A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಯೋಬನ ೩೦“ಈಗಲಾದರೊ ನನಗಿಂತ ಚಿಕ್ಕವರು ನನ್ನನ್ನು ಪರಿಹಾಸ್ಯಮಾಡುತ್ತಾರೆ. ಇವರ ಹೆತ್ತವರು ನನ್ನ ಮುಂದೆ. ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆ.
ಅವರ ಭುಜಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಪುಷ್ಟಿಯು ಕುಗ್ಗಿಹೋಗಿತ್ತು!
ಕೊರತೆಯಿಂದ, ಬರದಿಂದ ಅವರು ಸೊರಗಿಹೋಗಿದ್ದರು ನಿನ್ನೆಯವರೆಗೂ ಹಾಳುಬೀಳಾದ ನೆಲವನ್ನು ನೆಕ್ಕುತ್ತಿದ್ದರು.
ಚಕ್ಕೋತ ಸೊಪ್ಪುಗಳನ್ನು ಪೊದೆಗಳಿಂದ ಕಿತ್ತು ತಿನ್ನುತ್ತಿದ್ದರು ಜಾಲಿಯ ಬೇರೇ ಅವರಿಗೆ ಆಹಾರವಾಗಿತ್ತು.
ಜನರು ಅವರನ್ನು ತಳ್ಳಿಬಿಟ್ಟಿದ್ದರು ಕಳ್ಳರನ್ನೋ ಎಂಬಂತೆ ಕೂಗಿ ಅಟ್ಟಿಬಿಟ್ಟಿದ್ದರು.
ವಾಸಮಾಡುತ್ತಿದ್ದರವರು ಭೀಕರ ಡೊಂಗರುಗಳಲಿ, ನೆಲದ ಬಿಲಗಳಲಿ, ಬಂಡೆಗಳ ಸಂದುಗಳಲ್ಲಿ.
ಅರಚಿಕೊಳ್ಳುತ್ತಿದ್ದರು ಪೊದೆಗಳ ನಡುವೆ ಕೂಡಿಕೊಳ್ಳುತ್ತಿದ್ದರು ಮುಳ್ಳುಗಿಡಗಳ ಕೆಳಗೆ.
ಮೂರ್ಖರ ಮಕ್ಕಳು, ನೀಚ ಜಾತಿಯವರು ನಾಡಿನಿಂದ ಹೊರದೂಡಲ್ಪಟ್ಟವರು ಅವರಾಗಿದ್ದರು.
ಅಂಥವರ ಲಾವಣಿಗೆ ನಾನೀಗ ಗುರಿಯಾದೆ ಅವರ ಕಟ್ಟುಕತೆಗಳಿಗೆ ಅಡ್ಡಹೆಸರಾದೆ.
೧೦
ನನಗೆ ಅಸಹ್ಯಪಟ್ಟು ದೂರಸರಿಯುತ್ತಾರೆ ನನ್ನ ಮೇಲೆ ಉಗುಳುವುದಕ್ಕೂ ಹಿಂಜರಿಯದಿದ್ದಾರೆ.
೧೧
ದೇವರು ನನ್ನ ಬಿಲ್ಲನು ಸಡಿಲಗೊಳಿಸಿ ಪೆಟ್ಟಿಗೀಡಾಗಿಸಿದ್ದಾರೆ ಅವರೋ ಕಡಿವಾಣವಿಲ್ಲದ ಕುದುರೆಗಳಂತೆ ನನ್ನ ಮುಂದಿದ್ದಾರೆ.
೧೨
ಕಲಹಗಾರರು ಎದ್ದಿದ್ದಾರೆ ನನ್ನ ಬಲಗಡೆಗೆ ನನ್ನ ಕಾಲುಗಳನು ನೂಕುತ್ತಿದ್ದರೆ ಹಿಂದಕೆ ಸಂಚುಹೂಡುತ್ತಿದ್ದಾರೆ ನನ್ನನ್ನು ನಾಶಮಾಡಲಿಕೆ.
೧೩
ನನ್ನ ಹಾದಿಯನು ಕಡಿದುಹಾಕಿದ್ದಾರೆ ನನ್ನ ಉಪದ್ರವವನ್ನು ಹೆಚ್ಚಿಸಿದ್ದಾರೆ ಅವರನ್ನು ತಡೆಯಲು ಯಾರೂ ಇಲ್ಲದಿದ್ದಾರೆ.
೧೪
ಅಗಲವಾದ ಕೋಟೆಬಿರುಕುಗಳಲಿ ನುಗ್ಗಿಬರುತ್ತಿದ್ದಾರೆ ಹಾಳುಬೀಳಿನಲಿ ನಿಂತಿರುವ ನನ್ನ ಮೇಲೆ ಉರುಳಿಬೀಳಲಿದ್ದಾರೆ.
೧೫
ಅಡ್ಡಿ ಆತಂಕಗಳು ನನ್ನನು ಸುತ್ತುವರೆದಿವೆ ನನ್ನ ಮಾನಮರ್ಯಾದೆ ತೂರಿಹೋಗುತ್ತಿದೆ ಗಾಳಿಯಂತೆ ನನ್ನ ಯೋಗಕ್ಷೇಮ ತೇಲಿಹೋಗುತ್ತಿದೆ ಮೋಡದಂತೆ.
