A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೩೩“ಇಂತಿರಲು, ಯೋಬನೇ, ನನ್ನ ಮಾತುಗಳಿಗೆ ಕಿವಿಗೊಡು: ನಾನು ಹೇಳುವುದನ್ನೆಲ್ಲಾ ಗಮನವಿಟ್ಟು ಕೇಳು.
ಇಗೋ, ಮಾತಾಡಲು ತೊಡಗಿದ್ದೇನೆ ನನ್ನ ನಾಲಿಗೆ ಬಾಯಲ್ಲಿ ತುಡುಕುತ್ತಿದೆ.
ನನ್ನ ನುಡಿ ವ್ಯಕ್ತಪಡಿಸುತ್ತದೆ ಹೃದಯದ ಯಥಾರ್ಥತೆಯನು ನನ್ನ ತುಟಿ ನುಡಿಯುತ್ತದೆ ಸತ್ಯವೆಂದು ಅರಿತವುಗಳನು.
ನಾನು ನಿರ್ಮಿತನಾಗಿದ್ದೇನೆ ದೇವರಾತ್ಮನಿಂದ ನನಗೆ ಜೀವ ಉಂಟಾಗಿದೆ ಸರ್ವಶಕ್ತನ ಶ್ವಾಸದಿಂದ.
ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು ನನ್ನ ಎದುರಿನಲ್ಲೇ ನಿಂತು ವಾದಮಾಡು.
ನೋಡು, ನಾನು ಕೂಡ ಜೇಡಿಮಣ್ಣಿನಿಂದ ರೂಪಿತನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇರುವವನು.
ಆದ್ದರಿಂದ ನೀನು ನನಗೆ ಅಂಜಬೇಕಾಗಿಲ್ಲ ನನ್ನ ಕೈ ಬಲ ನಿನಗೆ ಹೊರೆಯಾಗಿರುವುದಿಲ್ಲ.
ನನಗೆ ಸ್ಪಷ್ಟವಾಗಿ ಕೇಳಿಸುವಂತೆ ನೀನು ಮಾತಾಡಿರುವೆ ನನ್ನ ಕಿವಿಗೆ ಬಿದ್ದ ಈ ಮಾತುಗಳು ನಿನ್ನವೇ ಆಗಿವೆ.
‘ನಾನು ಪರಿಶುದ್ಧನು, ನಿರ್ದೋಷಿ ನಾನು ನಿರ್ಮಲನು, ನಿರಪರಾಧಿ.
೧೦
‘ಆದರೂ ನನ್ನಲ್ಲಿ ದೇವರು ತಪ್ಪುಕಂಡುಹಿಡಿಯಬೇಕೆಂದಿದ್ದಾನೆ ನನ್ನನ್ನು ತನ್ನ ಶತ್ರುವೆಂದೇ ಭಾವಿಸಿದ್ದಾನೆ.
೧೧
‘ನನ್ನ ಕಾಲುಗಳಿಗೆ ಕೋಳ ತೊಡಿಸಿದ್ದಾನೆ ನನ್ನ ಎಲ್ಲ ಹಾದಿಗಳನ್ನು ಕಂಡುಕೊಂಡಿದ್ದಾನೆ.’
೧೨
ಹೀಗೆ ನೀನು ನುಡಿದದ್ದು ಸರಿಯಲ್ಲವೆಂಬುದೇ ನನ್ನ ಉತ್ತರ; ದೇವರು ಮನುಷ್ಯರಿಗಿಂತ ದೊಡ್ಡವನು ಎಂಬುದೇ ಇದಕ್ಕೆ ಆಧಾರ.
೧೩
ಆತ ನಿನ್ನ ಯಾವ ಮಾತಿಗೂ ಉತ್ತರ ಕೊಡಲಿಲ್ಲ ಎಂದ ಮಾತ್ರಕ್ಕೆ ನೀನು ಆತನೊಡನೆ ವ್ಯಾಜ್ಯವಾಡುವುದು ಸರಿಯಲ್ಲ.
೧೪
ದೇವರು ಪದೇ ಪದೇ ಮಾತನಾಡಿದರೂ ನರಮಾನವನು ಗ್ರಹಿಸಿಕೊಳ್ಳುವುದಿಲ್ಲ.
೧೫
ಮಾನವನಿಗೆ ಗಾಢನಿದ್ರೆ ಬಂದಾಗ ಹಾಸಿಗೆ ಮೇಲೆ ಮಲಗಿರುವಾಗ ಸ್ವಪ್ನ ಬಿದ್ದಾಗ, ಕನಸು ಕಾಣುವಾಗ.
೧೬
ದೇವರು ಅವನ ಕಿವಿಗಳನ್ನು ತೆರೆಯುತ್ತಾನೆ ಉಪದೇಶಮಾಡಿ ಎಚ್ಚರಿಕೆ ನೀಡುತ್ತಾನೆ.
೧೭
ಹೀಗೆ ದುಷ್ಕಾರ್ಯದಿಂದ ಮನುಷ್ಯನನ್ನು ತಪ್ಪಿಸುತ್ತಾನೆ ಅವನ ಅಹಂಕಾರ ಗರ್ವವನು ಅಡಗಿಸುತ್ತಾನೆ.
