯ |
ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ. ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ. |
೧೦ |
ಆದರೆ ‘ನಮ್ಮನ್ನು ಸೃಷ್ಟಿಸಿದ ಕರ್ತನೆಲ್ಲಿ? ಕತ್ತಲಲ್ಲೂ ಕೀರ್ತನೆ ಹಾಡಬಲ್ಲವನೆಲ್ಲಿ? |
೧೧ |
ಕಾಡುಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನೀಯುವವನೆಲ್ಲಿ? ಆಕಾಶದ ಪಕ್ಷಿಗಳಿಗಿಂತ ಹೆಚ್ಚು ಬುದ್ದಿಕಲಿಸುವನೆಲ್ಲಿ? ಎನ್ನುವುದೇ ಇಲ್ಲ. |
೧೨ |
ಎಂತಲೆ ದುರುಳರ ಸೊಕ್ಕನ್ನು ಮುಂದಿಟ್ಟು ಗೋಳಿಟ್ಟರೂ ದೇವರು ಅವರಿಗೆ ಉತ್ತರ ಕೊಡುವುದಿಲ್ಲ. |
೧೩ |
ದೇವರು ಪೊಳ್ಳುಮಾತಿಗೆ ಕಿವಿಗೊಡನು ಸರ್ವಶಕ್ತನು ಅದಕ್ಕೆ ಎಂದಿಗೂ ಲಕ್ಷ್ಯಕೊಡನು. |
೧೪ |
ಇಂತಿರಲು ನೀನು, ‘ಆತ ಕಾಣನು, ನನ್ನ ವ್ಯಾಜ್ಯ ಆತನ ಮುಂದಿದೆ ಆತನಿಗಾಗಿ ಕಾದಿರುವೆ’ ಎಂದುಕೊಂಡರೂ ಆತ ಕೇಳಿಯಾನೆ? |
೧೫ |
‘ದೇವರು ಸಿಟ್ಟುಗೊಂಡು ಶಿಕ್ಷಿಸುವುದಿಲ್ಲ ದ್ರೋಹಗಳನ್ನು ಅಷ್ಟಾಗಿ ಗಣನೆಗೆ ತಂದುಕೊಳ್ಳುವುದಿಲ್ಲ’ |
೧೬ |
ಎಂದು ಹೇಳುತ್ತಾ ಯೋಬನು ಬಾಯಿತೆರೆಯುತ್ತಾನೆ ವ್ಯರ್ಥವಾಗಿ ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ ಬಹಳವಾಗಿ.”
|
Kannada Bible (KNCL) 2016 |
No Data |