೧೬
ನನ್ನ ಮನ ಕರಗಿ ನೀರಾಗಿದೆ ಬಾಧೆಗಳು ನನ್ನನು ಬಿಗಿಹಿಡಿದಿವೆ.
೧೭
ಇರುಳು ನನ್ನೆಲುಬುಗಳನು ಕೊರೆದು ಕೀಳುತ್ತಿದೆ ಸಂಕಟಗಳು ನನ್ನನು ಎಡೆಬಿಡದೆ ತಿನ್ನುತ್ತಿವೆ.
೧೮
ನನ್ನ ಬಟ್ಟೆಯನು ಗಟ್ಟಿಯಾಗಿ ಹಿಡಿದಿದ್ದಾರೆ ಕೊರಳಪಟ್ಟಿಯಂತೆ ಹಿಸುಕಿ ಹಿಂಡುತ್ತಿದ್ದಾರೆ.
೧೯
ನನ್ನನು ಕೆಸರಿನಲ್ಲಿ ಕೆಡವಿದ್ದಾರೆ ನನ್ನನು ಭಸ್ಮಕ್ಕೆ ಸಮಾನನನ್ನಾಗಿಸಿದ್ದಾರೆ.
೨೦
ದೇವರೇ, ನಾನು ಮೊರೆಯಿಟ್ಟರೂ ಉತ್ತರಕೊಡದಿರುವೆ ನಾನೆದ್ದು ನಿಂತರೂ ನೀನು ಸುಮ್ಮನೆ ನೋಡುತ್ತಿರುವೆ.
೨೧
ನನಗೆ ನೀನು ಕ್ರೂರನಾಗಿಬಿಟ್ಟಿರುವೆ ನಿನ್ನ ಭುಜಬಲದಿಂದ ಹಿಂಸಿಸುತ್ತಿರುವೆ.
೨೨
ನನ್ನನು ಎತ್ತಿ ತೂರಿಬಿಟ್ಟಿರುವೆ ಬಿರುಗಾಳಿಗೆ ತೊಳಲಾಡುತ್ತಿರುವೆನು ತುಫಾನಿನ ಆರ್ಭಟಕ್ಕೆ.
೨೩
ನನ್ನನು ಮರಣಕ್ಕೆ ಗುರಿಮಾಡುವೆಯೆಂದು ತಿಳಿದಿದೆ ಸಮಸ್ತಜೀವಿಗಳು ತೆರಳುವ ಮಂದಿರಕ್ಕೆ ಸೇರಿಸುವೆಯೆಂದು ಗೊತ್ತೇ ಇದೆ.
೨೪
ಆದರೂ ಕೇಡಿಗೆ ಈಡಾದವನು ಕೈಚಾಚುವುದಿಲ್ಲವೆ ಸಹಾಯಕ್ಕಾಗಿ? ಆಪತ್ತಿಗೆ ಗುರಿಯಾದವನು ಕೂಗಿಕೊಳ್ಳುವುದಿಲ್ಲವೆ ನೆರವಿಗಾಗಿ?
೨೫
ಕಷ್ಟಾನುಭವಿಯನು ಕಂಡು ನಾನು ಕಣ್ಣೀರಿಡಲಿಲ್ಲವೆ? ದಟ್ಟದರಿದ್ರರಿಗೋಸ್ಕರ ನಾನು ದುಃಖಪಡಲಿಲ್ಲವೆ?
೨೬
ನಾನು ಒಳಿತನು ನಿರೀಕ್ಷಿಸಿದಾಗ ಕೇಡು ಬಂದೊದಗಿತು ಬೆಳಕನು ಎದುರು ನೋಡುವಾಗ ಕತ್ತಲು ಕವಿಯಿತು.
೨೭
ಕರುಳು ಕುದಿಯುತ್ತಿದೆ ಅಶಾಂತಿಯಿಂದ ಬಂದೊದಗಿದೆ ನನಗೆ ಬಾಧೆಯ ದಿನ.
೨೮
ಸಂತೈಸುವ ಸೂರ್ಯನಿಲ್ಲದೆ ಅಲೆಯುತ್ತಿರುವೆ ಮಂಕು ಕವಿದು ಅಂಗಲಾಚುತ್ತಿರುವೆ ಸಭೆಯ ಮಧ್ಯೆ ನಿಂತು.
೨೯
ನರಿಗಳಿಗೆ ಸಹೋದರನಾಗಿರುವೆ ಗೂಬೆಗಳಿಗೆ ನಾನು ಗೆಳೆಯನಾಗಿರುವೆ.
೩೦
ನನ್ನ ಚರ್ಮ ಉದುರುತ್ತಿದೆ ಕರ್ರಗಾಗಿ ನನ್ನೆಲುಬು ಉರಿಯುತ್ತಿದೆ ತಾಪಕ್ಕೊಳಗಾಗಿ.
೩೧
ಅಳುವ ಧ್ವನಿ ಕೇಳಿಸುತ್ತಿದೆ ನನ್ನ ಕೊಳಲಿನಲಿ ಗೋಳಾಟದ ಸ್ವರವಿದೆ ನನ್ನ ಕಿನ್ನರಿಯಲಿ.”