೧೮
ಅವನ ಆತ್ಮ ಅಧೋಲೋಕಕ್ಕಿಳಿಯದಂತೆ ತಡೆಯುತ್ತಾನೆ ಅವನ ಪ್ರಾಣ ಕತ್ತಿಗೆ ತುತ್ತಾಗದಂತೆ ಕಾಪಾಡುತ್ತಾನೆ.
೧೯
ಇದಲ್ಲದೆ, ಮಾನವ ವ್ಯಾಧಿಯಿಂದ ಹಾಸಿಗೆ ಹಿಡಿದಿರುವಾಗ ಅವನನ್ನು ತಿದ್ದುತ್ತಾನೆ ಅವನ ದೇಹ ನರಳುತ್ತಿರುವಾಗ.
೨೦
ಅವನಿಗೆ ಆಹಾರವೂ ಬೇಸರವಾಗುವುದು ಮೃಷ್ಟಾನ್ನವೂ ಅಸಹ್ಯವಾಗುವುದು.
೨೧
ಅವನ ಮಾಂಸಖಂಡ ಕರಗಿಹೋಗುವುದು ಅವನ ಅಸ್ಥಿಪಂಜರ ಎದ್ದು ಕಾಣುವುದು.
೨೨
ಅವನ ಆತ್ಮ ಅಧೋಲೋಕವನ್ನು ಸಮೀಪಿಸುವುದು ಅವನ ಪ್ರಾಣ ಮೃತ್ಯುದೂತರಿಗೆ ಹತ್ತಿರವಾಗುವುದು.
೨೩
ಆದರೆ ಸಹಸ್ರ ದೂತರಲ್ಲೊಬ್ಬ ಮಧ್ಯಸ್ಥನಾಗಿ ಅವನ ಪಕ್ಕದಲ್ಲಿ ನಿಂತು ಅವನ ಕರ್ತವ್ಯವೇನೆಂದು ತಿಳಿಸಿ,
೨೪
‘ಇವನನ್ನು ಕಾಪಾಡಿ; ಅಧೋಲೋಕಕ್ಕೆ ತಳ್ಳಬೇಡಿ, ಬಿಡುಗಡೆ ಬೇಕಾದ ಈಡು ಇದೋ ಇಲ್ಲಿ!’ ಎಂದು ಹೇಳಿದರೆ,
೨೫
ಅವನ ದೇಹ ಬಾಲ್ಯಕ್ಕಿಂತಲೂ ಕೋಮಲವಾಗುವುದು ಎಳೆತನದ ಚೈತನ್ಯವನ್ನು ಮತ್ತೆ ಅನುಭವಿಸುವನು.
೨೬
ಆಗ ಅವನು ದೇವರಿಗೆ ಪ್ರಾರ್ಥನೆ ಮಾಡುವನು ಆತನ ಒಲುಮೆಗೆ ಪಾತ್ರನಾಗುವನು. ಹರ್ಷೋದ್ಗಾರದಿಂದ ಆತನ ಸನ್ನಿಧಿಗೆ ಬರುವನು ಮತ್ತೆ ಆತನಿಂದ ಸತ್ಯವಂತ ಎನಿಸಿಕೊಳ್ಳುವನು.
೨೭
ಆಗ ಅವನು ಜನರ ಮುಂದೆ ಈ ಪರಿ ಹಾಡುವನು: ‘ಪಾಪ ಮಾಡಿದೆ; ಸನ್ಮಾರ್ಗ ಬಿಟ್ಟು ನಡೆದೆ ಆದರೂ ದಂಡಿಸಲಿಲ್ಲ ದೇವರು ನನ್ನ ಪಾಪಕ್ಕೆ ತಕ್ಕಂತೆ.
೨೮
ವಿಮೋಚಿಸಿದ್ದಾನೆ ನನ್ನ ಆತ್ಮ ಅಧೋಲೋಕ ಸೇರದಂತೆ ನನ್ನ ಜೀವವು ಜ್ಯೋತಿಯನು ಕಾಣುವಂತೆ.’
೨೯
ಇದನ್ನೆಲ್ಲ ನೀಡುವನು ಆ ದೇವರೇ ಇಮ್ಮಡಿ ಮುಮ್ಮಡಿಯಾಗಿ ನೀಡುವನು ಮನುಜನಿಗೆ.
೩೦
ಅವನ ಆತ್ಮವನು ಅಧೋಲೋಕದಿಂದ ಹಿಂದಿರುಗಿಸುವನು ಜೀವಲೋಕದ ಬೆಳಕನು ಅನುಭವಿಸುವಂತೆ ಮಾಡುವನು.
೩೧
ಯೋಬನೇ, ನನ್ನ ಮಾತಿಗೆ ಕಿವಿಗೊಡು, ಮೌನದಿಂದ ಕೇಳು, ನಾನೇ ಮಾತಾಡಲಿರುವೆ:
೩೨
ಏನಾದರೂ ಹೇಳಬೇಕೆಂದಿದ್ದರೆ ಹೇಳು, ಉತ್ತರಕೊಡು ನನಗೆ, ನೀನು ಸತ್ಯವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಬಯಕೆ.
೩೩
ಇಲ್ಲವಾದರೆ ಸುಮ್ಮನಿದ್ದು ಕಿವಿಗೊಡು ನಿನಗೆ ಬೋಧಿಸುವೆನು ಸುಜ್ಞಾನವನು.”